

ನವದೆಹಲಿ: ದೇಶದ ಮಿಲಿಟರಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಇಲಾಖೆಯ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಭೆ 79,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಿಲಿಟರಿ ಸಾಮಗ್ರಿ ಹಾಗೂ ಶಸ್ತಾಸ್ತ್ರಗಳ ಖರೀದಿಗೆ ಹಸಿರು ನಿಶಾನೆ ತೋರಿದೆ.
200 ಕಿ.ಮೀ. ವ್ಯಾಪ್ತಿಯ ಅಸ್ತ್ರ ಎಂಕೆ2 ಏರ್ ಟು ಏರ್ ಕ್ಷಿಪಣಿ ಮತ್ತು ಪಿನಾಕಾ ಮಲ್ಟಿ ಬ್ಯಾರೆಲ್ ಲಾಂಚರ್ ವ್ಯವಸ್ಥೆಗೆ (ಎಂಆರ್ಎಲ್ಎಸ್) 120 ಕಿ.ಮೀ. ವ್ಯಾಪ್ತಿಯ ನಿರ್ದೇಶಿತ ರಾಕೆಟ್ಗಳ ಖರೀದಿಯೂ ಈ ಪ್ರಸ್ತಾಪನೆಯಲ್ಲಿ ಸೇರಿವೆ. ಸಿಂಗ್ ನೇತೃತ್ವದಲ್ಲಿ ನಡೆದ ಮಂಡಳಿಯ ವರ್ಷಾಂತ್ಯದ ಸಭೆ, ಮೂರೂ ಪಡೆಗಳ ಪ್ರಸ್ತಾಪನೆಗಳಿಗೆ ಅಗತ್ಯದ ಅಂಗೀಕಾರ (ಅಕ್ಸೆಪ್ಟೆನ್ಸ್ ಆಫ್ ನೆಸೆಸಿಟಿ) ಮುದ್ರೆಯೊತ್ತಿತು. ಕೆಳ ಮಟ್ಟದ ರೇಡಾರ್ಗಳು, ಸಮಗ್ರ ಡ್ರೋನ್ ಪತ್ತೆ ಮತ್ತು ಪ್ರತಿಬಂಧಕ ವ್ಯವಸ್ಥೆ ಎಂಕೆ2 ಖರೀದಿಗೂ ಸಭೆ ಅನುಮತಿ ನೀಡಿತು. 2,500 ಕೋಟಿ ಸಿಂಹಪಾಲು: ದೂರ ವ್ಯಾಪ್ತಿ ನಿರ್ದೇಶಿತ ರಾಕೆಟ್ ಅಸ್ತŠಗಳ ವೆಚ್ಚವೇ ಸುಮಾರು 2,500 ಕೋಟಿ ಆಗಿರುತ್ತದೆ.
ಸ್ವಯಂಚಾಲಿತ ಟೇಕಾಫ್ ಲ್ಯಾಂಡಿಂಗ್ ರೆಕಾರ್ಡಿಂಗ್ ವ್ಯವಸ್ಥೆ, ಅಸ್ತ್ರ ಎಂಕೆ2 ಕ್ಷಿಪಣಿಗಳು, ಫುಲ್ ಮಿಷನ್ ಸ್ಟಿಮ್ಯುಲೇಟರ್ ಮತ್ತು ಸ್ಪೈಸ್1000 ದೂರವ್ಯಾಪ್ತಿಯ ನಿರ್ದೇಶಿತ ಕಿಟ್ ಇತ್ಯಾದಿ. ಬಾಲಾಕೋಟ್ನಲ್ಲಿ 2019ರ ಕಾರ್ಯåಚರಣೆಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಸ್ಪೈಸ್ 1000 ಬಳಸಿತ್ತು.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ಡಿಆರ್ಡಿಒ ಸೋಮವಾರ ನಡೆಸಿದ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ ಪರೀಕ್ಷೆ ಯಶಸ್ವಿಯಾಯಿತು. 120 ಕಿ.ಮೀ. ವ್ಯಾಪ್ತಿ ಹೊಂದಿರುವ ಈ ರಾಕೆಟ್ ನಿಖರವಾಗಿ ಗುರಿ ತಲುಪಿದೆ. ಪಿನಾಕಾ ಲಾಂಚರ್ನಿಂದ ರಾಕೆಟ್ ಉಡಾವಣೆ ಮಾಡಲಾಗಿದೆ.
ಪಿನಾಕಾ ನಿರ್ದೇಶಿತ ರಾಕೆಟ್ಗಳ ಪ್ರಸ್ತುತ ವ್ಯಾಪ್ತಿ 80 ಕಿ.ಮೀ. ಆಗಿದ್ದು ಹೊಸದಾಗಿ ಖರೀದಿಸುವ ರಾಕೆಟ್ನ ವ್ಯಾಪ್ತಿ 120 ಕಿ.ಮೀ. ಆಗಿರುತ್ತದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇದನ್ನು ಅಭಿವೃದ್ಧಿಪಡಿಸುತ್ತಿದೆ. 2026ರಲ್ಲಿ ಇದರ ಮೊದಲ ಪರೀಕ್ಷೆ ನಡೆಯಲಿದೆ. ಲಾಯ್ಟರ್ ಯುದ್ಧ ಸಾಮಗ್ರಿಗಳನ್ನು ವ್ಯೂಹಾತ್ಮಕ ಟಾರ್ಗೆಟ್ ಮೇಲೆ ನಿಖರ ದಾಳಿ ಮಾಡಲು ಬಳಸಲಾಗುತ್ತದೆ. ಕೆಳ ಮಟ್ಟದ ಹಗುರ ರೇಡಾರ್ಗಳು ಕೆಳಮಟ್ಟದಲ್ಲಿ ಹಾರಾಡುವ ಮಾನವ ರಹಿತ ಚಿಕ್ಕ ಗಾತ್ರದ ವೈಮಾನಿಕ ವ್ಯವಸ್ಥೆಯನ್ನು ಪತ್ತೆ ಹಚ್ಚಲು ನೆರವಾಗುತ್ತವೆ.