ಗೆಳೆಯನೊಂದಿಗೆ ಮಾತನಾಡುವಾಗ ಅಳುತ್ತಿದ್ದ ತನ್ನ ಮೂರು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದ ಪಾಪಿ ತಾಯಿ | Murder

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಲಖನೌ: ಉತ್ತರ ಪ್ರದೇಶದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಗೆಳೆಯನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಮೂರು ವರ್ಷದ ಮಗು ನಿರಂತರವಾಗಿ ಅಳುತ್ತಿದ್ದ ಹಿನ್ನಲೆ ಕೋಪಗೊಂಡ ಪಾಪಿ ತಾಯಿಯೊಬ್ಬಳು ತನ್ನ ಮಗುವಿನ ಕತ್ತು ಹಿಸುಕಿ ಕೊಂದಿರುವ(Murder) ಘಟನೆ ಮಂಗಳವಾರ(ಜು. 28) ವರದಿಯಾಗಿದೆ.
ಜೂನ್ 28ರಂದು ಉತ್ತರ ಪ್ರದೇಶದ ಬಲದೇವ್ ಪೊಲೀಸ್ ಠಾಣೆ ವ್ಯಾಪ್ತಿಯ ಚೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗುವಿನ ತಂದೆ ಕೃಷ್ಣ ಮುರಳಿ ಗುಪ್ತಾ ಪೊಲೀಸರಿಗೆ ದೂರು ನೀಡಿದ ಬಳಿಕ ಆರೋಪಿ ತಾಯಿ ರುಚಿ ಜಿಂದಾಲ್​ಳನ್ನು ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಜೂನ್ 28ರಂದು ರುಚಿ ಜಿಂದಾಲ್ ತನ್ನ ಗೆಳೆಯನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂರು ವರ್ಷದ ಮಗ ನಿರಂತರವಾಗಿ ಅಳುತ್ತಲೇ ಇದ್ದ ಕಾರಣ ಕೋಪಗೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಮಗು ಪ್ರಜ್ಞಾ ಕಳೆದುಕೊಂಡ ಬಳಿಕ ಚಿಂತಿತಳಾದ ಮಹಿಳೆ ತನ್ನ ಪತಿ ಕೃಷ್ಣ ಮುರಳಿ ಅವರಿಗೆ ಕರೆ ಮಾಡಿ ಮಗ ಅನಾರೋಗ್ಯಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿದ್ದಾನೆ ಮತ್ತು ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದ್ದಾಳೆ. ತಕ್ಷಣ ಮನೆಗೆ ಆಗಮಿಸಿದ ಪತಿ ಮಗುವನ್ನು ಎತ್ತಿಕೊಂಡು ವಿವಿಧ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೊನೆಗೆ ಮಥುರಾದ ಆಸ್ಪತ್ರೆಯಲ್ಲಿ ಅಲ್ಲಿನ ವೈದ್ಯರು ಮಗು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ತಂದೆ ಮತ್ತು ಇತರ ಕುಟುಂಬ ಸದಸ್ಯರಿಗೆ ಮಗುವಿನ ಸಾವಿನ ಬಗ್ಗೆ ಯಾವುದೇ ಅನುಮಾನವಿರಲಿಲ್ಲ. ಹಿಂದಿನ ದಿನ ನೀಡಲಾದ ಪೋಲಿಯೊ ಹನಿಗಳಿಂದಾಗಿ ಮಗು ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಎಂದು ನಂಬಿ ಅಂತ್ಯ ಸಂಸ್ಕಾರ ಮಾಡಿದ್ದರು. ಬಳಿಕ ತಾಯಿ ರುಚಿಯ ನಡವಳಿಕೆಯಲ್ಲಿ ಅನುಮಾನಗೊಂಡ ಅವಳ ಸೋದರ ಮಾವ ಫೋನ್ ಪರಿಶೀಲಿಸಿದ್ದಾನೆ. ಅಲ್ಲಿ ಓರ್ವ ವ್ಯಕ್ತಿ ಜೊತೆ ನಿರಂತರವಾಗಿ ಮಾತನಾಡೋದು ಕಂಡು ಬಂದಿದೆ.
ಇದು ಮಗುವಿನ ಸಾವಿನ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಅದೇ ಸಮಯದಲ್ಲಿ ತನ್ನ ಮಗನನ್ನು ಕೊಲೆ ಮಾಡಿದ ಘಟನೆಯನ್ನು ಅವಳು ತನ್ನ ಗೆಳೆಯನೊಂದಿಗೆ ವಿವರಿಸುವುದನ್ನು ಪತಿ ಕೇಳಿಸಿಕೊಂಡಿದ್ದಾರೆ. ತಕ್ಷಣ ಪತಿ ತನ್ನ ಪತ್ನಿ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net