ಮಧ್ಯಪ್ರದೇಶ: ( Omelette ) ಅರಣ್ಯಪ್ರದೇಶವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಪ್ರಕರಣವನ್ನು ಯಾವುದೇ ಸಾಕ್ಷ್ಯಗಳಿಲ್ಲದ, ಗುರುತು ಸಿಗದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಕೇವಲ ಒಂದು ಸಣ್ಣ ಆಮ್ಲೆಟ್ ( Omelette ) ತುಂಡು ಮತ್ತು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಗ್ವಾಲಿಯರ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಗ್ವಾಲಿಯರ್‌ನ ಗೋಲಾ ಕಾ ಮಂದಿರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಹಂತಕರು ಮಹಿಳೆಯ ಮುಖವನ್ನು ಕಲ್ಲಿನಿಂದ ಜಜ್ಜಿ ವಿಕೃತಗೊಳಿಸಿದ್ದರು, ಇದರಿಂದ ಆಕೆಯನ್ನು ಗುರುತಿಸುವುದು ಅಸಾಧ್ಯವಾಗಿತ್ತು. ಸ್ಥಳದಲ್ಲಿ ಯಾವುದೇ ದಾಖಲೆಗಳಾಗಲಿ ಅಥವಾ ಪ್ರತ್ಯಕ್ಷದರ್ಶಿಗಳಾಗಲಿ ಇರಲಿಲ್ಲ.
ವಿಕೃತಗೊಂಡಿದ್ದ ಮುಖವನ್ನು ಗುರುತಿಸಲು ಪೊಲೀಸರು AI ಬಳಸಿ ಮಹಿಳೆಯ ಅಂದಾಜು ಭಾವಚಿತ್ರವನ್ನು (Digital Reconstruction) ಸಿದ್ಧಪಡಿಸಿದರು. ಇದನ್ನು ಸಾಮಾಜಿಕ ಜಾಲತಾಣ ಮತ್ತು ನಗರದಾದ್ಯಂತ ಹಂಚಲಾಯಿತು. ಇದರಿಂದ ಆಕೆ ಟಿಕಮ್‌ಗಢದ 'ಸಂಗೀತಾ ಪಾಲ್' ಎಂದು ಗುರುತಿಸಲು ಸಾಧ್ಯವಾಯಿತು.
ಮೃತದೇಹದ ತಪಾಸಣೆ ನಡೆಸುವಾಗ ಆಕೆಯ ಸ್ವೆಟರ್ ಜೇಬಿನಲ್ಲಿ ಒಂದು ಸಣ್ಣ ಆಮ್ಲೆಟ್ ತುಂಡು ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನಾ ಸ್ಥಳದ 200 ಮೀಟರ್ ವ್ಯಾಪ್ತಿಯಲ್ಲಿದ್ದ ಮೊಟ್ಟೆ ಅಂಗಡಿಗಳನ್ನು ವಿಚಾರಿಸಿದರು. ಒಬ್ಬ ವ್ಯಾಪಾರಿ, "ಈ ಮಹಿಳೆ ಒಬ್ಬ ವ್ಯಕ್ತಿಯ ಜೊತೆ ಬಂದು ಆಮ್ಲೆಟ್ ತಿಂದಿದ್ದಳು" ಎಂದು ಗುರುತಿಸಿದನು.
ವ್ಯಾಪಾರಿಯ ಸುಳಿವಿನ ಆಧಾರದ ಮೇಲೆ ಸಿಸಿಟಿವಿ (CCTV) ದೃಶ್ಯಗಳನ್ನು ಪರಿಶೀಲಿಸಿದಾಗ, ಮಹಿಳೆಯ ಜೊತೆ ಒಬ್ಬ ವ್ಯಕ್ತಿ ಇರುವುದು ಕಂಡುಬಂದಿತು. ಆತ ಆಮ್ಲೆಟ್‌ಗೆ ಆನ್‌ಲೈನ್ ಪಾವತಿ (Online Payment) ಮಾಡಿದ್ದರಿಂದ ಪೊಲೀಸರಿಗೆ ಆತನ ಪತ್ತೆ ಹಚ್ಚುವುದು ಸುಲಭವಾಯಿತು. ಜನವರಿ 5, 2026 ರಂದು ಪೊಲೀಸರು ಆರೋಪಿ ಸಚಿನ್ ಸೇನ್ (26) ಎಂಬಾತನನ್ನು ಗ್ವಾಲಿಯರ್ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದರು.
ಆರೋಪಿ ಸಚಿನ್, ಸಂಗೀತಾ ಪಾಲ್ ಜೊತೆ ಸಂಬಂಧ ಹೊಂದಿದ್ದನು. ಆಕೆಗೆ ಬೇರೆ ಪುರುಷರ ಜೊತೆಗೂ ಸಂಬಂಧವಿದೆ ಎಂಬ ಅನುಮಾನದಿಂದ, ಆಕೆಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.