ವಿಜಯ್​ ಸರ್ಕಾರಕ್ಕೆ ಬೆಂಬಲಿಸಿದ 21 ಶಾಸಕರಿಗೆ ಬಿಗ್ ರಿಲೀಫ್​! ಅಷ್ಟಕ್ಕೂ ಆಗಿದ್ದೇನು? | Vijay Government ​

ತಮಿಳುನಾಡು ರಾಜಕೀಯ
ತಮಿಳುನಾಡು ರಾಜಕೀಯ
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ರಾಜಕೀಯದಲ್ಲಿ ರೋಚಕ ತಿರುವು
  • ಪಕ್ಷದ ವಿಪ್ ಉಲ್ಲಂಘಿಸಿದ 21 ಬಂಡಾಯ ಶಾಸಕರನ್ನು ಅನರ್ಹಕ್ಕೆ ಸಲ್ಲಿಸಿದ್ದ ಅರ್ಜಿ ವಜಾ
  • ವಿಜಯ್​ ಸರ್ಕಾರಕ್ಕೆ ಬೆಂಬಲಿಸಿದ 21 ಶಾಸಕರಿಗೆ ಬಿಗ್ ರಿಲೀಫ್
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಸದ್ಯ ಬಿರುಗಾಳಿ ಸೃಷ್ಟಿಸಿರುವ ಹೈಡ್ರಾಮಾಗೆ ಈಗ ಅತ್ಯಂತ ರೋಚಕ ತಿರುವು ಸಿಕ್ಕಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳು ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಜೈ ಎಂದಿದ್ದ ಬಂಡಾಯ ಶಾಸಕರ ವಿಚಾರದಲ್ಲಿ, ಎಐಎಡಿಎಂಕೆ (AIADMK) ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಸದ್ಯ ಭಾರಿ ಹಿನ್ನಡೆಯಾಗಿದೆ.
ಪಕ್ಷದ ವಿಪ್ ಉಲ್ಲಂಘಿಸಿದ 21 ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕೆಂದು ಇಪಿಎಸ್ ಸಲ್ಲಿಸಿದ್ದ ಅರ್ಜಿಯನ್ನು ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ಇಂದು ವಜಾಗೊಳಿಸಿದ್ದಾರೆ. ಮೇ.13ರಂದು ನಡೆದಿದ್ದ ವಿಶ್ವಾಸಮತಯಾಚನೆ ವೇಳೆ ಪಕ್ಷದ ಆದೇಶವನ್ನು ಮೀರಿ ದಳಪತಿ ವಿಜಯ್ ಸರ್ಕಾರದ ಪರವಾಗಿ ಮತ ಹಾಕಿದ್ದ 21 ಶಾಸಕರನ್ನು ಅನರ್ಹಗೊಳಿಸಲು ಇಪಿಎಸ್ ಕ್ಯಾಂಪ್ ಅರ್ಜಿ ಸಲ್ಲಿಸಿತ್ತು. ಆದರೆ, ಇಪಿಎಸ್ ಅವರೇ ನಂತರ ಕಳುಹಿಸಿದ ಪತ್ರಗಳನ್ನು ಆಧರಿಸಿ, ಈ ಎಂಎಲ್​ಎಗಳ ಮೇಲಿನ ಶಿಸ್ತು ಕ್ರಮವನ್ನು ಕೈಬಿಡಲಾಗಿದೆ ಎಂದು ಸ್ಪೀಕರ್ ಘೋಷಿಸಿದ್ದಾರೆ. ಇದು ಸದ್ಯ ಬಂಡಾಯ ಶಾಸಕರು ನಿಟ್ಟುಸಿರು ಬಿಡುವಂತಾಗಿದೆ.

ವಿಶ್ವಾಸಮತದ ಹಿಂದಿದ್ದ ಟ್ವಿಸ್ಟ್​ಗಳ ಕಥೆ ಏನು?

