ವಾಯು ಮಾಲಿನ್ಯದ ವಿರುದ್ಧದ ಪ್ರತಿಭಟನೆಯಲ್ಲಿ ನಕ್ಸಲ್ ಲೀಡರ್ ಹಿಡ್ಮಾ ಪರ ಪೋಸ್ಟರ್ ವೈರಲ್; ಪೊಲೀಸರಿಂದ ಕ್ರಮದ ಭರವಸೆ | Hidma

ಮಡ್ವಿ ಹಿಡ್ಮಾ ಪರ ಪೋಸ್ಟರ್
ಮಡ್ವಿ ಹಿಡ್ಮಾ ಪರ ಪೋಸ್ಟರ್
Published on
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯವನ್ನು ವಿರೋಧಿಸಿ ಭಾನುವಾರ(ನ. 23) ಇಂಡಿಯಾ ಗೇಟ್​ನಲ್ಲಿ ನಡೆದ ಸಾರ್ವಜನಿಕರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಪ್ರತಿಭಟನೆಯಲ್ಲಿ ಕುಖ್ಯಾತ ನಕ್ಸಲ್ ನಾಯಕ ಮಡ್ವಿ ಹಿಡ್ಮಾ(Hidma) ಬೆಂಬಲಿಸುವ ಪೋಸ್ಟರ್​ಗಳು ಮತ್ತು ಘೋಷಣೆಗಳು ಕಾಣಿಸಿಕೊಂಡಿವೆ.
ಪ್ರತಿಭಟನಾಕಾರರ ಗುಂಪೊಂದು ಇತ್ತೀಚಿಗೆ ಆಂಧ್ರ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ ಮಡ್ವಿ ಹಿಡ್ಮಾನನ್ನು ಬೆಂಬಲಿಸುವ ಪೋಸ್ಟರ್ ಜೊತೆಗೆ ಅಮರ್ ರಹೇ(ಮಾದ್ವಿ ಹಿಡ್ಮಾ ಚಿರಾಯುವಾಗಲಿ) ಎಂಬ ಘೋಷಣೆಗಳನ್ನು ಕೂಗಿದ್ದಾರೆ. 
ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಳ್ಳುವ ಕೆಲವೇ ನಿಮಿಷಗಳ ಮೊದಲು ಬಿರ್ಸಾ ಮುಂಡಾದಿಂದ ಮದ್ವಿ ಹಿಡ್ಮಾವರೆಗೆ, ನಮ್ಮ ಕಾಡುಗಳು ಮತ್ತು ಪರಿಸರದ ಬಗೆಗಿನ ಹೋರಾಟ ಮುಂದುವರಿಯುತ್ತದೆ ಎಂದು ಬರೆದಿರುವ ಪೋಸ್ಟರ್ ಅನ್ನು ಓರ್ವ ವ್ಯಕ್ತಿ ಹಿಡಿದಿದ್ದು ವಿಡಿಯೋಗಳಲ್ಲಿ ದಾಖಲಾಗಿದೆ.  

ಪೊಲೀಸರಿಂದ ಕ್ರಮದ ಭರವಸೆ

ನಕ್ಸಲ್ ಮಡ್ವಿ ಹಿಡ್ಮಾ ಬೆಂಬಲಿಸಿ ಘೋಷಣೆ ಕೂಗಿದ ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘೋಷಣೆ ಕೂಗಿದವರ ವಿರುದ್ದ ಕ್ರಮಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಇಂಡಿಯಾ ಗೇಟ್‌ನಲ್ಲಿ ಇಂತಹ ಘೋಷಣೆಗಳನ್ನು ಕೂಗಿದವರನ್ನು ಗುರುತಿಸಿ ಅವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಡ್ವಿ  ಹಿಡ್ಮಾ ಯಾರು? 

ಮಡ್ವಿ ಹಿಡ್ಮಾ, ಭದ್ರತಾ ಪಡೆಗಳಿಗೆ ಬೇಕಾಗಿದ್ದ, ಮೋಸ್ಟ್ ವಾಂಟೆಡ್ ನಕ್ಸಲ್​ ನಾಯಕ. ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಕನಿಷ್ಠ 26 ಸಶಸ್ತ್ರ ದಾಳಿಗಳಿನ್ನು ನಡೆಸಿದ ಆರೋಪ ಆತನ ಮೇಲಿದೆ. ನ. 18ರಂದು ಆಂಧ್ರಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಹಿಡ್ಮಾ ಮತ್ತು ಆತನ ಹೆಂಡತಿ ಸೇರಿ 6 ನಕ್ಸಲರು ಬಲಿಯಾಗಿದ್ದರು.
1981ರಲ್ಲಿ ಸುಕ್ಮಾದಲ್ಲಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಹಿಡ್ಮಾ, ಕಲಿತಿದ್ದು ಕೇವಲ 10ನೇ ತರಗತಿ. ಶಾಲೆ ಮುಗಿಯುತ್ತಿದ್ದ ಮಾವೋವಾದಿ ಸಿದ್ದಾಂತಕ್ಕೆ ಆಕರ್ಷಿತನಾಗಿ ಕಾಡು ಸೇರಿದ್ದ. ಮುಂದೆ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಮುನ್ನೆಡಿಸಿದ್ದು, ಬಳಿಕ ಸಿಪಿಐ ಮಾವೋವಾದಿ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರ ಸಮಿತಿಯ ಕಿರಿಯ ಸದಸ್ಯನಾಗಿದ್ದನು. 
2010ರಲ್ಲಿ ದಾಂತೇವಾಡದಲ್ಲಿ ನಡೆದ ದಾಳಿಯಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಬಲಿಯಾದ ದಾಳಿ ಮತ್ತು 2013 ರಲ್ಲಿ ಜಿರಾಮ್ ಘಾಟಿಯಲ್ಲಿ ನಡೆದ ದಾಳಿಯಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರು ಸೇರಿದಂತೆ 27 ಜನರು ಸಾವನ್ನಪ್ಪಿದ ದಾಳಿಯಲ್ಲಿ ಹಿಡ್ಮಾ ನೇತೃತ್ವದಲ್ಲಿ ನಡೆದಿತ್ತು. 2021ರಲ್ಲಿ ಸುಕ್ಮಾ-ಬಿಜಾಪುರದಲ್ಲಿ ನಡೆದ ದಾಳಿಯಲ್ಲಿಯೂ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಅದರಲ್ಲೂ ಹಿಡ್ಮಾ ಪ್ರಮುಖ ಪಾತ್ರ ಇತ್ತು ಎನ್ನಲಾಗಿದ್ದು, ಭದ್ರತಾ ಪಡೆಗಳಿಂದ ಹಿಡ್ಮಾ ತಲೆಗೆ 50 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net