80 ವರ್ಷಗಳ ಸ್ವಾತಂತ್ರ್ಯ; ದೇಶದ ಮುಂದಿರುವ ಸವಾಲುಗಳೇನು? | What are the challenges facing the country?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 80ನೇ ಸ್ವಾತಂತ್ರ್ಯ ದಿನದ ಹೊಸ್ತಿಲಲ್ಲಿ ಭಾರತದ ಭವಿಷ್ಯದ ಬಗ್ಗೆ ಚರ್ಚೆ
  • 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಭಾರತ
  • ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕುವ ಕುರಿತು ಒತ್ತಾಯ
ನವದೆಹಲಿ: ಭಾರತ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಸಮಯದಲ್ಲಿ, ದೇಶದ ಮುಂದಿರುವ ಸವಾಲುಗಳು ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿ ಬಗ್ಗೆ ಚರ್ಚೆ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೇಳಿದ್ದ ‘ಪಂಚ ಪ್ರಾಣ’ಗಳ ಪೈಕಿ ವಸಾಹತುಶಾಹಿ ವ್ಯವಸ್ಥೆಯಿಂದ ಹೊರಬರುವ ಸಂಕಲ್ಪವೂ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ.
ಇನ್ನು, ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ, ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ಜೀವನದಲ್ಲಿ ಬ್ರಿಟಿಷರ ಕಾಲದ ಕೆಲವು ಪದ್ಧತಿಗಳು ಹಾಗೂ ಮನೋಭಾವಗಳು ಇನ್ನೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯವಿದೆ. ದೇಶದ ಪ್ರಜೆಗಳ ಅಗತ್ಯಗಳಿಗೆ ತಕ್ಕಂತೆ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಆಡಳಿತ ವ್ಯವಸ್ಥೆಯಲ್ಲೂ ಬದಲಾವಣೆ ಅಗತ್ಯ

ವಿಶೇಷವಾಗಿ, ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ತರಬೇಕಾದ ಅಗತ್ಯವಿದೆ. ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬ ಟೀಕೆಗಳಿವೆ. ನಾವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿ ಸಾಧಿಸಬೇಕಾದರೆ ಆಡಳಿತ ವ್ಯವಸ್ಥೆಯಲ್ಲೂ ದೊಡ್ಡ ಬದಲಾವಣೆ ಅಗತ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಬ್ರಿಟಿಷರ ಕೆಲ ಪದ್ಧತಿಗಳು ಇನ್ನೂ ಜೀವಂತ

ಭಾರತದ ಇತಿಹಾಸದಲ್ಲಿ ಹಲವು ಶತಮಾನಗಳು ವಿದೇಶಿ ಆಕ್ರಮಣಗಳು ಮತ್ತು ಬ್ರಿಟಿಷರ ವಸಾಹತುಶಾಹಿ ಆಡಳಿತದ ದೇಶವನ್ನು ಕಾಡಿದೆ. ಸ್ವಾತಂತ್ರ್ಯ ನಂತರ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದ್ದರೂ, ಬ್ರಿಟಿಷರ ಕಾಲದ ಕೆಲವು ಆಡಳಿತ ಪದ್ಧತಿಗಳು ಇನ್ನೂ ಉಳಿದಿವೆ. ಇದರ ಜತೆಗೆ, ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತ ಆರ್ಥಿಕವಾಗಿ ಬೆಳೆಯುವುದರ ಜತೆಗೆ ಕೈಗಾರಿಕೆ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲೂ ಮತ್ತಷ್ಟು ಗಟ್ಟಿಯಾಗಬೇಕಿದೆ. ಚೀನಾ ಸೇರಿದಂತೆ ಜಾಗತಿಕ ಶಕ್ತಿಗಳೊಂದಿಗೆ ಸ್ಪರ್ಧಿಸುವ ಸಂದರ್ಭದಲ್ಲಿ ಭಾರತದ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವುದು ಅನಿವಾರ್ಯ.

ದೇಶ ಕಟ್ಟುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಜನರ ಸಹಕಾರ, ಉದ್ಯಮಶೀಲತೆ, ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕ ಮನೋಭಾವವೂ ಮುಖ್ಯ. ಸ್ವಾತಂತ್ರ್ಯ ಪಡೆದು 80 ವರ್ಷಗಳ ನಂತರ ಭಾರತ ಎಷ್ಟು ಮುಂದೆ ಬಂದಿದೆ ಎಂಬುದರ ಜತೆಗೆ, ಮುಂದಿನ 20 ವರ್ಷಗಳಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಪ್ರಶ್ನೆಯೂ ಈಗ ಹೆಚ್ಚು ಮಹತ್ವ ಪಡೆದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net