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡು ರಾಜಕೀಯ ಹೊಸ ದಿಕ್ಕಿನತ್ತ ತಿರುಗಿತ್ತು. ತಮಿಳು ನಟ ವಿಜಯ್ ನಾಯಕತ್ವದ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದ ಮ್ಯಾಜಿಕ್ ನಂಬರ್ ತಲುಪಲು ವಿಫಲವಾಗಿತ್ತು. ಇತ್ತ AIADMK 47 ಸ್ಥಾನಗಳನ್ನು ಅದಾಗಲೇ ಗೆದ್ದಿತ್ತು. ಮ್ಯಾಜಿಕ್ ನಂಬರ್ ಕೊರತೆಯಿಂದಾಗಿ ವಿಜಯ್ ಅವರು ಕಾಂಗ್ರೆಸ್, ಐಯುಎಂಎಲ್, ವಿಸಿಕೆ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಡೆಗೂ ಮೈತ್ರಿ ಸರ್ಕಾರ ರಚಿಸಿದರು.

ಮೇ 13ರ ಪ್ಲಾನ್ ಉಲ್ಟಾ!

ಈ ದಿನದಂದು ನಡೆದ ಬಹುಮತ ಸಾಬೀತು ಪಡಿಸುವ ಪರೀಕ್ಷೆ ವೇಳೆ ದೊಡ್ಡ ಹೈಡ್ರಾಮಾವೇ ನಡೆಯಿತು. ಎಐಎಡಿಎಂಕೆ ಹಿರಿಯ ನಾಯಕರಾದ ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ದೊಡ್ಡ ರೆಬೆಲ್ ಗ್ರೂಪ್ ಇಪಿಎಸ್ ಆದೇಶ ದಿಕ್ಕರಿಸಿ ವಿಜಯ್ ಸರ್ಕಾರದ ಪರ ಮತ ಚಲಾಯಿಸಿತು. ಇದರಿಂದ ವಿಜಯ್ ಸರ್ಕಾರದ ಬಲ 119ರಿಂದ ನೇರವಾಗಿ 144ಕ್ಕೆ ಏರಿಕೆಯಾಗಿ, ಸರ್ಕಾರ ನಿರಾಯಾಸವಾಗಿ ಗೆದ್ದು ಬೀಗಿತು.
ಬಂಡಾಯ ಬಣದಲ್ಲಿದ್ದ ಐದು ಶಾಸಕರು ಯು-ಟರ್ನ್ ಹೊಡೆದು ಮತ್ತೆ ಇಪಿಎಸ್ ಕ್ಯಾಂಪ್ ಸೇರಿಕೊಂಡರು. ಇದರಿಂದ ಇಪಿಎಸ್ ಪರ ಇರುವ ಶಾಸಕರ ಸಂಖ್ಯೆ 27ಕ್ಕೆ ಏರಿತು. ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ (Anti-Defection Law) ಒಂದು ಪಕ್ಷದ ಶಾಸಕರು ಮತ್ತೊಂದು ಪಕ್ಷದೊಂದಿಗೆ ಅಧಿಕೃತವಾಗಿ ವಿಲೀನವಾಗಲು ಅಥವಾ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ಮೂಲ ಪಕ್ಷದ ಮೂರನೇ ಎರಡರಷ್ಟು (2/3) ಶಾಸಕರ ಬೆಂಬಲ ಬೇಕು.
AIADMK ಪಾಲಿಗೆ ಈ ಮ್ಯಾಜಿಕ್ ನಂಬರ್ 31 ಆಗಿತ್ತು. ಆದರೆ, ಬಂಡಾಯ ಬಣದ ಬಳಿ ಕೇವಲ 25 ಶಾಸಕರು ಇದ್ದಿದ್ದರಿಂದ ಅವರಿಗೆ ಅಧಿಕೃತವಾಗಿ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ವೇಳೆ, ಈ 25 ಎಂಎಲ್​ಎಗಳ ಪೈಕಿ ನಾಲ್ವರು ಶಾಸಕರು ಈಗಾಗಲೇ ಅಧಿಕೃತವಾಗಿ ವಿಜಯ್ ಅವರ ಟಿವಿಕೆ ಪಕ್ಷವನ್ನು ಸೇರಿಕೊಂಡಿದ್ದಾರ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net