

ಸೂರತ್: ಗುಜರಾತಿನ ಪ್ರಸಿದ್ಧ ಗಿರ್ ಅರಣ್ಯ ( Gir Forest ) ಪ್ರದೇಶದಲ್ಲಿ ವನ್ಯಜೀವಿಗಳ ಸುರಕ್ಷತೆಗೆ ಕಾವಲು ಕಾಯಬೇಕಾದ ಸಿಬ್ಬಂದಿಯೇ ನಿರ್ಲಕ್ಷ್ಯ ತೋರಿ, ಬೈಕ್‌ನಲ್ಲಿ ಸಿಂಹವನ್ನು ಅಟ್ಟಾಡಿಸಿರುವ ಆಘಾತಕಾರಿ ಹಾಗೂ ವಿವಾದಾತ್ಮಕ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಗಾಳಿಗೆ ತೂರಿ, ರಕ್ಷಿಸಬೇಕಾದ ಮೃಗವನ್ನೇ ದನಗಳಂತೆ ಬೈಕ್‌ನಲ್ಲಿ ಬೆನ್ನಟ್ಟಿರುವ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಪ್ರವಾಸಿಗರ ಅಥವಾ ವಿಐಪಿಗಳ ಮನರಂಜನೆಗಾಗಿ ಈ ದುಷ್ಕೃತ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯ ಪ್ರದೇಶದ ಹೊರವಲಯದ ಅಂಬರ್ಡಿ ಸಫಾರಿ ಪಾರ್ಕ್‌ನಲ್ಲಿ ಈ ವಿಚಿತ್ರ ಮತ್ತು ಆತಂಕಕಾರಿ ಘಟನೆ ಜರುಗಿದೆ. ರಜೆ ದಿನಗಳಲ್ಲಿ ವಿಹಾರಕ್ಕೆ ಆಗಮಿಸಿದ್ದ ವಿಐಪಿಗಳಿಗೆ ವಿಶೇಷ ಮನರಂಜನೆ ನೀಡುವ ಸಲುವಾಗಿ ಈ ಸಾಹಸ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಮೂವರು ವ್ಯಕ್ತಿಗಳು ಬೈಕ್ ಏರಿ ಸಿಂಹವನ್ನು ಜಾನುವಾರುಗಳಂತೆ ಓಡಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಸಿಂಹವು ಬೈಕ್‌ನವರ ಮೇಲೆ ಯಾವುದೇ ದಾಳಿ ಮಾಡದೆ, ಬದಲಾಗಿ ಭಯದಿಂದ ಓಡಿಹೋಗುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಮರುಕ ಹಾಗೂ ಆತಂಕವನ್ನು ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳು ವೈರಲ್ ಆಗಿ ತೀವ್ರ ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಫಾರಿ ಪಾರ್ಕ್ ಒಳಗೆ ಅಲೆದಾಡುತ್ತಿದ್ದ ಸಿಂಹಗಳಿಗೆ ಆಹಾರ ನೀಡಿ ನಂತರ ಅವುಗಳನ್ನು ಮರಳಿ ಆವರಣಕ್ಕೆ (ಎನ್‌ಕ್ಲೋಸರ್) ಕಳುಹಿಸುವ ಪ್ರಕ್ರಿಯೆ ಇದಾಗಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಜೈಪಾಲ್ ಸಿಂಗ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ಕಾರ್ಯಾಚರಣೆಯನ್ನು ಜೀಪ್‌ಗಳ ಮೂಲಕ ನಡೆಸಲಾಗುತ್ತದೆ, ಆದರೆ, ಈ ಸಂದರ್ಭದಲ್ಲಿ ಕೆಲ ಸಿಬ್ಬಂದಿ ಅಜಾಗರೂಕತೆಯಿಂದ ಬೈಕ್‌ಗಳನ್ನು ಬಳಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ತೀವ್ರತೆಯನ್ನು ಪರಿಗಣಿಸಿ ಅರಣ್ಯ ಇಲಾಖೆಯು ಕಠಿಣ ಕ್ರಮ ಕೈಗೊಂಡಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮೂವರು ವ್ಯಕ್ತಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಎಂದು ಗುರುತಿಸಿ ಅವರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ.
ಸಹಾಯಕ ಅನ್ವೇಷಣಾಧಿಕಾರಿ ಮಿತೇಶ್ ವಾನಿಯಾ ಮಾತನಾಡಿ, ಸಿಬ್ಬಂದಿ ಸಿಂಹಕ್ಕೆ ಯಾವುದೇ ರೀತಿಯ ಹಾನಿ ಮಾಡಿಲ್ಲ ಮತ್ತು ಕೇವಲ ಅದನ್ನು ನೈಸರ್ಗಿಕ ಆವಾಸಸ್ಥಾನಕ್ಕೆ ಮರಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ವನ್ಯಜೀವಿಗಳ ರಕ್ಷಣಾ ವಲಯದಲ್ಲಿ ಇಂತಹ ನಿರ್ಲಕ್ಷ್ಯದ ಧೋರಣೆಯನ್ನು ಅನುಸರಿಸಿರುವುದು ಸರಿಯಲ್ಲ ಎಂಬ ಆಕ್ಷೇಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
2017ರಲ್ಲಿ ಆರಂಭಗೊಂಡ ಅಂಬರ್ಡಿ ಸಫಾರಿ ಪಾರ್ಕ್ ಸರ್ಕಾರಿ ಸ್ವಾಮ್ಯದ ಉದ್ಯಾನವಾಗಿದ್ದು, ಇಲ್ಲಿ ಸುಮಾರು ಎಂಟು ಸಿಂಹಗಳಿವೆ. ಇಂತಹ ಸೂಕ್ಷ್ಮ ವಲಯದಲ್ಲಿ ಪ್ರಾಣಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸಿಬ್ಬಂದಿಯೇ ಜವಾಬ್ದಾರಿಯುತವಾಗಿ ವರ್ತಿಸದೆ ಪ್ರಾಣಿಗಳನ್ನು ಬೆನ್ನಟ್ಟಿದ್ದು ವನ್ಯಜೀವಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಅಧಿಕೃತವಾಗಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಇಲಾಖೆಯು ತಾತ್ಕಾಲಿಕ ಕ್ರಮ ಕೈಗೊಂಡಿದ್ದರೂ, ಸಂರಕ್ಷಿತ ಪ್ರದೇಶಗಳಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಮತ್ತಷ್ಟು ಕಠಿಣ ಮಾರ್ಗಸೂಚಿಗಳು ಹಾಗೂ ನಿಗಾ ಅಗತ್ಯವಿದೆ ಎಂಬ ಒತ್ತಾಯ ಜೋರಾಗಿದೆ, (ಏಜೆನ್ಸೀಸ್).