ಪಾರ್ಶ್ವವಾಯು ಪೀಡಿತ ಪತ್ನಿಗೆ ಚಿಕಿತ್ಸೆ ನೀಡಲು 600 ಕಿ.ಮೀ ರಿಕ್ಷಾ ತುಳಿದ 70 ವರ್ಷದ ವೃದ್ಧ!..Paralysis

Paralysis
Paralysis
Published on
ಮೋದಿಪದ ಗ್ರಾಮದ ನಿವಾಸಿ ಬಾಬು ಲೋಹರ್ ಅವರ ಪತ್ನಿ ಜ್ಯೋತಿ ಅವರಿಗೆ ಕಳೆದ ನವೆಂಬರ್‌ನಲ್ಲಿ ಪಾರ್ಶ್ವವಾಯು (Paralysis) ಕಾಣಿಸಿಕೊಂಡಿತ್ತು. ಕಟಕ್‌ನ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಆಂಬ್ಯುಲೆನ್ಸ್ ಬಾಡಿಗೆಗೆ ನೀಡಲು ಬಾಬು ಬಳಿ ಹಣವಿರಲಿಲ್ಲ. ಜೀವನೋಪಾಯವಾಗಿದ್ದ ರಿಕ್ಷಾವನ್ನೇ ಆಂಬ್ಯುಲೆನ್ಸ್ ಆಗಿ ಬದಲಿಸಿದರು. ಪತ್ನಿಯನ್ನು ಮಲಗಿಸಿಕೊಂಡು ಕಟಕ್‌ನತ್ತ ಪ್ರಯಾಣ ಬೆಳೆಸಿದರು.
ದಿನಕ್ಕೆ 30 ಕಿಲೋಮೀಟರ್‌ಗಳಂತೆ, ಮಳೆ-ಗಾಳಿ ಎನ್ನದೆ ಸತತ 9 ದಿನಗಳ ಕಾಲ ಸೈಕಲ್ ತುಳಿದು ಬಾಬು ಕಟಕ್ ತಲುಪಿದ್ದರು. ಹಗಲಿನಲ್ಲಿ ಪೆಡಲ್ ತುಳಿಯುವುದು, ರಾತ್ರಿ ರಸ್ತೆಬದಿಯ ಅಂಗಡಿಗಳ ಮುಂದೆ ವಿಶ್ರಾಂತಿ ಪಡೆಯುವುದು ಅವರ ದಿನಚರಿಯಾಗಿತ್ತು. ಅಲ್ಲಿ ಸುಮಾರು ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದ ನಂತರ ಜ್ಯೋತಿ ಚೇತರಿಸಿಕೊಂಡರು.
ಜನವರಿ 19 ರಂದು ಅದೇ ರಿಕ್ಷಾದಲ್ಲಿ ಮನೆಗೆ ಮರಳುವಾಗ ಚೌದ್ವಾರ ಎಂಬಲ್ಲಿ ವಾಹನವೊಂದು ಡಿಕ್ಕಿ ಹೊಡೆಯಿತು. ಜ್ಯೋತಿ ಅವರು ರಿಕ್ಷಾದಿಂದ ಬಿದ್ದು ತಲೆಗೆ ಗಾಯವಾಯಿತು.ಪಕ್ಕದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಅಲ್ಲಿನ ಪೊಲೀಸರು ಮನೆಗೆ ಹೋಗಲು ಬೇರೆ ವಾಹನದ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದರೂ ಬಾಬು ನಿರಾಕರಿಸಿದರು.
"ನನ್ನ ಜೀವನದಲ್ಲಿ ಎರಡೇ ಪ್ರೀತಿ ಇರುವುದು. ಒಂದು ನನ್ನ ಹೆಂಡತಿ, ಇನ್ನೊಂದು ನನ್ನ ರಿಕ್ಷಾ. ಅವರಿಬ್ಬರನ್ನೂ ಬಿಟ್ಟು ನಾನು ಬದುಕಲಾರೆ" ಎಂಬ ಬಾಬು ಅವರ ಮಾತುಗಳು ಅಲ್ಲಿದ್ದ ಪೊಲೀಸರ ಕಣ್ಣಾಲಿಗಳನ್ನು ತುಂಬಿಸಿದವು.

ವ್ಯವಸ್ಥೆಯ ವಿರುದ್ಧ ಜನರ ಆಕ್ರೋಶ

ಬಾಬು ಲೋಹರ್ ಅವರ ಪ್ರೀತಿ ಮತ್ತು ಧೈರ್ಯವನ್ನು ಜನ ಶ್ಲಾಘಿಸುತ್ತಿದ್ದಾರಾದರೂ, ಬಡವರಿಗಾಗಿ ಸರ್ಕಾರಿ ಸಾರಿಗೆ ಮತ್ತು ಆರೋಗ್ಯ ವ್ಯವಸ್ಥೆಗಳು ಸರಿಯಾಗಿ ತಲುಪುತ್ತಿಲ್ಲವೇಕೆ? ಎಂಬ ಪ್ರಶ್ನೆಗಳೂ ಎದ್ದಿವೆ. "ಒಬ್ಬ 70 ವರ್ಷದ ವೃದ್ಧ ಇಷ್ಟು ಕಷ್ಟಪಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಇದು ನಮ್ಮ ವ್ಯವಸ್ಥೆಯ ದೊಡ್ಡ ವೈಫಲ್ಯ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net