ನಾಳೆ ದೇವರ ನಾಡಿಗೆ ಹೊಸ ಸಿಎಂ ಆಯ್ಕೆ? ಯಾರ ತಲೆಗೆ ಏರಲಿದೆ ಕೇರಳದ ಕಿರೀಟ? ಜೈರಾಮ್ ರಮೇಶ್ ಹೇಳಿದ್ದೇನು! Jairam Ramesh

ನಾಳೆ ದೇವರ ನಾಡಿಗೆ ಹೊಸ ಸಿಎಂ ಆಯ್ಕೆ? ಯಾರ ತಲೆಗೆ ಏರಲಿದೆ ಕೇರಳದ ಕಿರೀಟ? ಜೈರಾಮ್ ರಮೇಶ್ ಹೇಳಿದ್ದೇನು!
ನಾಳೆ ದೇವರ ನಾಡಿಗೆ ಹೊಸ ಸಿಎಂ ಆಯ್ಕೆ? ಯಾರ ತಲೆಗೆ ಏರಲಿದೆ ಕೇರಳದ ಕಿರೀಟ? ಜೈರಾಮ್ ರಮೇಶ್ ಹೇಳಿದ್ದೇನು!
Published on
ನವದೆಹಲಿ: ಕೇರಳದ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯು ಈಗ ಅಂತಿಮ ಹಂತಕ್ಕೆ ತಲುಪಿದ್ದರೂ, ಅಧಿಕೃತ ಘೋಷಣೆಯು ಮಾತ್ರ ಒಂದು ದಿನ ಮುಂದೂಡಲ್ಪಟ್ಟಿದೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಮುಂದೆ ಜಮಾಯಿಸಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್(Jairam Ramesh), ನಾಳೆ ಕೇರಳ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಕುತೂಹಲಕಾರಿ ನಾಟಕಕ್ಕೆ ನಾಳೆ ಅಂತ್ಯ ಬೀಳುವ ಸಾಧ್ಯತೆಯಿದೆ.

ಖರ್ಗೆ-ರಾಹುಲ್ ಅರ್ಧಗಂಟೆಯ ಗುಪ್ತ ಸಭೆ!

ಬುಧವಾರ ಮಧ್ಯಾಹ್ನ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನಡುವೆ ನಡೆದ ಸುಮಾರು ಅರ್ಧಗಂಟೆಯ ಗಹನವಾದ ಚರ್ಚೆಯು ಯಾವುದೇ ಅಂತಿಮ ತೀರ್ಮಾನಕ್ಕೆ ಬಾರದೆ ಅಂತ್ಯಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೇರಳದ ವಿವಿಧ ಬಣಗಳ ನಡುವೆ ಒಮ್ಮತ ಮೂಡಿಸಲು ಹೈಕಮಾಂಡ್ ಹರಸಾಹಸ ಪಡುತ್ತಿದೆ. ಎ.ಕೆ. ಆಂಟನಿ ಅವರಂತಹ ಹಿರಿಯ ನಾಯಕರ ಸಲಹೆಯನ್ನು ಅಂತಿಮ ಹಂತದಲ್ಲಿ ಪಡೆಯಲು ನಿರ್ಧರಿಸಿರುವುದು ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ತ್ರಿಕೋನ ಸ್ಪರ್ಧೆ: ಸತೀಶನ್, ಚೆನ್ನಿತ್ತಲ ಅಥವಾ ವೇಣುಗೋಪಾಲ್..?

ಕೇರಳ ಸಿಎಂ ರೇಸ್‌ನಲ್ಲಿ ಮೂವರು ಪ್ರಬಲ ನಾಯಕರ ನಡುವೆ ಭಾರಿ ಪೈಪೋಟಿ ನಡೆದಿದೆ.
ವಿ.ಡಿ. ಸತೀಶನ್: ಯುವ ನಾಯಕರ ಬೆಂಬಲ ಮತ್ತು ಕೊಡಿಕುನ್ನಿಲ್ ಸುರೇಶ್ ಅವರಂತಹ ನಾಯಕರ ಒಲವು ಇವರ ಪರವಾಗಿದೆ ಎನ್ನಲಾಗುತ್ತಿದೆ.
ರಮೇಶ್ ಚೆನ್ನಿತ್ತಲ: ಅನುಭವಿ ನಾಯಕ ಮತ್ತು ಪಕ್ಷದ ಹಳೆಯ ಪಡೆಯ ಬೆಂಬಲ ಇವರ ಜೊತೆಗಿದೆ.
ಕೆ.ಸಿ. ವೇಣುಗೋಪಾಲ್: ಹೈಕಮಾಂಡ್‌ಗೆ ಅತ್ಯಂತ ಆಪ್ತರಾಗಿದ್ದು, ಅಚ್ಚರಿಯ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ನೆಚ್ಚಿನ ನಾಯಕನ ಮನೆ ಮುಂದೆ ಅತಂತ್ರರಾದ ಬೆಂಬಲಿಗರು

