ವರ್ಷಗಟ್ಟಲೆ ನರಕಯಾತನೆಗೆ ಅನುಭವಿಸಿದ ಮನಿಕಿ ಹೆಣ್ಣಾನೆಗೆ ವಂತಾರದಲ್ಲಿ ಮುಕ್ತಿ..Elephant maniki

Elephant maniki vantara shelter animals
Elephant maniki vantara shelter animals
Published on

ಪ್ರಮುಖ ಮುಖ್ಯಾಂಶಗಳು

  • ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರಕ್ಕೆ ಮನಿಕಿ ಎಂಬ ಹೆಣ್ಣಾನೆ ವರ್ಗಾವಣೆ
  • ಮನಿಕಿಗೆ ಸುರಕ್ಷತೆ ಮತ್ತು ಅಗತ್ಯವಿರುವ ಕಾಳಜಿ, ಆರಾಮ ಮತ್ತು ಘನತೆಯ ಜೀವನ ಸಿಗಲಿದೆ.
  • ಕಾಲು ನೋವು ಸಮಸ್ಯೆ ಕಡಿಮೆ ಮಾಡಲು ಮೃದುವಾದ ಮಣ್ಣು ಮತ್ತು ನೈಸರ್ಗಿಕ ನೆಲದ ವ್ಯವಸ್ಥೆ ಮಾಡಲಾಗಿದೆ
ಜಾಮ್‌ ನಗರ:  ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ 48 ವರ್ಷದ ಮನಿಕಿ ಎಂಬ ಹೆಣ್ಣಾನೆ ಕಾಲಿಗೆ ಈ ಹಿಂದೆ ಪೆಟ್ಟಾಗಿತ್ತು.  ಪ್ರತಿಯೊಂದು ಹೆಜ್ಜೆಯೂ ಅತ್ಯಂತ ಕಷ್ಟದಾಯಕವಾಗಿತ್ತು. ಸದ್ಯ ಇದನ್ನು ಅರಿತ ಅಧಿಕಾರಿಗಳು ಆನೆಯನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರಕ್ಕೆ  ವರ್ಗಾಯಿಸಿದ್ದಾರೆ. ಸದ್ಯ ಮನಿಕಿಗೆ  ಸುರಕ್ಷತೆ ಮತ್ತು ಅಗತ್ಯವಿರುವ ಕಾಳಜಿ, ಆರಾಮ ಮತ್ತು ಘನತೆಯ ಜೀವನ ಸಿಗಲಿದೆ. 

ಸಾಲು ಸಾಲು ಆರೋಗ್ಯ ಸಮಸ್ಯೆ

 ಎಡ ಮುಂಗಾಲಿನಲ್ಲಿದ್ದ ಹಳೆಯ ಗಾಯ ವ್ರಣವಾಗಿ ಅವಳ ನಡಿಗೆ ಮತ್ತು ಚಲನವಲನಗಳ ಮೇಲೆ ತೀವ್ರ  ಪ್ರತಿಕೂಲ ಪರಿಣಾಮ ಬೀರಿತ್ತು. ಇದರೊಂದಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು, ಗಾಯಗಳ ಸೋಂಕು, ಒಂದು ಕಣ್ಣಿನ ದೃಷ್ಟಿ ದೋಷ, ನಿರ್ಜಲೀಕರಣ ಮತ್ತು ಕ್ಷೀಣಿಸಿದ ಒಟ್ಟಾರೆ ದೈಹಿಕ ಆರೋಗ್ಯದ ಸ್ಥಿತಿಯು ಮನಿಕಿಯ ಯಾತನೆಯನ್ನು ಮತ್ತಷ್ಟು ತೀವ್ರಗೊಳಿಸಿತ್ತು.

