20 ಭಾಷೆ, 12 ಸಾವಿರ ಹಾಡು... ಆಶಾ ಭೋಸ್ಲೆ ಬಗ್ಗೆ ನಿಮಗೆ ಗೊತ್ತಿರದ ಕೆಲವು ಇಂಟ್ರೆಸ್ಟಿಂಗ್​ ಸಂಗತಿಗಳು ಇಲ್ಲಿವೆ

ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ
ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ
Published on
ಮುಂಬೈ: ಭಾರತದ ಹೆಸರಾಂತ ಗಾಯಕಿ, ಪದ್ಮವಿಭೂಷಣ ಪುರಸ್ಕೃತೆ ಮತ್ತು ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸ್ಲೆ (92) ಇಂದು (ಏ.12) ಕೊನೆಯುಸಿರೆಳೆದಿದ್ದಾರೆ. ಭಾರತೀಯ ಸಂಗೀತ ಲೋಕದಲ್ಲಿ ದಾಖಲೆಗಳನ್ನು ನಿರ್ಮಿಸಿರುವ ಗಾನಕೋಗಿಲೆ, ಕುಟುಂಬಸ್ಥರು, ಪ್ರೀತಿಯ ಅಭಿಮಾನಿಗಳನ್ನು ಅಗಲಿದ್ದಾರೆ. ದಿಗ್ಗಜ ಗಾಯಕಿಯ ನಿಧನಕ್ಕೆ ಭಾರತೀಯ ಚಿತ್ರರಂಗ ಸೇರಿ ಹಲವು ಕ್ಷೇತ್ರಗಳ ದಿಗ್ಗಜರು ಸಂತಾಪ ಸೂಚಿಸುತ್ತಿದ್ದಾರೆ. 
ವಯೋಸಹಜ ಖಾಯಿಲೆ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಆಶಾ ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ನಿನ್ನೆ (ಏ.11) ಚಿಕಿತ್ಸೆ ಫಲಿಸದೆ, ತಡರಾತ್ರಿ ನಿಧನರಾದರು ಎಂದು ವೈದ್ಯರು ದೃಢಪಡಿಸಿದ್ದಾರೆ. ತಾಯಿಯ ಅಗಲಿಕೆಯ ಸುದ್ದಿ ಬಗ್ಗೆ ಮಗ ಆನಂದ್ ಭೋಸ್ಲೆ ಇಂದು ಮಧ್ಯಾಹ್ನ ಅಧಿಕೃತವಾಗಿ ದೃಢಪಡಿಸಿದರು.
8 ದಶಕಗಳಿಂದ ಬರೋಬ್ಬರಿ 20ಕ್ಕೂ ಅಧಿಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಗಾನಕೋಗಿಲೆ, ತಮ್ಮ ಕೇಳುಗರನ್ನು ಸಂತೋಷಪಡಿಸಿದ್ದಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ಸಾಕಷ್ಟು ಭಾಷೆಗಳ ಹಾಡಿನಲ್ಲಿ ಆಶಾ ಅವರ ಧ್ವನಿ ಇಂದಿಗೂ ಜೀವಂತವಾಗಿದೆ. ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯನ್ನು ಸೋಮವಾರ (ಏ.13) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 
ಆಶಾ ಭೋಸ್ಲೆ ಇನ್ನಿಲ್ಲ ಎಂದಾದರೂ ಅವರ ಹಾಡುಗಳು ಎಂದೆಂದಿಗೂ ಕೇಳುಗರಲ್ಲಿ ಜೀವಂತ. ದಶಕಗಳ ಕಾಲ ಜನಮಾನಸದಲ್ಲಿ ತೇಲುತ್ತಿದ್ದರೂ, 90ರ ವಯಸ್ಸಿನಲ್ಲಿಯೂ ಆಶಾ ಅವರು ಹಾಡುವ ಮೂಲಕ ಜನರನ್ನು ಅಚ್ಚರಿ ಪಡಿಸುತ್ತಲೇ ಇದ್ದರು. 2000ದ ಇಸ್ವಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅವರು, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದರೊಟ್ಟಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇಡಿಸಿಕೊಂಡಿದ್ದಾರೆ. ಅವರ ಬಗ್ಗೆ ಇಲ್ಲಿವೆ ನಿಮಗೆ ತಿಳಿಯದ ಹಲವು ಕುತೂಹಲಕಾರಿ ಸಂಗತಿಗಳು.   
1. ರಷಿಯನ್​ ಮತ್ತು ಮಲಯ ಸೇರಿದಂತೆ 20ಕ್ಕೂ ಅಧಿಕ ಭಾಷೆಗಳಲ್ಲಿ ಗಾಯನ
2. ಗಾಯಕಿಯಾಗಿ ಮಾತ್ರವಲ್ಲದೇ, ಆಶಾ ಯಶಸ್ವಿ ಉದ್ಯಮಿಯೂ ಹೌದು. ಅನೇಕ ದೇಶಗಳಲ್ಲಿ 'ಆಶಾಸ್' ಎಂಬ ಹೆಸರಿನ ರೆಸ್ಟೋರೆಂಟ್‌ಗಳು ಇವೆ
3. ಹಾಡುತ್ತಿದ್ದ ಸಿನಿಮಾಗಳ ತಂಡಗಳಿಗೆ ಮತ್ತು ಸ್ನೇಹಿತರಿಗಾಗಿ ಸ್ವತಃ ಆಶಾ ಅವರೇ ಅಡುಗೆ ಮಾಡುತ್ತಿದ್ದಾರೆಂದು ವರದಿಯಾಗಿದೆ
4. ಚಿತ್ರಗೀತೆಗಳ ಹಾಡುಗಾರ್ತಿ ಇಮೇಜ್ ಹೊರತಾಗಿಯೂ, ಅವರು ಶಾಸ್ತ್ರೀಯ ಸಂಗೀತದಲ್ಲಿ ಆಳವಾದ ನೆಲೆಯನ್ನು ಹೊಂದಿದ್ದಾರೆ 
5. ಉಸ್ತಾದ್ ಅಲಿ ಅಕ್ಬರ್ ಖಾನ್ ಅವರೊಂದಿಗೆ ಲೆಗಸಿ ಆಲ್ಬಮ್‌ನಲ್ಲಿ ಹಾಡಿದ್ದಕ್ಕೆ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತರಾದ ಮೊದಲ ಭಾರತೀಯ ಗಾಯಕಿ
6. ಪಾಪ್ ಮತ್ತು ಫ್ಯೂಶನ್​ ಮುನ್ನೆಲೆಗೆ ಬರುವ ಮುನ್ನವೇ ಅದನ್ನು ಪ್ರಯೋಗಿಸಿದ ಮೊದಲ ಭಾರತೀಯ ಗಾಯಕಿ ಆಶಾ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net