ಸಂಚಲನ ಮೂಡಿಸಿದ ನಿರಶನ: 20ನೇ ದಿನಕ್ಕೆ ಕಾಲಿಟ್ಟ ವಾಂಗ್​ಚುಕ್​ ಉಪವಾಸ

20ನೇ ದಿನಕ್ಕೆ ಕಾಲಿಟ್ಟ ವಾಂಗ್​ಚುಕ್​ ಉಪವಾಸ
20ನೇ ದಿನಕ್ಕೆ ಕಾಲಿಟ್ಟ ವಾಂಗ್​ಚುಕ್​ ಉಪವಾಸ
Published on

ನವದೆಹಲಿ: ಸರ್ಕಾರಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶದ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಡೆತ ನೀಡುತ್ತಿವೆ ಎಂದು ಆರೋಪಿಸಿ ಲಡಾಖ್​ನ ಪರಿಸರವಾದಿ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್, ದೆಹಲಿಯ ಜಂತರ್​ ಮಂತರ್​ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಉಪವಾಸ ಈಗ 20ನೇ ದಿನಕ್ಕೆ ಕಾಲಿಟ್ಟಿದ್ದು, ಆರೋಗ್ಯ ಹದಗೆಟ್ಟಿದ್ದರೂ ನಿರಶನ ನಿಲ್ಲಿಸಲು ಅವರು ನಿರಾಕರಿಸಿರುವುದು ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಕಠಿಣ ಕಾನೂನು ಜಾರಿ, ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಹಾಗೂ ಯುವಕರಿಗೆ ನ್ಯಾಯ ಒದಗಿಸಬೇಕು ಎಂಬುದು ಅವರ ಆಗ್ರಹ. ಈ ಹೋರಾಟದ ಹಿನ್ನೆಲೆ, ಪ್ರಮುಖ ಬೇಡಿಕೆಗಳು, ಕೇಂದ್ರದ ನಿಲುವು, ಬೆಂಬಲ-ವಿರೋಧದ ವಾದಗಳು ಹಾಗೂ ವಾಂಗ್ಚುಕ್ ಅವರ ಹಿಂದಿನ ಚಳವಳಿಗಳ ವಿವರ ಇಲ್ಲಿದೆ. 

ದೇಶದ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪದೇಪದೆ ಬೆಳಕಿಗೆ ಬರುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಲಕ್ಷಾಂತರ ಯುವಕರಲ್ಲಿ ತೀವ್ರ ಅಸಮಾಧಾನ ಮೂಡಿಸಿವೆ. ಹಲವು ವರ್ಷಗಳ ಕಾಲ ಸಿದ್ಧತೆ ನಡೆಸಿದ ಅಭ್ಯರ್ಥಿಗಳು ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವಾಗಲೇ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬರುತ್ತವೆ. ಪರೀಕ್ಷೆಗಳು ರದ್ದಾಗುತ್ತವೆ. ಮತ್ತೆ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಅಭ್ಯರ್ಥಿಗಳ ಸಮಯ, ಹಣ, ಮಾನಸಿಕ ನೆಮ್ಮದಿ ಹಾಗೂ ಉದ್ಯೋಗದ ಅವಕಾಶಗಳಿಗೆ ದೊಡ್ಡ ಹೊಡೆತ ಬೀಳುತ್ತದೆ.

ಈ ಹಿನ್ನೆಲೆಯಲ್ಲಿ, ಲಡಾಖ್​ನ ಪ್ರಸಿದ್ಧ ಶಿಕ್ಷಣ ತಜ್ಞ, ಆವಿಷ್ಕಾರಕ ಹಾಗೂ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ದೆಹಲಿಯ ಜಂತರ್ ಮಂತರ್​ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಉಪವಾಸ 20ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದರೂ, ಬೇಡಿಕೆಗಳ ಈಡೇರಿಕೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗುವವರೆಗೂ ಉಪವಾಸ ಮುಂದುವರಿಸುತ್ತೇನೆ ಎಂಬ ಕಠಿಣ ನಿಲುವನ್ನು ಅವರು ತಳೆದಿದ್ದಾರೆ.

