ದುಷ್ಟಶಕ್ತಿ ದಹಿಸಿ ಸಂಭ್ರಮಿಸುವ ಹಬ್ಬ

festival celebrated
festival celebrated
Published on
ಫಾಲ್ಗುಣ ಮಾಸದಲ್ಲಿ ಚಂದ್ರನು ಸಿಂಹ ರಾಶಿಯ ಪೂರ್ವಾಫಾಲ್ಗುಣಿ ನಕ್ಷತ್ರ ಸೇರಿದ ಹುಣ್ಣಿಮೆಯಂದು ಪ್ರತಿ ವರ್ಷವೂ ಹೋಳಿ ಹುಣ್ಣಿಮೆ ಆಚರಿಸುವ ಸಂಪ್ರದಾಯವಿದೆ. ಉತ್ಸವಪ್ರಿಯಾಃ ಖಲು ಮನುಷ್ಯಾಃ ಎಂದು ಕಾಳಿದಾಸ ಹೇಳಿದಂತೆ ಈ ಹಬ್ಬಗಳು, ವಿವಿಧ ಉತ್ಸವಗಳು ನಮ್ಮ ಧಾರ್ವಿುಕ ಹಾಗೂ ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ.
ಪೌರಾಣಿಕ ಹಿನ್ನೆಲೆ: ನಾರದ ಪುರಾಣ ಹಾಗೂ ಭವಿಷ್ಯೋತ್ತರ ಪುರಾಣಗಳಲ್ಲಿ ಈ ಹೋಳಿ ಹಬ್ಬದ ಬಗ್ಗೆ ಉಲ್ಲೇಖವಿದೆ. ಕೃತಯುಗದಲ್ಲಿ ರಘುವೆಂಬ ಮಹಾಧರ್ವಿುಷ್ಟ ರಾಜನಿದ್ದ. ಪ್ರಜೆಗಳೂ ಪರಮಸಾತ್ವಿಕರು. ಆದರೆ ಆ ರಾಜ್ಯದಲ್ಲಿ ಢುಂಢಾ ಎಂಬ ರಾಕ್ಷಸಿ ರಾತ್ರಿಯಲ್ಲಿ ಎಲ್ಲರ ಮನೆಗೆ ಬಂದು ಮಕ್ಕಳನ್ನು ತುಂಬಾ ಪೀಡಿಸುತ್ತಿದ್ದಳು. ಇದರಿಂದ ಚಿಂತೆಗೊಳಗಾದ ರಾಜ ನಾರದರನ್ನು ಪ್ರಾರ್ಥಿಸಿದ. ಅದಕ್ಕೆ ನಾರದರು ‘ಢುಂಢಾ ರಾಕ್ಷಸಿಗೆ ಶಿವನ ವರವಿದೆ. ಉನ್ಮತ್ತ ಬಾಲಕರಿಂದ ನಿನ್ನನ್ನು ರಕ್ಷಿಸಲು ಸಾಧ್ಯವಿಲ್ಲ. ಅವರ ಉನ್ಮತ್ತತನದಿಂದ ನಿನ್ನ ಸೋಲು ಖಚಿತ ಎಂದು ಶಿವನ ವರ. ಆದ್ದರಿಂದ ಫಾಲ್ಗುಣದ ಪೌರ್ಣಿಮೆಯಂದು ಚಿಕ್ಕ ವಯಸ್ಸಿನ ಮಕ್ಕಳೆಲ್ಲ ಕೂಡಿಕೊಂಡು ಕರ್ಕಶ ಶಬ್ದ ಮಾಡುತ್ತಾ, ಓಣಿಗಳಲ್ಲಿ ಓಡಾಡಿ ಕಟ್ಟಿಗೆ, ಪೊರಕೆ, ಕುರುಳು (ಬೆರಣಿ) ಎಲ್ಲವನ್ನೂ ಕಳ್ಳತನದಿಂದಲೇ ತಂದು ಬೆಂಕಿಯನ್ನು ಹಾಕಿ ರಾಕ್ಷೋಘ್ನ ಮಂತ್ರಗಳಿಂದ ಹೋಮಿಸಿ, ಆ ಅಗ್ನಿಗೆ ಮೂರು ಪ್ರದಕ್ಷಿಣೆ ಹಾಕಿ, ಜೋರಾಗಿ ನಗುತ್ತಾ, ಯಥೇಚ್ಛವಾಗಿ ಅವಾಚ್ಯ ಶಬ್ದಗಳನ್ನು ಬಳಸುತ್ತಾ ಅವಳಿಗೆ ಬೈಯುತ್ತಾ ದುಷ್ಟ ಶಕ್ತಿಗಳೆಲ್ಲ ಹೋಮದಲ್ಲಿ ಲೀನಗೊಂಡು ನಾಶಗೊಳ್ಳಲಿ ಎಂದು ಪ್ರಾರ್ಥಿಸಬೇಕು’ ಎಂಬ ವಿಧಿಯನ್ನು ತಿಳಿಸುತ್ತಾರೆ.
