

ನವದೆಹಲಿ: ಭಯೋತ್ಪಾದನಾಪೀಡಿತ ಕಾಶ್ಮೀರದ ಪುಲ್ವಾಮಾ ಜಿಲ್ಲೆ ಈಗ ಮುಂಚಿನಂತಿಲ್ಲ. ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದ ಬಳಿಕ ನವೋದ್ಯಮಗಳ ನವ ಸಂಸ್ಕೃತಿಯೇ ಆರಂಭವಾಗಿದೆ. ಹಲವು ರಂಗಗಳಲ್ಲಿ ಹೂಡಿಕೆ ಆಕರ್ಷಿಸಿರುವ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಉದ್ಯೋಗಸೃಷ್ಟಿಯ ಪ್ರಮಾಣ ಏರುಮುಖವಾಗಿದ್ದು, ಬದಲಾವಣೆಯ ಆಶಾವಾದಕ್ಕೆ ಸಾಕ್ಷಿಯಾಗಿದೆ.
2019ರ ಫೆ.14ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ತ್ಯಾಗ ಮತ್ತು ಬಲಿದಾನ ವ್ಯರ್ಥವಾಗಬಾರದೆಂದರೆ, ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಹಾಗೂ ಅಂತಿಮ ಗೆಲುವು ಸಿಗುವವರೆಗೂ ಹೋರಾಟ ಮುಂದುವರಿಸಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿರುವುದು ಗಮನಾರ್ಹ. ಆ ಎಲ್ಲ ಯೋಧರ ಬಲಿದಾನವನ್ನು ಗೌರವಿಸಿ ದೇಶ ಇಂದು (ಫೆ.14) ನಮನ ಸಲ್ಲಿಸುತ್ತಿದೆ.
ಜಮ್ಮು-ಕಾಶ್ಮೀರದಲ್ಲಿ ಈಗ ಅಭಿವೃದ್ಧಿಯ ಗಾಳಿ ಬೀಸುತ್ತಿದೆ. ಭಯೋತ್ಪಾದನೆ, ಪ್ರತ್ಯೇಕತಾವಾದಿಗಳ ಅಟ್ಟಹಾಸದ ಪರಿಣಾಮ ಹೂಡಿಕೆದಾರರು ಜಮ್ಮು-ಕಾಶ್ಮೀರದಿಂದ ದೂರವೇ ಇದ್ದರು. ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ಕೂಡ ಪರಿಣಾಮಕಾರಿಯಾಗಿ ನಡೆದಿರಲಿಲ್ಲ. ಪರಿಣಾಮ, ಸ್ಥಳೀಯ ಆರ್ಥಿಕತೆ ಪ್ರವಾಸೋದ್ಯಮವನ್ನು ಮಾತ್ರ ನೆಚ್ಚಿಕೊಂಡಿತ್ತು. ಆದರೆ, ಮೂಲಸೌಕರ್ಯಗಳನ್ನು ವಿಸ್ತರಿಸಿ, ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯೇ ಬದಲಾಗಿದ್ದು, ಕೈಗಾರಿಕೆಗಳು ಉತ್ಸಾಹದಿಂದ ಹೂಡಿಕೆ ಮಾಡುತ್ತಿವೆ.
ಕಾಶ್ಮೀರದ ಯುವಜನತೆ ಕಲ್ಲು ತೂರಾಟದ ಹಾದಿ ಬಿಟ್ಟು ಉದ್ಯಮದ ಹಾದಿ ಹಿಡಿದಿದ್ದಾರೆ. ಸರ್ಕಾರದ ವಿಶೇಷ ಉತ್ತೇಜನದಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 600ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟಪ್ಗಳಿವೆ. ಐಟಿ ಪಾರ್ಕ್ಗಳು ಶ್ರೀನಗರ ಮತ್ತು ಜಮ್ಮುವಿನಲ್ಲಿ ಸಕ್ರಿಯವಾಗಿವೆ. ಪುಲ್ವಾಮಾದ ಲಸ್ಸಿಪೋರಾ ಪ್ರದೇಶ ಪ್ರಸಕ್ತ ಭಾರತದ ಅತಿದೊಡ್ಡ ಕೈಗಾರಿಕಾ ವಲಯಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಇಲ್ಲಿ ಕೃಷಿಯಷ್ಟೇ ಅಲ್ಲದೆ, ಸಾಫ್ಟ್ವೇರ್ ಮತ್ತು ಉತ್ಪಾದನಾ ಘಟಕಗಳೂ ತಲೆ ಎತ್ತುತ್ತಿವೆ. 2025-26ರ ಸಾಲಿನಲ್ಲಿ ಜಮ್ಮು ಮತ್ತು ಕಾಶ್ಮೀರವು ದಾಖಲೆಯ 5,349 ಕೋಟಿ ರೂ. ಹೂಡಿಕೆಯನ್ನು ಪಡೆದಿದೆ.