ಉಪವಾಸದ ಉದ್ದೇಶ ಏನು?

ವಾಂಗ್ಚುಕ್ ಅವರ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆಯನ್ನು ಬರೀ ಪರೀಕ್ಷಾ ಅಕ್ರಮವೆಂದು ನಿರ್ಲಕ್ಷಿಸುವಂತಿಲ್ಲ; ಅದು ದೇಶದ ಯುವಜನರ ಕನಸುಗಳಿಗೆ ಬೀಳುತ್ತಿರುವ ಪೆಟ್ಟು. ಉದ್ಯೋಗಕ್ಕಾಗಿ ಪ್ರಯತ್ನಿಸುವ ಯುವಜನರು ವರ್ಷಗಳ ಕಾಲ ಶ್ರಮಿಸುತ್ತಾರೆ. ಆದರೆ ಕೆಲವರ ಅಕ್ರಮದಿಂದ ಲಕ್ಷಾಂತರ ಅಭ್ಯರ್ಥಿಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಇದನ್ನು ರಾಷ್ಟ್ರಮಟ್ಟದ ಸಮಸ್ಯೆಯಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎನ್ನುವುದು ಅವರ ಒತ್ತಾಯ. ಇತ್ತೀಚಿನ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದೂ ಅವರ ಆಗ್ರಹವಾಗಿದೆ. ಇದೇ ಸ್ಥಳದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಕೂಡ 25 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ವಾಂಗ್ಚುಕ್​ರ ಪ್ರಮುಖ ಬೇಡಿಕೆಗಳು ಹೀಗಿವೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಅತ್ಯಂತ ಕಠಿಣ ಶಿಕ್ಷೆ. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕಗೊಳಿಸುವುದು. ಪರೀಕ್ಷಾ ಸಂಸ್ಥೆಗಳ ಉತ್ತರದಾಯಿತ್ವವನ್ನು ಹೆಚ್ಚಿಸುವುದು. ಸೋರಿಕೆಯಿಂದ ನಷ್ಟ ಅನುಭವಿಸಿದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ವ್ಯವಸ್ಥೆ. ತಂತ್ರಜ್ಞಾನ ಆಧಾರಿತ ಸುರಕ್ಷಿತ ಪರೀಕ್ಷಾ ವ್ಯವಸ್ಥೆ ರೂಪಿಸುವುದು. ಪರೀಕ್ಷಾ ಪ್ರಕ್ರಿಯೆಯಲ್ಲಿ ಸ್ವತಂತ್ರ ಮೇಲ್ವಿಚಾರಣೆ.

ವಾಂಗ್ಚುಕ್ ಬೆಂಬಲಿಗರು ಏನು ಹೇಳುತ್ತಾರೆ?

ವಾಂಗ್ಚುಕ್ ಅವರ ಬೆಂಬಲಿಗರು ಈ ಹೋರಾಟವನ್ನು ಯಾವುದೇ ವ್ಯಕ್ತಿಯ ವೈಯಕ್ತಿಕ ಹೋರಾಟವಾಗಿ ನೋಡುತ್ತಿಲ್ಲ. ಅವರ ಪ್ರಕಾರ, ಈ ಹೋರಾಟ ಲಕ್ಷಾಂತರ ಅಭ್ಯರ್ಥಿಗಳ ಧ್ವನಿ. ಉದ್ಯೋಗದ ಬಗೆಗಿನ ಯುವಕರ ವಿಶ್ವಾಸವನ್ನು ಉಳಿಸುವ ಹೋರಾಟ. ಪ್ರತಿಭೆಗಷ್ಟೇ ಅವಕಾಶ ಸಿಗಬೇಕು, ಹಣ ಮತ್ತು ಅಕ್ರಮಕ್ಕೆ ಅವಕಾಶ ಸಿಗಬಾರದು, ಅಂತಹ ವ್ಯವಸ್ಥೆ ನಿರ್ವಿುಸುವ ಪ್ರಯತ್ನ ಇದು. ಪ್ರಶ್ನೆಪತ್ರಿಕೆ ಸೋರಿಕೆ ದೇಶದ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ. ಅನೇಕ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ಕ್ಷೇತ್ರದ ಪರಿಣಿತರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಉಪವಾಸಕ್ಕೆ ಬೆಂಬಲ ಸೂಚಿಸಿದ್ದಾರೆ.

