

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸೋಮವಾರ ಸಂಸತ್ ಭವನದತ್ತ ಸಾಗಿದರು. ಇವರನ್ನು ತಡೆಯಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಹೋರಾಟವು ಹಿಂದಿನ ಬೃಹತ್ ಚಳವಳಿಗಳನ್ನು ನೆನಪಿಸಿದೆ.
ಹೌದು, ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ದೇಶದ ಶಕ್ತಿಕೇಂದ್ರವಾದ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಹಾಗೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಹಲವು ಬೃಹತ್ ಚಳವಳಿಗಳು ನಡೆದಿವೆ. ಇತಿಹಾಸದಲ್ಲಿ ದಾಖಲಾದ ಇಂತಹ ಪ್ರಮುಖ ‘ಸಂಸತ್ ಚಲೋ’ ಪ್ರತಿಭಟನೆಗಳು ಹಾಗೂ ಅವುಗಳು ಬೀರಿದ ಪರಿಣಾಮಗಳ ವಿವರ ಇಲ್ಲಿದೆ. ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದ ಜೀವನಾಡಿಯಾಗಿರುವ ಸಂಸತ್ ಭವನವು ದೇಶದ ಶಕ್ತಿಕೇಂದ್ರವಾಗಿದೆ. ಸಂಸತ್ತು ಜನಪ್ರತಿನಿಧಿಗಳು ಕಾಯ್ದೆ-ಕಾನೂನುಗಳನ್ನು ರೂಪಿಸುವ ಸ್ಥಳ ಮಾತ್ರವಲ್ಲ, ಜನರ ಕಷ್ಟ-ನಷ್ಟಗಳಿಗೆ ಮತ್ತು ಹಕ್ಕುಗಳಿಗೆ ಧ್ವನಿಯಾಗುವ ವೇದಿಕೆಯೂ ಹೌದು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರದ ನಿರ್ಧಾರಗಳು, ಕೃಷಿ ನೀತಿಗಳು ಅಥವಾ ಆಡಳಿತದ ಧೋರಣೆಗಳು ಜನವಿರೋಧಿಯಾದಾಗ, ಸಾವಿರಾರು ಜನರು ಹಾಗೂ ರೈತರು ತಮ್ಮ ಹಕ್ಕುಗಳಿಗಾಗಿ ದೇಶದ ರಾಜಧಾನಿ ದೆಹಲಿಗೆ ಲಗ್ಗೆ ಇಟ್ಟು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸುವ ಮೂಲಕ ಬೃಹತ್ ಚಳವಳಿಗಳನ್ನು ನಡೆಸಿದ್ದಾರೆ. ಸಂಸತ್ ಭವನಕ್ಕೆ ಮುತ್ತಿಗೆ ಹಾಕುವುದು ಅಥವಾ ಅದರ ಎದುರು ಪ್ರತಿಭಟಿಸುವುದು ಎಂದರೆ ಅದು ಕೇವಲ ಸರ್ಕಾರದ ವಿರುದ್ಧದ ಶಕ್ತಿ ಪ್ರದರ್ಶನವಲ್ಲ; ಬದಲಾಗಿ ಅದು ಜನಸಾಮಾನ್ಯರಿಗೆ ತಮ್ಮ ಸಾರ್ವಭೌಮತೆಯನ್ನು ನೆನಪಿಸುವ ಪ್ರಜಾಸತ್ತಾತ್ಮಕ ಹಕ್ಕು. ಇತಿಹಾಸದಲ್ಲಿ ನಡೆದ ಇಂತಹ ಬೃಹತ್ ಚಳವಳಿಗಳು ಸರ್ಕಾರಗಳು ಎಷ್ಟೇ ಬಲಶಾಲಿಯಾಗಿದ್ದರೂ, ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯವೇ ಅಂತಿಮ ಎಂಬುದನ್ನು ಮರಳಿ ಮರಳಿ ನಿರೂಪಿಸಿವೆ.
