Viral Story: ಪಾನಿಪೂರಿ ವ್ಯಾಪಾರಿಯ ಕಣ್ಣೀರು ಒರೆಸಿದ ಗ್ರಾಹಕ: ಕಳೆದುಹೋದ ಬದುಕಿಗೆ ಸಿಕ್ಕಿತು ಹೊಸ ಜೀವ!

Viral Story
Viral Story
Published on
ಬೆಂಗಳೂರು: "ಸರ್, ನನಗೆ ಒಂದು ಕೆಲಸ ಬೇಕು..."- ಈ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ(Viral Story) ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಕೇವಲ ರುಚಿಯಾದ ಪಾನಿಪೂರಿ ತಿನ್ನಲು ಹೋಗುತ್ತಿದ್ದ ಗ್ರಾಹಕನೊಬ್ಬ, ಸಂಕಷ್ಟದಲ್ಲಿದ್ದ ವ್ಯಾಪಾರಿಯ ಬದುಕನ್ನೇ ಬದಲಿಸಲು ಮುಂದಾದ ಅಪರೂಪದ ಘಟನೆಯೊಂದು ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಕಾಣೆಯಾದ ವ್ಯಾಪಾರಿಯ ಹುಡುಕಾಟ

ಅಂಕಿತ್ ಪಾಂಡೆ ಎಂಬುವವರು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಈ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದಾರೆ. ಅಂಕಿತ್ ಅವರಿಗೆ ಪ್ರತಿದಿನ ಪಾನಿಪೂರಿ ತಿನ್ನುವ ಅಭ್ಯಾಸವಿತ್ತು. ಆದರೆ, ಕಳೆದ 10 ದಿನಗಳಿಂದ ಅವರು ಹೋಗುತ್ತಿದ್ದ ಪಾನಿಪೂರಿ ಅಂಗಡಿ ಮತ್ತು ಆ ವ್ಯಾಪಾರಿ ನಾಪತ್ತೆಯಾಗಿದ್ದರು. ಗಾಡಿ ನಿಲ್ಲಿಸುತ್ತಿದ್ದ ಜಾಗ ಖಾಲಿಯಿರುವುದನ್ನು ಕಂಡು ಆತಂಕಗೊಂಡ ಅಂಕಿತ್, ಹಳೆಯ 'ಜಿಪೇ' (GPay) ವಹಿವಾಟಿನ ಮೂಲಕ ಆತನ ಮೊಬೈಲ್ ಸಂಖ್ಯೆ ಪತ್ತೆಹಚ್ಚಿ ಕರೆ ಮಾಡಿದ್ದಾರೆ.

ಹೆಂಡತಿಯ ಚಿಕಿತ್ಸೆಗಾಗಿ ಮಾರಿದ್ದ ಗಾಡಿ

ಅಂಕಿತ್ ಕರೆ ಮಾಡಿದಾಗ ಆ ವ್ಯಾಪಾರಿ ತನ್ನ ಸಂಕಷ್ಟದ ಕಥೆ ಬಿಚ್ಚಿಟ್ಟಿದ್ದಾನೆ. ಆತನ ಪತ್ನಿ ಗಂಭೀರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಹಣ ಹೊಂದಿಸಲು ದಾರಿ ಕಾಣದೆ, ಜೀವನೋಪಾಯಕ್ಕೆ ಆಧಾರವಾಗಿದ್ದ ಪಾನಿಪೂರಿ ಗಾಡಿಯನ್ನೇ ಆತ ಮಾರಿಬಿಟ್ಟಿದ್ದ. ಈಗ ಕೈಯಲ್ಲಿ ಹಣವೂ ಇಲ್ಲ, ಇತ್ತ ವ್ಯಾಪಾರ ಮಾಡಲು ಗಾಡಿಯೂ ಇಲ್ಲ ಎಂಬ ಅಸಹಾಯಕ ಸ್ಥಿತಿಯಲ್ಲಿದ್ದ ಆತ, "ಸರ್, ನನಗೆ ಒಂದು ಕೆಲಸ ಕೊಡಿ" ಎಂದು ಅಂಕಿತ್ ಅವರಲ್ಲಿ ಕೇಳಿಕೊಂಡಿದ್ದಾನೆ.