ವಿರೋಧ ವ್ಯಕ್ತಪಡಿಸುವವರ ವಾದವೇನು?

ವಾಂಗ್ಚುಕ್ ಉಪವಾಸವನ್ನು ಟೀಕಿಸುವವರು ಬೇರೆ ರೀತಿಯ ವಾದ ಮಂಡಿಸುತ್ತಿದ್ದಾರೆ. ಅವರ ಪ್ರಕಾರ, ಕೇಂದ್ರ ಸರ್ಕಾರ ಈಗಾಗಲೇ ಕಠಿಣ ಕಾನೂನು ಜಾರಿಗೆ ತಂದಿದೆ. ಸಮಸ್ಯೆ ಇರುವುದು ಕಾನೂನು ರೂಪಿಸುವುದರಲ್ಲಿ ಅಲ್ಲ; ಅದರ ಅನುಷ್ಠಾನದಲ್ಲಿ. ದೀರ್ಘ ಉಪವಾಸಕ್ಕಿಂತ ಸರ್ಕಾರದ ಜತೆ ನಿರಂತರ ಸಂವಾದ ನಡೆಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆರೋಗ್ಯವನ್ನು ಅಪಾಯಕ್ಕೆ ಒಡ್ಡಿಕೊಳ್ಳುವ ಹೋರಾಟಕ್ಕಿಂತ ಸುಧಾರಣೆಗಳ ಬಗ್ಗೆ ಚರ್ಚೆ ಅಗತ್ಯ. ದೇಶದ ವಿವಿಧ ಪರೀಕ್ಷಾ ಸಂಸ್ಥೆಗಳ ಸ್ವರೂಪ ಬೇರೆಬೇರೆ ಇರುವುದರಿಂದ ಎಲ್ಲ ಸಮಸ್ಯೆಗೆ ಒಂದೇ ಪರಿ ಹಾರ ಸಾಧ್ಯವಿಲ್ಲ. ಉಪ ವಾಸದಿಂದ ಪ್ರಶ್ನೆಪತ್ರಿಕೆ ಸೋರಿಕೆ ನಿಲ್ಲುವುದಿಲ್ಲ. ವ್ಯವಸ್ಥೆಯಲ್ಲಿ ಸುಧಾರಣೆ ತರಲು ದೀರ್ಘಾವಧಿ ಕ್ರಮಗಳು ಅಗತ್ಯ.

ಸೋನಂ ಆರೋಗ್ಯ ಹೇಗಿದೆ?

ಉಪವಾಸ ಆರಂಭವಾದ ಬಳಿಕ ವಾಂಗ್ಚುಕ್ ಅವರ ತೂಕ ಗಣನೀಯವಾಗಿ ಇಳಿದಿದೆ ಎಂದು ವೈದ್ಯಕೀಯ ತಂಡ ಹೇಳಿದೆ. ರಕ್ತದೊತ್ತಡ, ದೇಹದ ಶಕ್ತಿ ಹಾಗೂ ಇತರ ಆರೋಗ್ಯ ಸೂಚಕಗಳ ಮೇಲೆ ನಿರಂತರ ನಿಗಾ ಇಡಲಾಗಿದೆ. ದ್ರವ ಪದಾರ್ಥಗಳ ಸಹಾಯದಿಂದ ಉಪವಾಸ ಮುಂದುವರಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ನಿಲುವೇನು?