ಜಲ್ಪಂತು ಸ್ವೇಚ್ಛಯಾ ಲೋಕಾ ನಿಶ್ಯಂಕಾ ಯಸ್ಯ ಯನ್ಮನಃ |
ತೇನ ಶಬ್ದೇನ ಸಾ ಪಾಪಾ ಹೋಮೇನ ಚ ನಿರಾಕೃತಾ ||
ಇದರಿಂದ ಭಯಗೊಂಡ ಢುಂಢೆಯು ನಾಶ ಹೊಂದುವಳು ಎಂದು ತಿಳಿಸುತ್ತಾರೆ. ಚಿಕ್ಕ ಶಿಶುಗಳನ್ನು ಇಂದು ಹೊರಗೆ ತರದೆ ಮನೆಯಲ್ಲಿಯೇ ರಕ್ಷಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಮರುದಿನ ಆ ಬೂದಿಯನ್ನು ಹಾಲು, ನೀರಿನೊಂದಿಗೆ ಮಿಶ್ರಗೊಳಿಸಿ ಪರಸ್ಪರ ಎರಚಿಕೊಳ್ಳುತ್ತಾರೆ. ಇದನ್ನೇ ‘ಧೂಲಿಪ್ರಕ್ಷೇಪ ಕ್ರೀಡಾ’ ’ಧೂಲೆಂಡಿ’ ಎಂದು ಕರೆದಿದ್ದಾರೆ. ಹೀಗೆ ನಕಾರಾತ್ಮಕತೆಯನ್ನು ಸಮಾಜದಿಂದ ಹೊರಹಾಕಲು ದುಷ್ಟ ಶಕ್ತಿಯ ದಹನ ಮಾಡಿ ಸಂಭ್ರಮಿಸುವುದೇ ಇದರ ಸಂಕೇತ.
ಇನ್ನೊಂದು ಪುರಾಣದ ಉಲ್ಲೇಖವೇನೆಂದರೆ ಹೋಲಿಕಾಸುರೆ ಎಂಬುವವಳು ಹಿರಣ್ಯಕಶಿಪುವಿನ ಸೋದರಿ. ಅವಳಿಗೆ ಬೆಂಕಿಯಿಂದ ಎಲ್ಲವನ್ನೂ ಸುಡುವ ವಿಶೇಷ ವರವಿತ್ತು. ಭಕ್ತ ಪ್ರಹ್ಲಾದನನ್ನು ಬೆಂಕಿಯಲ್ಲಿ ಹಾಕಿ ಸುಡಲು ಯತ್ನಿಸಿದಳು. ಆದರೆ ಭಕ್ತಿಯ ಜಯವಾಗಿ ದುಷ್ಟ ಶಕ್ತಿಯ ಅಂತ್ಯವೆಂಬಂತೆ ಅದೇ ಬೆಂಕಿಯಲ್ಲಿ ಅವಳು ಸುಟ್ಟು ಭಸ್ಮವಾದಳು. ಧರ್ಮಕ್ಕೆ ಎಂದಿಗೂ ಜಯವಾಗುತ್ತದೆ ಎಂಬ ಸಂದೇಶವನ್ನು ಸಾರಲು ಪ್ರತಿವರ್ಷ ಈ ಹೋಲಿಕಾ ದಹನ ಮಾಡಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸುವ ಪದ್ಧತಿಯಿದೆ.
ಕಾಮದಹನ: ಮಹಾ ವೈರಾಗ್ಯ ಶಿಖಾಮಣಿಗಳಾದ ರುದ್ರದೇವರ ತಪಸ್ಸಿಗೆ ಅಡ್ಡಿ ಮಾಡಬೇಕೆಂದು ಮನ್ಮಥ ಪ್ರಯತ್ನಿಸಿದ. ಆದರೆ ತ್ರಿಲೋಚನನ ಮೂರನೇ ಕಣ್ಣಿನ ಜ್ವಾಲೆಗೆ ಕಾಮ ಸುಟ್ಟು ಬೂದಿಯಾದ. ಅವನ ಹೆಂಡತಿ ರತಿಯ ಪ್ರಾರ್ಥನೆಗೆ ಶಿವನು ಕಾಮನು ಅನಂಗನಾಗಿ ಬದುಕಲಿ ಎಂದು ಆಶೀರ್ವದಿಸಿದ. ಸಾಧಕರ ಸಾಧನೆಗೆ ಅಡ್ಡಿ ಬರುವ ಕೆಟ್ಟ ಕಾಮನೆಗಳನ್ನು ರುದ್ರದೇವರು ನಾಶಪಡಿಸಲಿ ಎಂಬ ಆಧ್ಯಾತ್ಮಿಕ ಚಿಂತನೆಯೊಂದಿಗೆ ಈ ಕಾಮದಹನವೂ ಹುಣ್ಣಿಮೆಯ ಹಿಂದಿನ ದಿನ ನಡೆಯುತ್ತದೆ. ರತಿ-ಮನ್ಮಥರ ಚಿತ್ರವನ್ನು ಬರೆದು ಅಥವಾ ಗೊಂಬೆಗಳನ್ನು ಮಾಡಿ ಚಿತೆಯ ಮೇಲಿಟ್ಟು ಊರೆಲ್ಲ ಮೆರವಣಿಗೆ ಮಾಡಿ ಕಾಮದಹನ ಮಾಡುತ್ತಾರೆ. ಶಿವನ ಮೂರನೇ ಕಣ್ಣು ಅದು ಜ್ಞಾನಚಕ್ಷುಸ್ಸು. ಕೆಟ್ಟ ಆಸೆಗಳನ್ನು ಜ್ಞಾನವೆಂಬ ಅಗ್ನಿಯಿಂದ ಸುಟ್ಟು ಹಾಕಬೇಕೆಂಬ ಸಂದೇಶ.
