ಬಿಹಾರದ ದೇಗುಲದಲ್ಲಿ ಕಾಲ್ತುಳಿತ; ಎಂಟು ಮಹಿಳೆಯರು ಸಾವು, ಹಲವರ ಸ್ಥಿತಿ ಗಂಭೀರ..Bihar Nalanda Temple Stampede
Bihar Nalanda Temple Stampede
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶೀತಲಾ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು
ಜನದಟ್ಟಣೆಯಿಂದ ಕಾಲ್ತುಳಿತ ಎಂಟು ಮಹಿಳೆಯರು ಮೃತ, ಹಲವರ ಸ್ಥಿತಿ ಗಂಭೀರ
ಮಿತಿ ಮೀರಿದ ಜನದಟ್ಟಣೆಯಿಂದಾಗಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತ
ನಳಂದ: ಬಿಹಾರದ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಕಾಲ್ತುಳಿತ (Bihar Nalanda Temple Stampede) ಉಂಟಾಗಿ ಸ್ಥಳದಲ್ಲಿದ್ದ ಎಂಟು ಮಂದಿ ಮಹಿಳೆಯರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಇನ್ನೂ ಕೆಲವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಚೈತ್ರ ಮಾಸದ ಕೊನೆ ದಿನವಾದ ಕಾರಣ, ಬಿಹಾರದ ನಳಂದ ಜಿಲ್ಲೆಯ ಶೀತಲಾ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿತ್ತು. ದೇವರ ಪೂಜೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಮಾಯಿಸಿದ್ದರು.
ಈ ವೇಳೆ ತೀವ್ರ ಜನದಟ್ಟಣೆಯಿಂದ ಕಾಲ್ತುಳಿತ ಉಂಟಾಗಿ ಹಲವರು ಗಾಯಗೊಂಡು, ಎಂಟು ಮಂದಿ ಮೃತಪಟ್ಟಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ದೇಗುಲಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಕಾಲ್ತುಳಿತ ಘಟನೆ ಸಂಭವಿಸಿದ್ದು ಹೇಗೆ ಎಂದು ಪತ್ತೆ ಹಚ್ಚುವಂತೆ ಸಮಗ್ರ ತನಿಖೆಗೆ ಬಿಹಾರ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಬಿಹಾರ ಸರ್ಕಾರ ಸೂಚನೆ ನೀಡಿದೆ. ಜೊತೆಗೆ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿದೆ.
ಡಿಸಿಎಂ ಹೇಳಿದ್ದಿಷ್ಟು
"ನಳಂದದ ಬಳಿ ಅತ್ಯಂತ ಹೃದಯ ವಿದ್ರಾವಕ ಘಟನೆ ನಡೆದಿದೆ. ಸಂತ್ರಸ್ತ ಕುಟುಂಬಸ್ಥರೊಂದಿಗೆ ಸರ್ಕಾರ ಎಂದಿಗೂ ಇರುತ್ತದೆ. ಅವರಿಗೆ ಬೇಕಾಗುವ ಎಲ್ಲ ಸಹಾಯ ಹಾಗೂ ಪರಿಹಾರವನ್ನು ನೀಡಲಾಗುತ್ತದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗುತ್ತದೆ. ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಆತ್ಮಕ್ಕೆ ಶಾಂತಿ ನೀಡಲೆಂದು ನಾನು ಪ್ರಾರ್ಥಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಪ್ರಾರ್ಥಿಸುವುದಾಗಿ ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಆಂಧ್ರದಲ್ಲಿ ನಡೆದಿತ್ತೊಂದು ಘಟನೆ
ಕಳೆದ ವರ್ಷ, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಒಂಬತ್ತು ಭಕ್ತರು ಸಾವನ್ನಪ್ಪಿದರು, ಅದರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು, ಮತ್ತು ಇತರ 13 ಜನರು ಗಾಯಗೊಂಡಿದ್ದರು,(ಏಜೆನ್ಸೀಸ್).