71ನೇ ವಯಸ್ಸಿನಲ್ಲಿ ಡಾಕ್ಟರ್ ಆಗುವ ಹಠ!...ಮೀಸಲಾತಿಗೆ ಬೇಡಿಕೆ; ಇಡೀ ದೇಶದ ಗಮನ ಸೆಳೆಯುತ್ತಿದೆ 5 ದಶಕಗಳ ಹಳೆಯ ಈ ಅಪೂರ್ಣ ಕನಸು | Ashok Bahar

Ashok Bahar | 71 ವರ್ಷದ ನೀಟ್ ಯುಜಿ ಆಕಾಂಕ್ಷಿ ಅಶೋಕ್ ಬಹಾರ್
Ashok Bahar | 71 ವರ್ಷದ ನೀಟ್ ಯುಜಿ ಆಕಾಂಕ್ಷಿ ಅಶೋಕ್ ಬಹಾರ್
Published on
ಲಖನೌ: ವೈದ್ಯಕೀಯ ಶಿಕ್ಷಣದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿಕೊಡುವಂತೆ ಕೋರಿ 71 ವರ್ಷದ ನೀಟ್ ಯುಜಿ ಆಕಾಂಕ್ಷಿಯೊಬ್ಬರು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದ ಮೆಟ್ಟಿಲೇರಿದ್ದಾರೆ.
ಅರ್ಹ ಹಿರಿಯ ನಾಗರಿಕರಿಗೆ ಎಂಬಿಬಿಎಸ್ ಪ್ರವೇಶಾತಿಯಲ್ಲಿ ಶೇ.1 ರಷ್ಟು ಮೀಸಲಾತಿಯನ್ನು ನೀಡುವಂತೆ ಕೋರಿ ಅಶೋಕ್ ಬಹಾರ್ ಎಂಬುವವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ, ಈ ವಿಷಯವು ಜುಲೈ 21 ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಹಿರಿಯ ನಾಗರಿಕರ ಕೋಟಾಕ್ಕಾಗಿ ಅಶೋಕ್ ಬಹಾರ್ ಒತ್ತಾಯವೇಕೆ?

ವೈದ್ಯಕೀಯ ಪ್ರವೇಶಾತಿ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಈಗಾಗಲೇ ಹಲವು ಇತರ ವರ್ಗಗಳಿಗೆ ಸೌಲಭ್ಯಗಳು ಅಥವಾ ಮೀಸಲಾತಿಯನ್ನು ನೀಡುತ್ತಿರುವಾಗ, ಹಿರಿಯ ನಾಗರಿಕರಿಗೆ ಮಾತ್ರ ಏಕೆ ವಿಶೇಷ ಪರಿಗಣನೆ ನೀಡುತ್ತಿಲ್ಲ ಎಂದು ಬಹಾರ್ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ನೀಟ್ ಪರೀಕ್ಷೆಗೆ ಹಾಜರಾಗಲು ವಯಸ್ಸಿನ ಮಿತಿ ಇಲ್ಲದಿರುವಾಗ, ಹಿರಿಯ ನಾಗರಿಕರಿಗೂ ವೈದ್ಯಕೀಯ ಸೀಟು ಪಡೆಯಲು ಸಮಾನ ಹಾಗೂ ನ್ಯಾಯಸಮ್ಮತ ಅವಕಾಶ ಸಿಗಬೇಕು ಎಂಬುದು ಅವರ ವಾದವಾಗಿದೆ.
ಅಶೋಕ್ ಬಹಾರ್ ಪರ ವಕೀಲರಾದ ಪಂಕಜ್ ಧೀರ್ ಸಿಂಗ್ ರಾಣಾ, ನೀಟ್-ಯುಜಿ ಪರೀಕ್ಷೆಗೆ ಇದ್ದ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿರುವ ಸುಪ್ರೀಂ ಕೋರ್ಟ್‌ನ ಹಿಂದಿನ ನಿರ್ಧಾರವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಹಿರಿಯ ನಾಗರಿಕರು ಕಾನೂನುಬದ್ಧವಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಾಧ್ಯವಿರುವಾಗ, ಅವರ ಪ್ರವೇಶದ ಅವಕಾಶಗಳನ್ನು ಬೆಂಬಲಿಸಲು ಒಂದು ನೀತಿ ಚೌಕಟ್ಟು ಇರಬೇಕು ಎನ್ನುವುದು ಅವರ ವಾದವಾಗಿದೆ.

ಇದು 52 ವರ್ಷಗಳ ಹಳೆಯ ಕನಸು!

