ಕೌಟುಂಬಿಕ ಕಲಹಕ್ಕೆ ಬಲಿಯಾದ ಹಸುಗೂಸು: ಮಗುವಿಗೂ ವಿಷವಿಕ್ಕಿ ತಾಯಿ ಆತ್ಮಹತ್ಯೆ! | Suicide

Suicide
Suicide
Published on
ಹೈದರಾಬಾದ್: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ 27 ವರ್ಷದ ಮಹಿಳೆಯೊಬ್ಬರು ತನ್ನ 10 ತಿಂಗಳ ಮಗುವಿಗೆ ವಿಷ ನೀಡಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್​ನಲ್ಲಿ ಶನಿವಾರ ನಡೆದಿದೆ.
ಮೃತ ಮಹಿಳೆಯನ್ನು ಸುಷ್ಮಾ (27) ಎಂದು ಗುರುತಿಸಲಾಗಿದೆ. ಇವರು ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಯಶವಂತ್ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಯಶವರ್ಧನ್ ರೆಡ್ಡಿ ಎಂಬ 10 ತಿಂಗಳ ಗಂಡು ಮಗು ಇತ್ತು. ಸುಷ್ಮಾ ಇತ್ತೀಚೆಗೆ ಕುಟುಂಬದ ಕಾರ್ಯಕ್ರಮವೊಂದರ ಶಾಪಿಂಗ್‌ಗಾಗಿ ನಗರದ ಸರೂರ್‌ನಗರದಲ್ಲಿರುವ ತನ್ನ ತಾಯಿ ಲಲಿತಾ (44) ಅವರ ಮನೆಗೆ ಬಂದಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಷ್ಮಾ ಮತ್ತು ಅವರ ಪತಿ ಯಶವಂತ್ ನಡುವೆ ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ವಿಷಯಗಳಿಗೆ ಪದೇ ಪದೇ ಜಗಳವಾಗುತ್ತಿತ್ತು. ಇದೇ ಮಾನಸಿಕ ಒತ್ತಡದಲ್ಲಿ ಸುಷ್ಮಾ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಶಾಪಿಂಗ್ ಮುಗಿಸಿ ತಾಯಿ ಮನೆಯಲ್ಲಿದ್ದ ಸಂದರ್ಭದಲ್ಲಿ, ಸುಷ್ಮಾ ತನ್ನ ಮಗುವಿನೊಂದಿಗೆ ಮತ್ತೊಂದು ಕೋಣೆಗೆ ತೆರಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಅಲ್ಲಿ ಮಗುವಿಗೆ ವಿಷವುಣಿಸಿ, ನಂತರ ತಾವೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ದುರಂತ ಅಂತ್ಯ
ರಾತ್ರಿ ಸುಮಾರು 9:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದ ಯಶವಂತ್ ರೆಡ್ಡಿ, ಬೆಡ್‌ರೂಮ್ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಬಾಗಿಲು ಒಡೆದಿದ್ದಾರೆ. ಈ ವೇಳೆ ಪತ್ನಿ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಪರೀಕ್ಷಿಸಿದಾಗ ಇಬ್ಬರೂ ಮೃತಪಟ್ಟಿರುವುದು ದೃಢಪಟ್ಟಿದೆ. ಈ ದೃಶ್ಯವನ್ನು ಕಂಡು ಆಘಾತಕ್ಕೊಳಗಾದ ಸುಷ್ಮಾ ಅವರ ತಾಯಿ ಲಲಿತಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net