ಸ್ವಾತಂತ್ರ್ಯೋತ್ತರ ಭಾರತದ ಸಂಸತ್ ಭವನದ ಇತಿಹಾಸದಲ್ಲಿ ನಡೆದ ಮೊದಲ ಬೃಹತ್ ಮತ್ತು ಧಾರ್ವಿುಕ ಸ್ವರೂಪದ ಮುತ್ತಿಗೆ ಇದು. ಭಾರತದ ಸಂವಿಧಾನದ ಮಾರ್ಗದರ್ಶಿ ಸೂತ್ರಗಳಲ್ಲಿ ಗೋ ತಳಿಯ ಸಂರಕ್ಷಣೆಯ ಉಲ್ಲೇಖವಿದ್ದರೂ, ಇಡೀ ದೇಶಾದ್ಯಂತ ಸಂಪೂರ್ಣ ಗೋಹತ್ಯೆ ನಿಷೇಧಿಸುವ ಕಟ್ಟುನಿಟ್ಟಿನ ಕಾನೂನು ಇರಲಿಲ್ಲ. ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ 1 ಲಕ್ಷಕ್ಕೂ ಹೆಚ್ಚು ಸಾಧು-ಸಂತರು ಮತ್ತು ಅವರ ಬೆಂಬಲಿಗರು 1966ರ ನವೆಂಬರ್ 7ರಂದು ಸಂಸತ್ ಭವನದತ್ತ ಬೃಹತ್ ಮೆರವಣಿಗೆ ನಡೆಸಿದರು. ಪರಿಣಾಮ, ಸಂಸತ್ತಿನ ಹೊರಗೆ ಪರಿಸ್ಥಿತಿ ತೀವ್ರ ಹಿಂಸಾಚಾರಕ್ಕೆ ತಿರುಗಿತು. ಭದ್ರತಾ ಸಿಬ್ಬಂದಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ಗುಂಡಿನ ದಾಳಿ ನಡೆಸಿದರು. ಈ ದುರಂತದಲ್ಲಿ 7 ಜನರು ಪ್ರಾಣ ಕಳೆದುಕೊಂಡರೆ, ನೂರಾರು ಮಂದಿ ತೀವ್ರವಾಗಿ ಗಾಯಗೊಂಡರು. ಈ ಭದ್ರತಾ ಮತ್ತು ರಾಜಕೀಯ ಹಿನ್ನಡೆಯ ಹೊಣೆ ಹೊತ್ತು ಆಗಿನ ಕೇಂದ್ರ ಗೃಹ ಸಚಿವರಾಗಿದ್ದ ಗುಲ್ಜಾರಿಲಾಲ್ ನಂದಾ ರಾಜೀನಾಮೆ ನೀಡಿದರು.
ಈ ಹೋರಾಟದಲ್ಲಿ ಆರ್ಯ ಸಮಾಜ, ಜನಸಂಘ (ಇಂದಿನ ಬಿಜೆಪಿ), ಹಿಂದೂ ಮಹಾಸಭಾ, ಸನಾತನ ಧರ್ಮ ಸಭಾ ಮತ್ತು ದೇಶದ ನಾನಾ ಭಾಗಗಳ ಸಂತರು, ಶಂಕರಾಚಾರ್ಯರು ಹಾಗೂ ಸಂನ್ಯಾಸಿಗಳು ಕೈಜೋಡಿಸಿದ್ದರು. ಹಿಂಸಾಚಾರದ ಬಳಿಕ, ಸ್ವಾತಂತ್ರ್ಯ ನಂತರ ದೆಹಲಿಯಲ್ಲಿ ಪ್ರಥಮ ಬಾರಿಗೆ ಮಿಲಿಟರಿಯನ್ನು ರಸ್ತೆಗೆ ಇಳಿಸಲಾಯಿತು ಹಾಗೂ ಇಡೀ ನಗರದಲ್ಲಿ 48 ಗಂಟೆಗಳ ಕಾಲ ಕರ್ಫ್ಯೂ ವಿಧಿಸಲಾಯಿತು. ಪ್ರತಿಭಟನಾಕಾರರ ಬೇಡಿಕೆಗಳನ್ನು ಪರಿಶೀಲಿಸಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಕೆ. ಸರ್ಕಾರ್ ಅವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿದರು.
