72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪೈಪೋಟಿಯಲ್ಲಿ 'ಆರ್ಟಿಕಲ್​ 370', 'ಮಂಜುಮ್ಮೆಲ್​ ಬಾಯ್ಸ್', 'ಕಿಷ್ಕಿಂಧಾ ಕಾಂಡಂ'...

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್​ನಲ್ಲಿರುವ ಸಿನಿಮಾಗಳು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್​ನಲ್ಲಿರುವ ಸಿನಿಮಾಗಳು
Published on

ಪ್ರಮುಖ ಮುಖ್ಯಾಂಶಗಳು

  • 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ
  • ಇಂದು ಪ್ರಕಟ ಆಗಬೇಕಿದ್ದ ಪ್ರಶಸ್ತಿ ಕಾರ್ಯಕ್ರಮ ಆಗಸ್ಟ್​ಗೆ ಮುಂದೂಡಿಕೆ
  • ಪ್ರಶಸ್ತಿ ಪಡೆಯುವ ರೇಸ್​ನಲ್ಲಿ ಮಲಯಾಳಂ, ತಮಿಳು ಸಿನಿಮಾಗಳು
ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಅನಾವಣರಗೊಳಿಸಲು ಸಜ್ಜಾಗಿದ್ದ ಕೇಂದ್ರ ಸರ್ಕಾರ, ಇದೀಗ ದಿಢೀರ್​ ಘೋಷಣೆಯನ್ನು ಆಗಸ್ಟ್​ ತಿಂಗಳಿಗೆ ಮುಂದೂಡಿರುವುದಾಗಿ ವರದಿಗಳು ಉಲ್ಲೇಖಿಸಿವೆ. 
ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳ ಪೈಕಿ ಯಾವೆಲ್ಲ ಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಬಹುದು ಎಂಬ ಕುತೂಹಲ ದೇಶವ್ಯಾಪಿ ಸಿನಿಪ್ರಿಯರಲ್ಲಿ ಕಾಡತೊಡಗಿದೆ. ಭಾರತೀಯ ಚಿತ್ರೋದ್ಯಮಕ್ಕೆ ತಮ್ಮ ಚಿತ್ರಗಳ ಮೂಲಕ ಪ್ರಶಂಸನೀಯ ಕೊಡುಗೆಗಳನ್ನು ನೀಡಿದ ಕಲಾವಿದರು ಮತ್ತು ವ್ಯಾಪಕ ಮೆಚ್ಚುಗೆಗಳನ್ನು ಸ್ವೀಕರಿಸಿದ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲು ಕೇಂದ್ರ ಸರ್ಕಾರ ತಯಾರಾಗಿತ್ತು. ಆದರೀಗ, ಪ್ರಶಸ್ತಿ ಪ್ರಕಟ ದಿನಾಂಕವನ್ನು ಮುಂದೂಡಿಕೆ ಮಾಡಿರುವುದು ಸದ್ಯ ಕೌತುಕಕ್ಕೆ ತಾತ್ಕಾಲಿಕ ಬ್ರೇಕ್​ ಹಾಕಿದೆ.  