ಸೋಶಿಯಲ್​ ಮೀಡಿಯಾದಿಂದ ಎಚ್ಚೆತ್ತ ವ್ಯವಸ್ಥೆ

ಚಿಕಿತ್ಸೆಗಾಗಿ ಅಸ್ಸಾಂನ ಹೆದ್ದಾರಿಯೊಂದರಲ್ಲಿ ಮನಿಕಿ ನೋವಿನಿಂದ ಕುಂಟುತ್ತಾ ಸಾಗುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವಳ ದುಃಸ್ಥಿತಿ ಸಾರ್ವಜನಿಕರ ಗಮನಕ್ಕೆ ಬಂದಿತು. ಈ ದೃಶ್ಯಗಳು ದೇಶಾದ್ಯಂತ ಜನರ ಮನಸ್ಸನ್ನು ಕಲಕಿತ್ತು.  ನಾಗರಿಕರು, ಪ್ರಾಣಿ ಪ್ರಿಯ ಕಾರ್ಯಕರ್ತರು  ಒಟ್ಟಾಗಿ ಆನೆಯ ಆರೈಕೆಗಾಗಿ ತುರ್ತು ನೆರವು ಕೋರಿದರು. ಸಹಿ ಸಂಗ್ರಹಣೆಯ ಅಭಿಯಾನಗಳು ನಡೆದವು, ಮನವಿಗಳನ್ನು ಸಲ್ಲಿಸಲಾಯಿತು.

ವಂತಾರದಲ್ಲಿ ಆಶ್ರಯ

ಮನಿಕಿ ಆನೆಗೆ ಹೆಚ್ಚಿನ ಚಿಕಿತ್ಸೆ ಮತ್ತು ಸುದೀರ್ಘ ಆರೈಕೆಯ ಅಗತ್ಯವಿದೆ ಎಂಬುದನ್ನು ಮನಗಂಡ  ಮಾಲೀಕರಾದ ರುಚಿ ಚೇತಿಯಾ ಅವರು, ಸುಪ್ರೀಂ ಕೋರ್ಟ್ ನೇಮಿಸಿದ ವನ್ಯಜೀವಿಗಳ ರಕ್ಷಣೆ ಮತ್ತು ಆರೈಕೆ ಸಮಿತಿಗೆ ಪತ್ರ ಬರೆದರು. ಸುಧಾರಿತ ಚಿಕಿತ್ಸೆ ಮತ್ತು ದೀರ್ಘಕಾಲೀನ ಆರೈಕೆಗಾಗಿ ಆನೆಯನ್ನು ‘ವಂತಾರ’ಕ್ಕೆ ವರ್ಗಾಯಿಸುವಂತೆ ವಿನಂತಿಸಿದರು. ಸಮಿತಿ ಹಾಗೂ ಅಸ್ಸಾಂ ಮತ್ತು ಗುಜರಾತ್ ಸರ್ಕಾರಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ನಂತರ, ವಂತಾರ ಸಂಸ್ಥೆಯು ಈಗ ಮನಿಕಿಯನ್ನು ಸುರಕ್ಷಿತವಾಗಿ ಜಾಮ್‌ ನಗರಕ್ಕೆ ಕರೆತಂದಿದೆ. ವಂತಾರದಲ್ಲಿ ಮನಿಕಿಗೆ ಸುಧಾರಿತ ಆಸ್ಪತ್ರೆ ಆರೈಕೆ, ನಿರಂತರ ಚಿಕಿತ್ಸೆ ಮತ್ತು ಅವಳ ಆರಾಮ ಹಾಗೂ ಯೋಗಕ್ಷೇಮಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ಶಾಶ್ವತ ಆಶ್ರಯ ತಾಣ ಸಿಗಲಿದೆ.

ಯಾರು ಏನಂದ್ರು?

