ಸಂಪಾದಕೀಯ: ಟ್ರಂಪ್​ಗೆ ಮುಖಭಂಗ

A blow to Trump
A blow to Trump
Published on
ಅಮೆರಿಕದ ಜನ್ಮಸಿದ್ಧ ಪೌರತ್ವ ಹಕ್ಕನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಅಲ್ಲಿನ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಪಾಲಕರು ಅಮೆರಿಕದ ಪ್ರಜೆಯಾಗಿಲ್ಲದಿದ್ದರೆ ಅಥವಾ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿಲ್ಲದಿದ್ದರೆ ಅಂತಹವರ ಮಕ್ಕಳ ಪೌರತ್ವನ್ನು ಪರಿಗಣಿಸಬಾರದು ಎಂದು ಟ್ರಂಪ್ ಅಮೆರಿಕದ ಏಜೆನ್ಸಿಗಳಿಗೆ ನಿರ್ದೇಶನ ನೀಡಿ, ಆದೇಶ ಹೊಡಿಸಿದ್ದರು. ಟ್ರಂಪ್ ಆತುರದ ನಿರ್ಧಾರಗಳನ್ನು ತಳೆದದ್ದು ಇದೇ ಮೊದಲೇನಲ್ಲ. ಆಮದು ಸುಂಕ ವಿಷಯದಲ್ಲಿಯೂ ಪದೇಪದೆ ನಿರ್ಧಾರಗಳನ್ನು ಬದಲಿಸುತ್ತ, ಇಡೀ ಜಾಗತಿಕ ವಲಯದಲ್ಲಿ ಗೊಂದಲ, ಅನಿಶ್ಚಿತತೆ ಮೂಡಿಸಿದರು. ಅಮೆರಿಕದ ಸುಪ್ರೀಂ ಕೋರ್ಟ್ ಸುಂಕ ವಿಷಯದಲ್ಲೂ ಟ್ರಂಪ್ ನಿರ್ಧಾರವನ್ನು 2026ರ ಫೆಬ್ರವರಿಯಲ್ಲಿ ಅಸಿಂಧುಗೊಳಿಸಿ, ‘ಸುಂಕ ವಿಧಿಸುವ ಅಧಿಕಾರ ಸಂಸತ್ತಿಗೆ ಇದೆಯೇ ಹೊರತು ಅಧ್ಯಕ್ಷರಿಗಲ್ಲ’ ಎಂದು ಹೇಳಿತ್ತು.
ಅಮೆರಿಕದ ಸುಪ್ರೀಂ ಕೋರ್ಟ್ ಜೂನ್ 30ರಂದು ನೀಡಿದ ಐತಿಹಾಸಿಕ ತೀರ್ಪಿನಿಂದ ಕಠಿಣ ವಲಸೆ ನೀತಿಗೆ ತೀವ್ರ ಹಿನ್ನಡೆಯಾಗಿದ್ದು, ಟ್ರಂಪ್ ಮುಖಭಂಗಕ್ಕೆ ಒಳಗಾಗಿದ್ದಾರೆ. ಸಂವಿಧಾನದ 14ನೇ ತಿದ್ದುಪಡಿಯನ್ನು ಎತ್ತಿಹಿಡಿಯುವ ಮೂಲಕ ಕೋರ್ಟ್ ಜನ್ಮಸಿದ್ಧ ಪೌರತ್ವವನ್ನು ಸಂರಕ್ಷಿಸಿದೆ. ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಅಮೆರಿಕದಲ್ಲಿ ಜನಿಸುವ ಮತ್ತು ಅಲ್ಲಿನ ಕಾನೂನು ವ್ಯಾಪ್ತಿಗೆ ಒಳಪಡುವ ಎಲ್ಲ ವ್ಯಕ್ತಿಗಳೂ ಅಲ್ಲಿನ ಪ್ರಜೆಗಳಾಗುತ್ತಾರೆ. ‘ಇದನ್ನು ಅಧ್ಯಕ್ಷರು ಕೇವಲ ಒಂದು ಆಜ್ಞೆಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲ’ ಎಂದು ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ ಪೀಠವು, ‘ಅಮೆರಿಕದ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ನಾಗರಿಕತ್ವ ನೀಡುವುದು ಸಂವಿಧಾನದ ಮೂಲ ಆಶಯ. ಅದನ್ನು ಬದಲಾಯಿಸಲು ಅಧ್ಯಕ್ಷರಿಗೆ ಅಧಿಕಾರವಿಲ್ಲ’ ಎಂದು ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್​ನ ಈ ನಿರ್ಧಾರವು ಅಲ್ಲಿ ನೆಲೆಸಿರುವ, ವಿಶೇಷವಾಗಿ ತಾತ್ಕಾಲಿಕ ವೀಸಾಗಳ ಮೇಲೆ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯರಿಗೆ ಸಂಜೀವಿನಿಯಾಗಿದೆ. ಅಮೆರಿಕದಲ್ಲಿ ಎಚ್-1ಬಿ, ಎಲ್-1, ಎಫ್-1 (ವಿದ್ಯಾರ್ಥಿ ವೀಸಾ) ಮುಂತಾದ ತಾತ್ಕಾಲಿಕ ವೀಸಾಗಳ ಮೇಲೆ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರು ಮತ್ತು ತಜ್ಞರು ಕೆಲಸ ಮಾಡುತ್ತಿದ್ದಾರೆ. ಟ್ರಂಪ್ ಆದೇಶ ಜಾರಿಯಾಗಿದ್ದರೆ, ಈ ದಂಪತಿಗೆ ಅಮೆರಿಕದಲ್ಲಿ ಹುಟ್ಟುವ ಮಕ್ಕಳಿಗೆ ಅಲ್ಲಿನ ಪೌರತ್ವ ಸಿಗುತ್ತಿರಲಿಲ್ಲ. ಕೋರ್ಟ್ ತೀರ್ಪಿನಿಂದಾಗಿ ಈಗ ಅವರ ಮಕ್ಕಳಿಗೆ ಹುಟ್ಟಿನಿಂದಲೇ ಅಮೆರಿಕದ ನಾಗರಿಕತ್ವ ಸಿಗುವುದು ಖಾತರಿಯಾಗಿದೆ.
ಭಾರತೀಯರಿಗೆ ಅಮೆರಿಕದಲ್ಲಿ ಗ್ರೀನ್ ಕಾರ್ಡ್ (ಶಾಶ್ವತ ನಿವಾಸಿ ಹಕ್ಕು) ಸಿಗಲು ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಪಾಲಕರು ಗ್ರೀನ್ ಕಾರ್ಡ್ ಪಡೆಯುವ ಮುನ್ನವೇ ಮಗು ಜನಿಸಿದರೆ, ಆ ಮಗುವಿನ ಭವಿಷ್ಯ ತೂಗುಯ್ಯಾಲೆಯಲ್ಲಿ ಸಿಲುಕುತ್ತಿತ್ತು. ಈಗ ಕೋರ್ಟ್ ಪಾಲಕರ ವೀಸಾ ಸ್ಥಿತಿಯನ್ನು ಬದಿಗಿಟ್ಟು ಮಗುವಿನ ಹಕ್ಕನ್ನು ಎತ್ತಿಹಿಡಿದಿರುವುದರಿಂದ ಭಾರತೀಯ ಪಾಲಕರ ದೊಡ್ಡ ಆತಂಕ ದೂರವಾಗಿದೆ. ಈ ತೀರ್ಪು ಅಮೆರಿಕದ ವಲಸಿಗರಿಗೆ ಅವರ ಹಕ್ಕನ್ನು ಮತ್ತೊಮ್ಮೆ ಖಚಿತಪಡಿಸಿದೆ. ಅಮೆರಿಕದ ಪ್ರಜೆಯಾಗಿ ಹುಟ್ಟುವ ಮಗುವಿಗೆ ಅಲ್ಲಿನ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯಗಳು ಮತ್ತು ಭವಿಷ್ಯದಲ್ಲಿ ಉದ್ಯೋಗದ ಹಕ್ಕುಗಳು ಸಿಗುತ್ತವೆ. ಕೋರ್ಟ್ ತೀರ್ಪು ಭಾರತೀಯ ಮೂಲದ ಮುಂದಿನ ಪೀಳಿಗೆಯ ಈ ಎಲ್ಲ ಹಕ್ಕುಗಳನ್ನು ಕಾನೂನುಬದ್ಧವಾಗಿ ಸುರಕ್ಷಿತವಾಗಿರಿಸಿದೆ. ಮುಖ್ಯವಾಗಿ, ಈ ಮೂಲಕ ಟ್ರಂಪ್ ಅವರ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಬಿದ್ದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net