ಸಹಾನುಭೂತಿಯಲ್ಲ, ಇದು ಬಂಡವಾಳ

ವ್ಯಾಪಾರಿಯ ಈ ಮಾತು ಅಂಕಿತ್ ಮನ ಕಲಕಿದೆ. ಆದರೆ ಅವರು ಕೇವಲ ಧರ್ಮಾರ್ಥವಾಗಿ ಹಣ ನೀಡುವ ಬದಲು, ಆತನಿಗೆ ಮತ್ತೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ನಿರ್ಧರಿಸಿದರು. ಸುಮಾರು 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಒಂದು ಸುಸಜ್ಜಿತ ಮಳಿಗೆಯನ್ನು (Shop) ಬಾಡಿಗೆಗೆ ಕೊಡಿಸಲು ಮುಂದಾಗಿದ್ದಾರೆ.
ಒಪ್ಪಂದದ ವಿವರ: ಪ್ರಮುಖ ಪ್ರದೇಶವೊಂದರಲ್ಲಿ 15,000 ರೂ. ಬಾಡಿಗೆಯ ಅಂಗಡಿ, 50,000 ರೂ. ಮುಂಗಡ ಹಣ ನೀಡಿ ಉದ್ಯಮ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ವೇತನ: ವ್ಯಾಪಾರಿಗೆ ತಿಂಗಳಿಗೆ 20,000 ರೂ. ಸಂಬಳ ನೀಡುವುದಾಗಿ ನಿರ್ಧರಿಸಲಾಗಿದ್ದು, ಆತ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಕೆಲಸ ಮಾಡಲಿದ್ದಾನೆ.
ನಿರೀಕ್ಷೆ: ಆ ವ್ಯಾಪಾರಿಯ ಆತ್ಮವಿಶ್ವಾಸ ಎಷ್ಟಿದೆಯೆಂದರೆ, ದಿನಕ್ಕೆ 5,000 ರೂ. ವ್ಯಾಪಾರವಾಗುವ ಭರವಸೆ ನೀಡಿದ್ದಾನೆ. ಆ ಮೂಲಕ ತಿಂಗಳಿಗೆ 1.5 ಲಕ್ಷ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದಾನೆ.
"ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಇನ್ನೂ ಬೆಳವಣಿಗೆಯ ಬಗ್ಗೆ ಯೋಚಿಸುತ್ತಿದ್ದಾನೆ. ಇದು ಬರಿ ಕನಿಕರವಲ್ಲ, ಆತನ ಮನಸ್ಥಿತಿಯ ಮೇಲೆ ನಾನು ಮಾಡಿದ ಹೂಡಿಕೆ" ಎಂದು ಅಂಕಿತ್ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. "ಮಾನವೀಯತೆ ಇನ್ನು ಬದುಕಿದೆ, ಒಳ್ಳೆಯ ಕೆಲಸಕ್ಕೆ ದೇವರು ಮೆಚ್ಚುತ್ತಾನೆ" ಎಂದು ಕೆಲವರು ಶ್ಲಾಘಿಸಿದರೆ, ಮತ್ತೆ ಕೆಲವರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
"ನನ್ನ ಸ್ನೇಹಿತರೂ ಹೀಗೆ ಹೂಡಿಕೆ ಮಾಡಿದ್ದರು, ಆದರೆ ಕೆಲಸಗಾರರು ಕೆಲವು ತಿಂಗಳು ಕೆಲಸ ಮಾಡಿ ದೊಡ್ಡ ಮೊತ್ತದ ಹಣ ಕೇಳುತ್ತಾರೆ, ಕೊಡದಿದ್ದರೆ ಕೈಕೊಟ್ಟು ಓಡಿಹೋಗುತ್ತಾರೆ" ಎಂದು ಒಬ್ಬರು ಅನುಭವ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಅಂಕಿತ್ ಅವರ ಸರಣಿ ಪೋಸ್ಟ್‌ಗಳನ್ನು ಗಮನಿಸಿ, "ನಿಮ್ಮ ಜೀವನದಲ್ಲಿ ಪ್ರತಿದಿನವೂ ಒಂದೊಂದು ಸಾಹಸಮಯ ಘಟನೆಗಳೇ ನಡೆಯುತ್ತವಲ್ಲ!" ಎಂದು ತಮಾಷೆ ಮಾಡಿದ್ದಾರೆ.
ಒಟ್ಟಿನಲ್ಲಿ, ಈ ಪಾನಿಪೂರಿ ವ್ಯಾಪಾರಿಯ ಕಥೆ ಈಗ ಉದ್ಯಮ ಮತ್ತು ಮಾನವೀಯತೆಯ ನಡುವಿನ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net