ಅಲುವಾ ದೇಶಂನಲ್ಲಿರುವ ವಿ.ಡಿ. ಸತೀಶನ್ ಅವರ ಮನೆಯ ಮುಂದೆ ಸಂಭ್ರಮಿಸಲು ಕಾದಿದ್ದ ಸಾವಿರಾರು ಬೆಂಬಲಿಗರು, ಘೋಷಣೆ ನಾಳೆಗೆ ಮುಂದೂಡಿಕೆಯಾದ ಸುದ್ದಿ ತಿಳಿದು ನಿರಾಸೆಯಿಂದ ಮನೆಗೆ ಮರಳಿದ್ದಾರೆ. ಇದೇ ದೃಶ್ಯ ರಮೇಶ್ ಚೆನ್ನಿತ್ತಲ ಅವರ ನಿವಾಸದ ಮುಂದೆಯೂ ಕಂಡುಬಂದಿದೆ. ಹತ್ತು ದಿನ ಕಳೆದರೂ ಸಿಎಂ ಯಾರು ಎಂದು ನಿರ್ಧರಿಸಲು ಸಾಧ್ಯವಾಗದಿದ್ದರೆ ಆಡಳಿತ ವ್ಯವಸ್ಥೆ ಕುಸಿಯುವುದಿಲ್ಲವೇ ಎಂದು ಮತದಾರರು ಮತ್ತು ಮಿತ್ರಪಕ್ಷಗಳ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆಡಳಿತ ಸ್ಥಗಿತ: ಮಿತ್ರಪಕ್ಷಗಳ ಆಕ್ರೋಶ

ಇತರ ರಾಜ್ಯಗಳಲ್ಲಿ ಈಗಾಗಲೇ ನೂತನ ಸರ್ಕಾರಗಳು ಅಸ್ತಿತ್ವಕ್ಕೆ ಬಂದು ಕೆಲಸ ಆರಂಭಿಸಿವೆ. ಆದರೆ ಕೇರಳದಲ್ಲಿ ವಿಳಂಬವಾಗುತ್ತಿರುವುದು ರಾಜ್ಯದ ಆಡಳಿತ ಯಂತ್ರವನ್ನು ಸ್ತಬ್ಧಗೊಳಿಸಿದೆ. ಕಾಂಗ್ರೆಸ್‌ನ ಒಳಗಿನ ಈ ಬಣ ರಾಜಕೀಯವು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಮುಳುವಾಗಬಹುದೇ ಎಂಬ ಭೀತಿ ಮಿತ್ರಪಕ್ಷಗಳಲ್ಲಿದೆ. ನಾಯಕತ್ವದ ಆಯ್ಕೆಯಲ್ಲಿ ಏಕತೆ ಪ್ರದರ್ಶಿಸುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರಾದರೂ, ಒಳಗೊಳಗೆ ಕೆಸರೆರಚಾಟ ನಡೆಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಹಿಮಂತ ಬಿಸ್ವ ಶರ್ಮಾ ಅಸ್ಸಾಂನಲ್ಲಿ ಮತ್ತು ಸುವೇಂದು ಅಧಿಕಾರಿ ಬಂಗಾಳದಲ್ಲಿ ಸರ್ಕಾರ ರಚಿಸಿ ಕೆಲಸ ಆರಂಭಿಸಿರುವ ಬೆನ್ನಲ್ಲೇ, ಕೇರಳದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ಈ 'ಕಾದು ನೋಡುವ ತಂತ್ರ' ಯಾರಿಗೂ ಲಾಭ ತರಲಿದೆ ಎಂಬುದು ನಾಳೆ ತಿಳಿಯಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net