ಭಾರತೀಯ ಕೃಷಿ ಹೋರಾಟಗಳ ಇತಿಹಾಸದಲ್ಲಿ ಪ್ರಭಾವಶಾಲಿ ಮತ್ತು ಶಿಸ್ತುಬದ್ಧ ಹೋರಾಟವೆಂದರೆ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಡೆಸಿದ ಹೋರಾಟ. 1988ರ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ 1 ಲಕ್ಷಕ್ಕೂ ಹೆಚ್ಚು ರೈತರು ಟ್ರ್ಯಾಕ್ಟರ್, ಎತ್ತು-ಬಂಡಿ, ಅಡುಗೆ ಸಾಮಗ್ರಿಗಳೊಂದಿಗೆ ದೆಹಲಿಯ ಬೋಟ್ ಕ್ಲಬ್ ಮತ್ತು ಸಂಸತ್ತಿನ ಸುತ್ತಮುತ್ತಲ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದರು. ದೆಹಲಿಯ ಕೇಂದ್ರ ಭಾಗವು ಹಲವು ದಿನಗಳ ಕಾಲ ‘ತಾತ್ಕಾಲಿಕ ಗ್ರಾಮ’ದಂತಾಯಿತು. ವಿದ್ಯುತ್ ದರ ಕಡಿತ, ಬೆಳೆಗಳಿಗೆ ಬೆಂಬಲ ಬೆಲೆ, ಕಬ್ಬಿನ ಬಾಕಿ ಪಾವತಿ ಮತ್ತು ರೈತರ ಸಾಲಮನ್ನಾಗಾಗಿ ಆಗ್ರಹಿಸಿ ಈ ಪ್ರತಿಭಟನೆ ನಡೆಯಿತು. ಸರ್ಕಾರದ ಮೇಲೆ ತೀವ್ರ ಒತ್ತಡ ಬಿದ್ದಿದ್ದರಿಂದ, ಆಗಿನ ರಾಜೀವ್ ಗಾಂಧಿ ಸರ್ಕಾರವು ರೈತರ ಪ್ರಮುಖ ಬೇಡಿಕೆಗಳನ್ನು ಪುರಸ್ಕರಿಸಿ, ವಿದ್ಯುತ್ ದರ ಕಡಿತ ಮತ್ತು ಬೆಳೆ ಬೆಲೆ ಪರಿಷ್ಕರಣೆಗೆ ಒಪ್ಪಿಗೆ ನೀಡಿತು.
ಜಯಪ್ರಕಾಶ್ ನಾರಾಯಣ್ (ಜೆಪಿ) ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರವಿರೋಧಿ ಚಳವಳಿಯ ಭಾಗವಾಗಿ 1974ರ ಮಾರ್ಚ್ 6ರಂದು ಸಾವಿರಾರು ಜನರು ಸಂಸತ್ತಿನತ್ತ ಮೆರವಣಿಗೆ ತೆರಳಲು ಯತ್ನಿಸಿದರು. ಪೊಲೀಸರು ಹಲವೆಡೆ ಭಾರಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಮಾರ್ಗಮಧ್ಯದಲ್ಲೇ ಪ್ರತಿಭಟನಾಕಾರರನ್ನು ತಡೆದರು ಮತ್ತು ಪ್ರಮುಖ ನಾಯಕರನ್ನು ಬಂಧಿಸಿದರು.
ಸಾಮಾಜಿಕ ಮೀಸಲಾತಿ ಜಾರಿಯ ವಿರುದ್ಧ ಭಾರತದ ಯುವಜನತೆ ಮತ್ತು ವಿದ್ಯಾರ್ಥಿ ಸಮುದಾಯ ನಡೆಸಿದ ಸುದೀರ್ಘ ಹೋರಾಟವಿದು. ಆಗಿನ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡ 27 ಮೀಸಲಾತಿ ನೀಡುವ ಮಂಡಲ್ ಕಮಿಷನ್ ವರದಿಯನ್ನು ಜಾರಿಗೆ ತರಲು ನಿರ್ಧರಿಸಿತು. ಈ ನೀತಿಯನ್ನು ವಿರೋಧಿಸಿ ದೆಹಲಿ ವಿಶ್ವವಿದ್ಯಾಲಯ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿಗಳು ರಸ್ತೆಗಿಳಿದರು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಹೋರಾಟವು ಭಾವುಕ ತಿರುವು ಪಡೆದುಕೊಂಡು, ದೇಶಾದ್ಯಂತ ಹಲವು ವಿದ್ಯಾರ್ಥಿಗಳು ಆತ್ಮದಹನ ಮಾಡಿಕೊಂಡ ಘಟನೆಗಳು ನಡೆದವು. ಈ ಬೃಹತ್ ಜನಾಕ್ರೋಶವು ದೇಶದ ರಾಜಕೀಯ ಸಮೀಕರಣಗಳನ್ನೇ ಬದಲಾಯಿಸಿತು. ರಾಜಕೀಯವಾಗಿ ವಿ.ಪಿ.ಸಿಂಗ್ ಸರ್ಕಾರವು ಬೆಂಬಲವನ್ನು ಕಳೆದುಕೊಂಡು ಪತನಗೊಳ್ಳಲು ಈ ಚಳವಳಿಯೂ ಪ್ರಮುಖ ಕಾರಣವಾಯಿತು.