ರೇಸ್​ನಲ್ಲಿ ಮಲಯಾಳಂ, ತಮಿಳು ಚಿತ್ರಗಳು ಮುಂಚೂಣಿ   

ಈ ಬಾರಿಯ ಅವಾರ್ಡ್​ ರೇಸ್​ನಲ್ಲಿ ಮಾಲಿವುಡ್​ ಸಿನಿಮಾಗಳು ಒಂದು ಹೆಜ್ಜೆ ಮುಂದೋಗಿದೆ. ಚಿತ್ರಪ್ರೇಮಿಗಳು ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆಗಳನ್ನು ಸ್ವೀಕರಿಸಿರುವ 'ಭ್ರಮಾಯುಗಂ', 2024ರಲ್ಲಿ ಮಲಯಾಳಂ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿ, ಹೊಸ ಇತಿಹಾಸ ಸೃಷ್ಟಿಸಿದ 'ಮಂಜುಮ್ಮೆಲ್ ಬಾಯ್ಸ್' ಮತ್ತು ಸಿಂಪಲ್​ ಸ್ಟೋರಿಯಿಂದಲೇ ನೋಡುಗರ ಗಮನ ಸೆಳೆದ 'ಕಿಷ್ಕಿಂಧಾ ಕಾಂಡಂ' ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಮುಂಚೂಣಿಯಲ್ಲಿವೆ.
ಇನ್ನು, ಮಾಲಿವುಡ್​ಗೆ ಸಖತ್​ ಪೈಪೋಟಿ ನೀಡುತ್ತಿರುವ ತಮಿಳು ಚಿತ್ರರಂಗದಿಂದಲೂ ಒಂದಷ್ಟು ಸೂಪರ್​ಹಿಟ್​ ಸಿನಿಮಾಗಳು ಸ್ಪರ್ಧೆಯಲ್ಲಿವೆ. ವಿಜಯ್ ಸೇತುಪತಿ ನಟನೆಯ 'ಮಹಾರಾಜ', ಕಾರ್ತಿ ಅಭಿನಯದ 'ಮಿಯ್ಯಳಗನ್' ಮತ್ತು ಶಿವಕಾರ್ತಿಕೆಯನ್​ ಅವರ ಸಕ್ಸಸ್​ಫುಲ್​ 'ಅಮರನ್' ಚಿತ್ರಗಳು ರಾಷ್ಟ್ರ ಪ್ರಶಸ್ತಿಯ ಬಾಚಿಕೊಳ್ಳಲು ಪೈಪೋಟಿಗಿಳಿದಿವೆ. 

ನಿರೀಕ್ಷೆಯಲ್ಲಿ ಬಾಲಿವುಡ್, ಟಾಲಿವುಡ್‌  

ಹಿಂದಿ ಚಿತ್ರರಂಗದಿಂದ 'ಆರ್ಟಿಕಲ್ 370', 'ಶ್ರೀಕಾಂತ್' ಮತ್ತು ಕಾರ್ತಿಕ್ ಆರ್ಯನ್ ನಟನೆಯ 'ಚಂದು ಚಾಂಪಿಯನ್' ಸಿನಿಮಾಗಳು ರೇಸ್​ನಲ್ಲಿದ್ದರೆ,  ಪ್ರಭಾಸ್ ನಟನೆಯ ಸೈಫೈ ಥ್ರಿಲ್ಲರ್​ 'ಕಲ್ಕಿ 2898 ಎಡಿ', ದುಲ್ಕರ್ ಸಲ್ಮಾನ್ ಅಭಿನಯದ 'ಲಕ್ಕಿ ಭಾಸ್ಕರ್' ಮತ್ತು ಜೂ. ಎನ್‌ಟಿಆರ್ ನಟನೆಯ 'ದೇವರ 1' ಚಿತ್ರಗಳ ಟಾಲಿವುಡ್​ನಿಂದ ಕಣಕ್ಕಿಳಿದಿವೆ.  

ಯಾರಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ?

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮಂಡಳಿಯು ವಿಜೇತರನ್ನು ಘೋಷಿಸುವ ಮೊದಲು ಯಾವುದೇ ಅಧಿಕೃತ ನಾಮನಿರ್ದೇಶನಗಳ ಪಟ್ಟಿಯನ್ನು ಇಲ್ಲಿಯವರೆಗೆ ಬಿಡುಗಡೆಗೊಳಿಸಿಲ್ಲ. ಆದರೆ, ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಹಾಗೂ ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ, ಪ್ರಶಂಸೆ ಪಡೆದ ಕಲಾವಿದರಿಗೆ ಪ್ರಶಸ್ತಿ ಹೋಗುವ ಲೆಕ್ಕಾಚಾರಗಳು ಜೋರಾಗಿವೆ.
ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ, ತಮಿಳಿನ ಶಿವಕಾರ್ತಿಕೇಯನ್, ವಿಜಯ್ ಸೇತುಪತಿ, ಕಾರ್ತಿ ಮತ್ತು ನಟಿಯರಲ್ಲಿ ಸಾಯಿ ಪಲ್ಲವಿ ಅವರ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದು, ಈ ಸ್ಟಾರ್​ ಹೀರೋ-ಹೀರೋಯಿನ್​ಗೆ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳು ಲಭಿಸಲಿ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಈ ಕುರಿತಾಗಿ ಭಾರತೀಯ ಚಿತ್ರರಂಗದ ತೀರ್ಪು ಏನಿರಲಿದೆ ಎಂಬುದನ್ನು ಮುಂದಿನ ತಿಂಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net