ಈಗಾಗಲೇ ಪಬ್ಲಿಕ್ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ‘ಸಾರ್ವಜನಿಕ ಪರೀಕ್ಷೆಗಳು (ಅಕ್ರಮಗಳ ತಡೆ) ಕಾಯ್ದೆ, 2024ನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಕಾನೂನಿನಡಿ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ, ಸಂಘಟಿತ ವಂಚನೆ, ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯುವುದು, ಪರೀಕ್ಷಾ ವ್ಯವಸ್ಥೆಯನ್ನು ಹ್ಯಾಕ್ ಮಾಡುವುದು ಮುಂತಾದ ಕೃತ್ಯಗಳಿಗೆ ಕಠಿಣ ಶಿಕ್ಷೆ ಹಾಗೂ ಭಾರಿ ದಂಡದ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕಾನೂನು ಜಾರಿಯಲ್ಲಿದ್ದು, ಪರೀಕ್ಷಾ ಭದ್ರತೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳು ಭದ್ರತಾ ವ್ಯವಸ್ಥೆಯನ್ನು ಬಲಪಡಿಸುತ್ತಿವೆ. ಹೀಗಾಗಿ ಹೊಸ ಕಾನೂನಿನ ಪರಿಣಾಮ ಗೊತ್ತಾಗಲು ಸಮಯ ಬೇಕು ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯ. ಆದರೆ ವಾಂಗ್ಚುಕ್ ಮತ್ತು ಅವರ ಬೆಂಬಲಿಗರ ಪ್ರಕಾರ, ಕಾನೂನು ಮಾಡಿದರೆ ಸಾಲದು, ಅದರ ಪರಿಣಾಮಕಾರಿ ಅನುಷ್ಠಾನ ಮುಖ್ಯ.

ಜುಲೈ 20ರಂದು ಪಾರ್ಲಿಮೆಂಟ್ ಚಲೋ

ಹೋರಾಟದ ಭಾಗವಾಗಿ ಜುಲೈ 20ರಂದು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವಕರು ಹಾಗೂ ವಾಂಗ್ಚುಕ್ ಬೆಂಬಲಿಗರು ದೆಹಲಿಗೆ ಬಂದು ಶಾಂತಿಯುತವಾಗಿ ಪಾರ್ಲಿಮೆಂಟ್ ಚಲೋ ನಡೆಸುವ ಯೋಜನೆ ರೂಪಿಸಲಾಗಿದೆ. ಸಂಘಟಕರ ಪ್ರಕಾರ, ಇದು ಸರ್ಕಾರದ ವಿರುದ್ಧದ ಪ್ರತಿಭಟನೆ ಅಲ್ಲ. ಯುವಕರ ಭವಿಷ್ಯವನ್ನು ರಕ್ಷಿಸುವ ಮನವಿ. ಸಂಸತ್ತಿನ ಗಮನವನ್ನು ಈ ಸಮಸ್ಯೆಯತ್ತ ಸೆಳೆಯುವುದು ಇದರ ಉದ್ದೇಶ.

ಐಸ್ ಸ್ತೂಪ ಆವಿಷ್ಕಾರ

ವಾಂಗ್ಚುಕ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಆವಿಷ್ಕಾರವೇ ಐಸ್ ಸ್ತೂಪ. ಚಳಿಗಾಲದಲ್ಲಿ ಹೆಚ್ಚುವರಿ ನೀರನ್ನು ಶಂಕುವಿನಾಕಾರದ ಹಿಮದ ರೂಪದಲ್ಲಿ ಸಂಗ್ರಹಿಸಿ, ಬೇಸಿಗೆಯಲ್ಲಿ ಅದು ನಿಧಾನವಾಗಿ ಕರಗುವ ಮೂಲಕ ಕೃಷಿಗೆ ನೀರು ಒದಗಿಸುವ ವ್ಯವಸ್ಥೆಯನ್ನು ಅವರು ಅಭಿವೃದ್ಧಿಪಡಿಸಿದರು. ಈ ಆವಿಷ್ಕಾರಕ್ಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಹಿಂದೆಯೂ ಹಲವು ಬಾರಿ ಉಪವಾಸ