ಇತ್ತೀಚಿನ ದಶಕಗಳಲ್ಲಿ ಜನ ಸಾಮಾನ್ಯರನ್ನು, ಮಧ್ಯಮ ವರ್ಗವನ್ನು ಮತ್ತು ಯುವ ಜನರನ್ನು ದೊಡ್ಡ ಮಟ್ಟ ದಲ್ಲಿ ತಲುಪಿದ ಚಳವಳಿ ಇದು. ಸಾಲು ಸಾಲು ಭ್ರಷ್ಟಾಚಾರದ ಆರೋಪಗಳಿಂದ ಕಂಗೆಟ್ಟಿದ್ದ ದೇಶದಲ್ಲಿ, ಬಲವಾದ ‘ಜನ್ ಲೋಕಪಾಲ್’ ವಿಧೇಯಕವನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ 2011ರಲ್ಲಿ ಹೋರಾಟ ಆರಂಭಿಸಿದರು. ದೆಹಲಿಯ ಜಂತರ್ ಮಂತರ್ ಮತ್ತು ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದರು. ದೇಶದ ವಿವಿಧ ಭಾಗಗಳ ಜನರು ದೆಹಲಿಗೆ ಆಗಮಿಸಿ ‘ಸಂಸತ್ ಚಲೋ’ ಜಾಥಾ ನಡೆಸಲು ಯತ್ನಿಸಿದರು. ಇಂಡಿಯಾ ಅಗೇನ್ಸ್ಟ್ ಕರಪ್ಷನ್ (ಐಎಸಿ) ಚಳವಳಿಯು ಸರ್ಕಾರದ ಬಾಗಿಲನ್ನು ತಟ್ಟಿತು. ಈ ಆಂದೋಲನವು ಸಂಸತ್ತನ್ನು ಜನ್ ಲೋಕಪಾಲ್ ಮಸೂದೆಯ ಕುರಿತು ವಿಶೇಷ ಚರ್ಚೆ ನಡೆಸುವಂತೆ ಮಾಡಿತು. ಅಂತಿಮವಾಗಿ ‘ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ’ ಸಂಸತ್ತಿನಲ್ಲಿ ಅಂಗೀಕಾರವಾಯಿತು. ಅಷ್ಟೇ ಅಲ್ಲದೆ, ಈ ಹೋರಾಟದ ಗರ್ಭದಿಂದ ಆಮ್ ಆದ್ಮಿ ಪಾರ್ಟಿ (ಎಎಪಿ)ಯಂತಹ ಹೊಸ ರಾಜಕೀಯ ಪಕ್ಷವೂ ಹುಟ್ಟಿಕೊಂಡಿತು.
ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಹೊಸ ಕೃಷಿ ಕಾಯ್ದೆ ಗಳನ್ನು ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಾತ್ಮಕ ಗ್ಯಾರಂಟಿ ನೀಡಬೇಕೆಂದು ಆಗ್ರ ಹಿಸಿ ಹೋರಾಟ ಪ್ರಾರಂಭ ವಾಯಿತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿ ದೇಶದ ನಾನಾ ಭಾಗಗಳ ಲಕ್ಷಾಂತರ ರೈತರು ‘ದೆಹಲಿ ಚಲೋ’ ಕರೆ ನೀಡಿದರು. ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರಗಳಲ್ಲಿ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ (378 ದಿನಗಳು) ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಬಿಡಾರ ಹೂಡಿದರು. ಸಂಸತ್ತಿನ ಅಧಿವೇಶನ ನಡೆಯುತ್ತಿದ್ದಾಗ ‘ರೈತ ಸಂಸತ್’ ನಡೆಸಿ ಧ್ವನಿ ಎತ್ತಿದರು. ರೈತರ ಸುದೀರ್ಘ ಹಾಗೂ ಅಹಿಂಸಾತ್ಮಕ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವು ಅಂತಿಮವಾಗಿ ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು.
ಭಾರತೀಯ ಕುಸ್ತಿ ಫೆಡರೇಶನ್ನ ಅಂದಿನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಧರಣಿ ನಡೆಸುತ್ತಿದ್ದ ಅಗ್ರಪಂಕ್ತಿ ಕುಸ್ತಿಪಟುಗಳು ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು (2023ರ ಮೇ 28) ಆ ಕಡೆಗೆ ಮೆರವಣಿಗೆ ನಡೆಸಿದರು. ಭದ್ರತಾ ಪಡೆಗಳು ಮಾರ್ಗಮಧ್ಯದಲ್ಲೇ ಪ್ರತಿಭಟನಾನಿರತರನ್ನು ತಡೆದರು.