

ರಾಜಸ್ಥಾನದ ಕೋಟಾದಲ್ಲಿರುವ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಅಪಘಾತ.
ಹಳ್ಳಕ್ಕೆ ಬಿದ್ದ ಭೋಪಾಲ್ನಿಂದ ಖಾಟು ಶ್ಯಾಮ್ಗೆ ಹೊರಟಿದ್ದ ಬಸ್, 8 ಜನರು ಸಾವು.
MBS ಆಸ್ಪತ್ರೆ ಹಾಗೂ ನ್ಯೂ ಮೆಡಿಕಲ್ ಕಾಲೇಜಿನಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ.
ಕೋಟಾ: ಇಲ್ಲಿನ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ( Delhi-Mumbai expressway) ಶನಿವಾರ (ಅ.17) ಬೆಳ್ಳಂಬೆಳ್ಳಗ್ಗೆ ಭೀಕರ ಅಪಘಾತ ಸಂಭವಿಸಿದೆದೆ. ಭೋಪಾಲ್ನಿಂದ ಖಾಟು ಶ್ಯಾಮ್ಗೆ ಹೊರಟಿದ್ದ ಖಾಸಗಿ ಟ್ರಾವೆಲ್ ಬಸ್ ಕಂದಕಕ್ಕೆ ಉರಳಿ ಬಿದ್ದ ಪರಿಣಾಮ, ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದು, 17 ಮಂದಿ ಗಾಯಗೊಂಡಿದ್ದಾರೆ.
ಬೆಳಗ್ಗೆ 6:30 ರ ಸುಮಾರಿಗೆ 25 ಕ್ಕೂ ಹೆಚ್ಚು ಪ್ರಯಾಣಿಕರನ್ನು ಭೋಪಾಲ್ನಿಂದ ಖಾಟು ಶ್ಯಾಮ್ಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಬೆಳಗ್ಗೆ ಸುಮಾರು 8 ಗಂಟೆಯ ಸುಮಾರಿಗೆ ರಕ್ಷಣಾ ಸಿಬ್ಬಂದಿಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ಬಸ್ನಲ್ಲಿ ಸಿಲುಕಿದ್ದ 17 ಮಂದಿಯನ್ನು ರಕ್ಷಿಸಿದ್ದಾರೆ.
ಸದ್ಯ ಗಾಯಗೊಂಡಿರುವ 17 ಮಂದಿಗೆ MBS ಆಸ್ಪತ್ರೆ ಮತ್ತು ನ್ಯೂ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಎಂಟು ಜನರಲ್ಲಿ ಐವರು ಮಹಿಳೆಯರಾಗಿದ್ದಾರೆ. ಮೃತರನ್ನು ಅರುಣಾ, ವೈಷ್ಣವಿ, ತ್ರಿಶಾ, ಕೃಷ್ಣ, ಅನಿತಾ, ಓಂ, ಸೂರ್ಯವಂಶಿ ಮತ್ತು ರಾಜು ಎಂದು ಗುರುತಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಪಿಯೂಷ್ ಸಮಾರಿಯಾ ಮತ್ತು ಐಜಿ ಹರೇಂದ್ರ ಮಹಾವರ್ ಅವರು ಎಂಡಿಎಸ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಪರಿಸ್ಥಿತಿ ವಿಚಾರಿದರು. ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಿದರು. ಜೊತೆಗೆ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ 8 ಜನರು ಮೃತಪಟ್ಟಿದ್ದಾರೆ. ಇತರರು ಗಾಯಗೊಂಡಿದ್ದಾರೆ. ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಇಲ್ಲಿಯವರೆಗೆ ವರದಿಯಾಗಿರುವ ಒಟ್ಟು ಸಾವುಗಳ ಸಂಖ್ಯೆ ಎಂಟು ಎಂದು ಸ್ಪಷ್ಟನೆ ಕೊಟ್ಟರು.
ಹೆಚ್ಚುವರಿ ಎಸ್ಪಿ ರಾಮ್ ಕಲ್ಯಾಣ್ ಮೀನಾ ಮಾತನಾಡಿ, ಖಾಸಗಿ ಮಿನಿ ಬಸ್ ಭೋಪಾಲ್ನಿಂದ ಹೊರಟಿತ್ತು ಕೋಟಾದ ಸಿಮಾಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಎಂಟು ಲೇನ್ ಎಕ್ಸ್ಪ್ರೆಸ್ವೇಯಲ್ಲಿ ಚಲಾಯಿಸುತ್ತಿದ್ದಾಗ ಚಾಲಕನಿಗೆ ನಿದ್ರೆ ಬಂದಿದ್ದರಿಂದ, ಆತನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆಗೆ ಬಿದ್ದಿದೆ. ಸುಮಾರು ಎಂಟು ಜನರು ಸಾವನ್ನಪ್ಪಿದ್ದಾರೆ, ಮತ್ತು ಸುಮಾರು 15 ರಿಂದ 17 ಜನರು ಮೆಡಿಕಲ್ ಕಾಲೇಜು ಮತ್ತು ಎಬಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು, (ಏಜೆನ್ಸೀಸ್).