ಇದು ವಾಂಗ್ಚುಕ್ ಅವರ ಮೊದಲ ಉಪ ವಾಸವಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ಲಡಾಖ್​ಗೆ ಸಂವಿಧಾನಾತ್ಮಕ ರಕ್ಷಣೆ, ಪರಿಸರ ಸಂರಕ್ಷಣೆ, ಗಣಿಗಾರಿಕೆ ನಿಯಂತ್ರಣ, ಹಿಮಾಲಯದ ಪರಿಸರ ಉಳಿವು, ಸ್ಥಳೀಯ ಜನರ ಹಕ್ಕುಗಳ ರಕ್ಷಣೆ ಮುಂತಾದ ಬೇಡಿಕೆ ಮುಂದಿಟ್ಟು ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. 2024ರಲ್ಲಿ ಲಡಾಖ್​ಗೆ ವಿಶೇಷ ಸಂವಿಧಾನಾತ್ಮಕ ಭದ್ರತೆ ಹಾಗೂ 6ನೇ ಅನುಸೂಚಿಯಡಿ ರಕ್ಷಣೆ ನೀಡಬೇಕೆಂದು ನಡೆಸಿದ ಉಪವಾಸ ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದೇ ಅವಧಿಯಲ್ಲಿ ಲೇಹ್​ನಿಂದ ದೆಹಲಿವರೆಗೆ ನಡೆದ ಪಾದ ಯಾತ್ರೆಯೂ ಸಾಕಷ್ಟು ಗಮನ ಸೆಳೆದಿತ್ತು.

ಯಾರು ಈ ಸೋನಂ ವಾಂಗ್ಚುಕ್?

ಇಂಜಿನಿಯರ್, ಶಿಕ್ಷಣ ಸುಧಾರಕ, ಪರಿಸರ ಹೋರಾಟಗಾರ, ಆವಿಷ್ಕಾರಕ ಹೀಗೆ ಬಹುಮುಖಿ ವ್ಯಕ್ತಿತ್ವದ ಸೋನಂ ವಾಂಗ್ಚುಕ್ ಲಡಾಖ್​ನವರು. ಅಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಿಸಲು ಹಲವು ಹೊಸ ಪ್ರಯೋಗಗಳನ್ನು ನಡೆಸಿದವರು. ವಿದ್ಯಾರ್ಥಿಗಳು ಪಾಠವನ್ನು ಕಂಠಪಾಠ ಮಾಡುವುದಕ್ಕಿಂತ ಪ್ರಮೇಯಗಳನ್ನು ಅರಿತು ಪರಿಹಾರ ಕಂಡುಕೊಳ್ಳುವ ಶಿಕ್ಷಣ ಪದ್ಧತಿಗೆ ಒತ್ತು ನೀಡಿದವರು. ಲಡಾಖ್​ನಲ್ಲಿ ಸ್ಥಾಪನೆಯಾದ ಪರ್ಯಾಯ ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಹೊಸ ರೀತಿಯ ಶಿಕ್ಷಣ ಒದಗಿಸುವ ಪ್ರಯತ್ನ ನಡೆಸಿದವರು. ಪರಿಸರ ಸಂರಕ್ಷಣೆ, ಹಿಮನದಿಗಳ ಸಂರಕ್ಷಣೆ, ನೀರಿನ ಸಮಸ್ಯೆ ಪರಿಹಾರ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲೂ ನಿರತರಾಗಿದ್ದಾರೆ.