ಹಲವು ಬಗೆಯ ಹೋಳಿ: ಈ ವರ್ಣರಂಜಿತ ಪರ್ವವು ತನ್ನದೇ ಆದ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದೆ. ವಿಜಯನಗರದ ರಾಜರಂತೂ ತಮ್ಮ ರಾಜಧಾನಿಯಲ್ಲಿ ಎಷ್ಟು ವೈಭವದಿಂದ ಹೋಳಿ ಹಬ್ಬ ಆಚರಿಸುತ್ತಿದ್ದರು ಎಂದು ಅನೇಕ ಪಾಶ್ಚಾತ್ಯ ಪ್ರವಾಸಿಗರೂ ಸಹ ವರ್ಣಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹುಣ್ಣಿಮೆಯಿಂದ 5 ದಿನಗಳವರೆಗೆ ಅಂದರೆ ರಂಗ ಪಂಚಮಿವರೆಗೆ ಬಣ್ಣ ಆಡುತ್ತಾರೆ. ಹಿಂದಿನ ದಿನವೇ ಕಾಮದಹನ, ಹೋಲಿಕಾದಹನ ಮಾಡುತ್ತಾರೆ. ಅನೇಕ ಕಡೆ ಹುಣ್ಣಿಮೆಯಂದೇ ದಹನ ಹಾಗೂ ಬಣ್ಣ ಎರಡನ್ನೂ ಮಾಡುತ್ತಾರೆ. ಉತ್ತರ ಭಾರತದಲ್ಲಿ ಕೃಷ್ಣ ರಾಧೆಯರ ಪವಿತ್ರ ಪ್ರೇಮದ ಸಂಕೇತವಾಗಿ ಬಣ್ಣವನ್ನು ಆಡುತ್ತಾರೆ. ಬೀದಿಬೀದಿಗಳಲ್ಲಿ ಸುಂದರ ಬಣ್ಣಗಳ ಲೋಕವೇ ಸೃಷ್ಟಿಯಾಗುತ್ತದೆ. ಬಣ್ಣಗಳಲ್ಲಿ ಮುಚ್ಚಿಹೋದ ಮಕ್ಕಳ ಮುಖವಂತೂ ನೋಡಲು ಬಲು ಚೆಂದ.
ವಿಶೇಷ: ಈ ಬಾರಿ ಹುಣ್ಣಿಮೆಯಂದು ಗ್ರಹಣ ಬಂದಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಮರುದಿನ ಬಣ್ಣವಾಡುತ್ತಾರೆ. ಹಬ್ಬದ ಹೆಸರಿನಲ್ಲಿ ಮದ್ಯಪಾನ ಮಾಡಿ ಅಸಭ್ಯತನದಿಂದ ವರ್ತಿಸುವುದಾಗಲೀ, ಅಶ್ಲೀಲ ಹಾಡುಗಳೊಂದಿಗೆ ಸ್ತ್ರೀ-ಪುರುಷ ರೆಂಬ ಗೌರವವನ್ನು ಮರೆತು ವರ್ತಿಸುವುದು ಭಾರತೀಯ ಸಂಸ್ಕೃತಿಯಲ್ಲ. ನಕಾರಾತ್ಮಕ ಶಕ್ತಿ, ದುಷ್ಟ ಕುಸಂಸ್ಕೃತಿ ಎರಡನ್ನೂ ಅಂತ್ಯಗೊಳಿಸುವುದೇ ಈ ಹಬ್ಬದ ಸಂದೇಶ. ಸಮಾಜದಲ್ಲಿ ಪರಸ್ಪರ ಒಗ್ಗಟ್ಟು, ಪ್ರೀತಿ ಗಟ್ಟಿಗೊಳಿಸಿ, ದ್ವೇಷ ಮರೆತು ಆನಂದ ದಿಂದ ಒಂದಾಗುವ ಸಂದೇಶ ಸಾರುವುದೇ ಈ ಬಣ್ಣದ ಹಬ್ಬ.
(ಲೇಖಕರು ಹವ್ಯಾಸಿ ಬರಹಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net