ವೈದ್ಯರಾಗಬೇಕೆಂಬ ಬಹಾರ್ ಕನಸು ಐದು ದಶಕಗಳಿಗಿಂತಲೂ ಹಳೆಯದಾಗಿದೆ. ಅವರು ಮೊಟ್ಟಮೊದಲ ಬಾರಿಗೆ 1974 ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರೂ, ಅದರಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿರಲಿಲ್ಲ. ನಂತರ 2023 ರಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರಾದರೂ, ಪರೀಕ್ಷಾ ಕೇಂದ್ರದ ದೂರದ ಕಾರಣದಿಂದಾಗಿ ತಡವಾಗಿ ತಲುಪಿ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರು. ಆದರೂ ಅವರು ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ನೀಟ್ ಯುಜಿ ಪರೀಕ್ಷೆಗೆ ಯಶಸ್ವಿಯಾಗಿ ಹಾಜರಾಗಿದ್ದಾರೆ.
ಅವರ ತಾಯಿ ಸಾವಿತ್ರಿ ದೇವಿ ತನ್ನ ಮಗ ವೈದ್ಯನಾಗಬೇಕೆಂದು ಮೊದಲು ಕನಸು ಕಂಡಿದ್ದರು. ಅವರು 1990 ರಲ್ಲಿ ನಿಧನರಾದರಾದರೂ, ಆ ಅಪೂರ್ಣ ಕನಸು ಬಹಾರ್ ಮನಸ್ಸಿನಲ್ಲಿ ಹಾಗೇ ಉಳಿದಿತ್ತು. ತದನಂತರ ಅವರ ಪತ್ನಿ ಡಾ. ಮಂಜು ಬಹಾರ್ ಈ ಕನಸನ್ನು ಪುನಃ ಬೆನ್ನಟ್ಟಲು ಬಹಾರ್ ಅವರಿಗೆ ಪ್ರೋತ್ಸಾಹ ನೀಡಿದರು. ವಿಶೇಷವೆಂದರೆ, ಬಹಾರ್ ಅವರ ಕುಟುಂಬದಲ್ಲಿ ಈಗಾಗಲೇ ಸುಮಾರು 20 ಕ್ಕೂ ಹೆಚ್ಚು ವೈದ್ಯರಿದ್ದು, ಅವರಲ್ಲಿ ಹಲವರು ವಿದೇಶಗಳಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆ.

ಕೇವಲ ನೀಟ್ ಆಕಾಂಕ್ಷಿಯಷ್ಟೇ ಅಲ್ಲ, ಅಪಾರ ಅನುಭವದ ವ್ಯಕ್ತಿ!

71ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆಯುತ್ತಿರುವ ಬಹಾರ್ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ಸಾಮಾನ್ಯವಾದುದಲ್ಲ. ಅವರು ಲಖನೌ ವಿಶ್ವವಿದ್ಯಾಲಯದಿಂದ ಬಾಟನಿ, ಝೂಲಜಿ ಮತ್ತು ಕೆಮಿಸ್ಟ್ರಿಯಲ್ಲಿ ಬಿಎಸ್​​ಸಿ ಪದವಿ ಪಡೆದಿದ್ದಾರೆ. ಇದರೊಂದಿಗೆ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಕಾನೂನು ಪದವಿ ಮತ್ತು ಎಂಬಿಎ ಕೂಡ ಮುಗಿಸಿದ್ದಾರೆ.
ವೃತ್ತಿಪರವಾಗಿ ಅವರು ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಸ್ವಯಂ ನಿವೃತ್ತಿ ಪಡೆದ ನಂತರ, ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು. ಸದ್ಯ ಅವರು ಹೈಕೋರ್ಟ್‌ನಲ್ಲಿ ವಕೀಲರಾಗಿಯೂ ವೃತ್ತಿ ನಡೆಸುತ್ತಿದ್ದಾರೆ.
ಶಿಕ್ಷಣಕ್ಕೆ ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ ಎಂದು ಹೇಳುವ ಬಹಾರ್, ಜೀವನದ ಸಂಧ್ಯಾಕಾಲದಲ್ಲಿ ತಮ್ಮ ಅಪೂರ್ಣ ಕನಸುಗಳನ್ನು ನನಸಾಗಿಸಲು ಬಯಸುವ ಹಿರಿಯ ನಾಗರಿಕರಿಗಾಗಿ ಸರ್ಕಾರವು ವಿಶೇಷ ನಿಬಂಧನೆಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಹೈಕೋರ್ಟ್ ಈ ಅರ್ಜಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಅವರ ಈ ವಿಶಿಷ್ಟ ನೀಟ್ ಪಯಣದ ಮುಂದಿನ ಹಂತದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net