ಥ್ರೀ ಈಡಿಯಟ್ಸ್

ಆಮಿರ್ ಖಾನ್ ಅಭಿನಯದ ಹಿಂದಿ ಚಿತ್ರ ಥ್ರೀ ಈಡಿಯಟ್ಸ್ ಮತ್ತು ಸೋನಂ ವಾಂಗ್ಚುಕ್ ಅವರ ನಡುವೆ ಸಂಬಂಧವಿದೆ. ಚಿತ್ರದ ಪ್ರಮುಖ ಪಾತ್ರ ರಾಂಚೋಗೆ ವಾಂಗ್ಚುಕ್ ಅವರ ವ್ಯಕ್ತಿತ್ವ ಹಾಗೂ ಶಿಕ್ಷಣದ ವಿಚಾರಧಾರೆ ಸ್ಪೂರ್ತಿ ಯಾಗಿತ್ತು ಎಂದು ಚಿತ್ರದ ನಿರ್ವಪಕರು ಹಿಂದೆ ಹೇಳಿದ್ದರು. ಆದರೆ ಈ ಸಿನಿಮಾ ಅವರ ಜೀವನಚರಿತ್ರೆಯಲ್ಲ. ಚಿತ್ರದಲ್ಲಿನ ಹಲವಾರು ಘಟನೆಗಳು ಕಾಲ್ಪನಿಕವಾಗಿದ್ದರೂ, ಸೃಜನಾತ್ಮಕ ಶಿಕ್ಷಣ, ಆವಿಷ್ಕಾರ ಮನೋಭಾವ ಹಾಗೂ ಸಂಪ್ರದಾಯಬದ್ಧ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವಕ್ಕೆ ವಾಂಗ್ಚುಕ್ ಅವರ ಜೀವನ ಪ್ರೇರಣೆಯಾಗಿದೆ.

ಹೋರಾಟಗಳಿಂದಾದ ಪ್ರಯೋಜನವೇನು?

ಹೋರಾಟಗಳಿಂದ ವಾಂಗ್ಚುಕ್ ಅವರ ಎಲ್ಲ ಬೇಡಿಕೆಗಳೂ ಈಡೇರಿವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಲಡಾಖ್​ನ ಪರಿಸರ ಸಮಸ್ಯೆಗಳು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದವು. ಹಿಮಾಲಯದ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕ ಜಾಗೃತಿ ಹೆಚ್ಚಾಯಿತು. ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಯಿತು. ಲಡಾಖ್​ನ ಜನರ ಬೇಡಿಕೆಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಚರ್ಚೆಯಾದವು. ಅವರ ಹೋರಾಟಗಳು ಚರ್ಚೆಗೆ ವೇಗ ನೀಡಿದವು. ಹಲವು ಪ್ರಮುಖ ಬೇಡಿಕೆಗಳು ಇನ್ನೂ ಪೂರ್ಣವಾಗಿ ಈಡೇರಿಲ್ಲ.

ಮುಂದೇನು?

ಜುಲೈ 20ರ ಪಾರ್ಲಿಮೆಂಟ್ ಚಲೋ ಬಳಿಕ ಸರ್ಕಾರದ ಪ್ರತಿಕ್ರಿಯೆ ಯಾವ ರೀತಿಯಲ್ಲಿರುತ್ತದೆ ಎಂಬುದರ ಮೇಲೆ ಈ ಹೋರಾಟದ ಮುಂದಿನ ಹಂತ ಅವಲಂಬಿತವಾಗಿದೆ. ಸರ್ಕಾರ ಮಾತುಕತೆಗೆ ಮುಂದಾದರೆ ಪರಿಹಾರದ ಸಾಧ್ಯತೆಗಳು ಮೂಡಬಹುದು. ಇಲ್ಲವಾದರೆ ಉಪವಾಸ ಮತ್ತಷ್ಟು ದೀರ್ಘಗೊಳ್ಳುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net