ಅವನ ದೃಷ್ಟಿಯಲ್ಲಿ ತತ್ವಾನಿಯಾದ ರಾಜ ಅಥವಾ ಭಾರತೀಯ ಪರಂಪರೆಯ ರಾಜರ್ಷಿ ದೇಶವನ್ನಾಳಬಲ್ಲನೇ ಹೊರತು ಕೇವಲ 18 ತುಂಬಿದ, ಯಾವ ರೀತಿಯ ಪ್ರಾವಂತಿಕೆಯೂ ಹತ್ತಿರವೇ ಸುಳಿಯದ ಮನುಷ್ಯರು ಓಟು ಚಲಾಯಿಸಿ ನಾಯಕನನ್ನು ಆರಿಸುವುದಲ್ಲ. ಇದನ್ನು ಕಂಡು ಸಾಕಷ್ಟು ಬೇಸತ್ತಿದ್ದ ಮುತ್ಸದ್ದಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿಯವರು "10 ಜನ ಮೂರ್ಖರು 9 ಜನ ಬುದ್ಧಿವಂತರನ್ನಾಳುವುದೇ ಪ್ರಜಾಪ್ರಭುತ್ವ' ಎಂದಿದ್ದರು. ಇದನ್ನು ಕೇಳಿ ಅರಚಿ ಪರಚಿಕೊಂಡು ಕೂಗಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಪ್ರಾವಂತರು ತಾನೇ ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲರು? ಬಹುಮತವಿದ್ದವರೇ ನಾಯಕರು; ಬಹುಜನರು ಅವರನ್ನು ಒಪ್ಪಿಕೊಂಡಿದ್ದಾರಲ್ಲ ಎಂದರೆ ಒಪ್ಪಿಕೊಂಡವರ ವಿಮರ್ಶಾ ಸಾಮರ್ಥ್ಯ ಎಷ್ಟು? ಓಟಿನ ಪರಿಣಾಮಗಳೇನು? ಎಷ್ಟು ಲಕ್ಷ ಕೋಟಿ ರೂ.ಗಳನ್ನು ಪ್ರತಿ ವರ್ಷ ಇವರ ಕೈಯಲ್ಲಿಡುತ್ತಿದ್ದೇವೆ? ಇಷ್ಟು ವರ್ಷ ಕೊಟ್ಟ ಹಣ ಎಲ್ಲಿಗೆ ಹೋಯಿತು? 50 ವರ್ಷದ ಹಿಂದಿನ ಭರವಸೆಗಳನ್ನೇ ಇಂದೂ ಕೂಗುತ್ತಿದ್ದೇವೇಕೆ? ಇದ್ದ ಕಾಡುಗಳು ಏನಾದವು? ಅಣೆಕಟ್ಟುಗಳಲ್ಲೆಕೆ ಹೂಳು ತುಂಬುತ್ತಿದೆ? ಸ್ನಾತಕೋತ್ತರರು ಏಕೆ ಕನ್ನಡ ಬರೆಯುವುದರಲ್ಲಿ ತಪ್ಪು ಮಾಡುತ್ತಾರೆ? ಸಾರ್ವಜನಿಕ ವಲಯಗಳಲ್ಲಿ ಭ್ರಷ್ಟತೆ ಏಕೆ ತಾಂಡವವಾಡುತ್ತಿದೆ? ಇದೆಲ್ಲವನ್ನೂ ಪರಾಮರ್ಶಿಸಿ "ಈ ಎಲ್ಲದಕ್ಕೂ ಪರಿಹಾರವಿರುವುದು ನಮ್ಮ ಒಂದು ಓಟಿನಲ್ಲಿ' ಎಂದು ಅವರು ಅರಿಯಬಲ್ಲರೇ? ನಾನು ಪಟ್ಟಿ ಮಾಡಿರುವುದು ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಣೆಯೂ ಅಲ್ಲ. ಕೋಮು ಗಲಭೆ, ಕರ್ತವ್ಯಹಿನತೆ, ಒಂದು ಪೈಸೆಯಷ್ಟೂ ದೇಶಪ್ರೇಮ, ದೇಶಾಭಿಮಾನ ಇಲ್ಲದಿರುವುದು... ಇದನ್ನು ಕುರಿತು ನಾನು ಪ್ರಸ್ತಾಪಿಸಿಯೇ ಇಲ್ಲ. ಇಲ್ಲಿ ಬಹುಮುಖ್ಯವಾಗಿ ತಿಳಿಯಬೇಕಾದ್ದು, ಈ ಅಮ್ಯ ಅಪರಾಧಗಳನ್ನು ಯಾರು ಮಾಡುತ್ತಿರುವರೋ, ಅವರಾರೂ ಪಾಕಿಸ್ತಾನ, ಚೀನಾದಿಂದ ಬಂದವರಲ್ಲ! ಅವರೆಲ್ಲ ಹುಟ್ಟಿದ್ದು ಭಾರತದಲ್ಲಿ, ಬೆಳೆದಿದ್ದು ಭಾರತೀಯರ ಮನೆಗಳಲ್ಲಿ, ಕಲಿತಿದ್ದು ಭಾರತೀಯ ಶಾಲೆಗಳಲ್ಲಿ.