ಈ ಕುರಿತು ವಂತಾರ ವಕ್ತಾರರು ಮಾತನಾಡಿ, "ಮನಿಕಿಯ ಆರೋಗ್ಯ ವರದಿಯ ಪ್ರಕಾರ, ಅವಳಿಗೆ ಸಂರಕ್ಷಿತ ಮತ್ತು ವಿಶೇಷ ಆರೈಕೆಯ ಪರಿಸರದಲ್ಲಿ ಸಮಗ್ರ ಪಶುವೈದ್ಯಕೀಯದ ಅಗತ್ಯವಿದೆ. ಅವಳ ಅಸಹಜ ನಡಿಗೆ, ಕುಂಟುವಿಕೆ, ನಿರ್ಜಲೀಕರಣ, ಕ್ಷೀಣಿಸಿದ ದೈಹಿಕ ಸ್ಥಿತಿ, ಗಾಯಗಳ ಸೋಂಕು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಾಗಿ ವ್ಯವಸ್ಥಿತ ದೀರ್ಘಕಾಲೀನ ಚಿಕಿತ್ಸಾ ಯೋಜನೆಯು ಅತ್ಯಗತ್ಯವಾಗಿದೆ. ಔಷಧೋಪಚಾರ, ಹೈಡ್ರೋಥೆರಪಿ (ಜಲ ಚಿಕಿತ್ಸೆ) ಮತ್ತು ಅಕ್ಯುಪಂಕ್ಚರ್ ಮೂಲಕ ಅವಳ ನೋವನ್ನು ಉಪಶಮನಗೊಳಿಸುವುದು, ಗಾಯದ ಆರೈಕೆ ಮತ್ತು ಪೌಷ್ಟಿಕಾಹಾರದ ಪೂರೈಕೆ  ತಕ್ಷಣದ ಆದ್ಯತೆಗಳಾಗಿವೆ. ಸಕಾಲಿಕವಾಗಿ ಮಧ್ಯಪ್ರವೇಶಿಸಿದ ಅಧಿಕಾರಿಗಳಿಗೆ ಮತ್ತು ಮನಿಕಿಗೆ ಅಗತ್ಯವಿರುವ ತುರ್ತು ಆರೈಕೆಗಾಗಿ ವಂತಾರಕ್ಕೆ ವರ್ಗಾಯಿಸಲು ಸೂಕ್ತ ನಿರ್ಧಾರ ಕೈಗೊಂಡ  ರುಚಿ ಚೇತಿಯಾ ಅವರಿಗೆ ನಾವು ಕೃತಜ್ಞರಾಗಿದ್ದೇವೆ," ಎಂದು ವಿವರಿಸಿದರು.
ವಂತಾರದಲ್ಲಿ ಮನಿಕಿಯ ಚೇತರಿಕೆ ಕೇವಲ ಔಷಧಗಳಿಗೆ ಮಾತ್ರ ಸೀಮಿತವಾಗಿಲ್ಲ. ಗಾಯಗೊಂಡ ಅವಳ ಕಾಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮೃದುವಾದ ಮಣ್ಣು ಮತ್ತು ನೈಸರ್ಗಿಕ ನೆಲದ ವ್ಯವಸ್ಥೆ, ಅಂಗಾಂಗಗಳ ಮೇಲಿನ ಭಾರವನ್ನು ತಗ್ಗಿಸಲು ನೈಸರ್ಗಿಕ ಕೊಳಗಳ ಸೌಲಭ್ಯ, ಸ್ವಾಭಾವಿಕವಾಗಿ ಆಹಾರ ಹುಡುಕುವ ಮುಕ್ತ ಅವಕಾಶ ಮತ್ತು ಇತರ ಆನೆಗಳ ಒಡನಾಟದೊಂದಿಗೆ ಅವಳಿಗೆ ಪ್ರತಿದಿನ ಅಗತ್ಯವಿರುವ ಕಾಳಜಿ, ಆರಾಮ ಮತ್ತು ಘನತೆಯ ಜೀವನ ಸಿಗಲಿದೆ.
ಮನಿಕಿಗೆ ಈಗ ನೋವಿನ ನಡಿಗೆಯ ದಿನಗಳು ಮುಗಿದಿವೆ. ವಂತಾರದಲ್ಲಿ ಅವಳು ಗುಣಮುಖಳಾಗುತ್ತಿದ್ದಾಳೆ. ಆನೆಯ ಜೀವನದ  ಹೊಸ ಅಧ್ಯಾಯ ಆರಂಭವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net