ಇದರಲ್ಲಿ ಪುಲ್ವಾಮಾದ ಲಸ್ಸಿಪೋರಾ ಕೈಗಾರಿಕಾ ವಲಯ ಪ್ರಮುಖ ಪಾಲು ಹೊಂದಿದೆ. ಕಾಶ್ಮೀರದ ಪ್ರಸಿದ್ಧ ಕೇಸರಿ ಮತ್ತು ಸೇಬು ವ್ಯಾಪಾರವನ್ನು ಡಿಜಿಟಲೀಕರಣಗೊಳಿಸುವ ಸ್ಟಾರ್ಟಪ್ಗಳು ಹೆಚ್ಚಾಗಿವೆ. ಇವು ರೈತರಿಗೆ ನೇರವಾಗಿ ಮಾರುಕಟ್ಟೆ ಸಿಗುವಂತೆ ಮಾಡುತ್ತಿವೆ. ಕಾಶ್ಮೀರಿ ಶಾಲುಗಳು ಮತ್ತು ಕರಕುಶಲ ವಸ್ತುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇ-ಕಾಮರ್ಸ್ ವೇದಿಕೆಗಳು ಪ್ರವರ್ಧಮಾನಕ್ಕೆ ಬಂದಿದ್ದು, ಗ್ರಾಹಕರಿಗೂ ಈಗ ಸುಲಭವಾಗಿ ಕಾಶ್ಮೀರಿ ಶಾಲುಗಳು ಮತ್ತು ಕರಕುಶಲ ಉತ್ಪನ್ನಗಳು ಸಿಗುತ್ತಿವೆ.
ಪೆನ್ಸಿಲ್ ಉದ್ಯಮ: ಪುಲ್ವಾಮಾ ಜಿಲ್ಲೆಯ ಓಖೂ ಗ್ರಾಮವು ಭಾರತದ ‘ಪೆನ್ಸಿಲ್ ಗ್ರಾಮ’ ಎಂದೇ ಖ್ಯಾತಿ ಪಡೆದಿದೆ. ಜೆಹ್ಲಮ್ ಆಗ್ರೋ ಇಂಡಸ್ಟ್ರೀಸ್ನ ಮನ್ಸೂರ್ ಅಹಮದ್ ಅಲೈ ಇದನ್ನು ಮುನ್ನಡೆಸುತ್ತಿದ್ದಾರೆ. ಇವರು ಸ್ಥಳೀಯ ಪಾಪ್ಲರ್ ಮರಗಳನ್ನು ಬಳಸಿ ಪೆನ್ಸಿಲ್ ಸ್ಲೇಟ್ಗಳನ್ನು ತಯಾರಿಸಿ, ಭಾರತದ ದೊಡ್ಡ ಪೆನ್ಸಿಲ್ ಕಂಪನಿಗಳಾದ ‘ಅಪ್ಸರಾ’ ಮತ್ತು ‘ನಟರಾಜ್’ಗೆ ಪೂರೈಸುತ್ತಿದ್ದಾರೆ.
ಸಾಫ್ಟ್ವುಡ್ ಉತ್ಪನ್ನಗಳು: ಲಸ್ಸಿಪೋರಾ ಕೈಗಾರಿಕಾ ಪ್ರದೇಶದಲ್ಲಿರುವ ಈ ಉದ್ಯಮವು ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಪೆನ್ಸಿಲ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುವನ್ನು ಜಾಗತಿಕ ಮಟ್ಟಕ್ಕೆ ರಫ್ತು ಮಾಡುತ್ತಿದೆ.
ಕೃಷಿ ಮತ್ತು ಆಹಾರ ತಂತ್ರಜ್ಞಾನ: ಪುಲ್ವಾಮಾದಲ್ಲಿ 2020ರಲ್ಲಿ ಆರಂಭವಾದ ಅಲ್ ಕರೀಮ್ ಸೌಕ್ ನವೋದ್ಯಮ ಕೇಸರಿ, ಲ್ಯಾವೆಂಡರ್ ಎಣ್ಣೆ ಮತ್ತು ಒಣ ಹಣ್ಣುಗಳ ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿದೆ. ಅಲ್ಲದೆ, ಪುಲ್ವಾಮಾದ ಯುವಕ ನಾಜಿಮ್ ನಜೀರ್ ಆರಂಭಿಸಿದ ‘ನೇಮ್ತ್ ಹನಿ’ ಉದ್ಯಮವು ಜೇನು ಸಾಕಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಪಿಎಂಇಜಿಪಿ ಯೋಜನೆಯಡಿ ಸಾಲ ಪಡೆದು ಆರಂಭವಾದ ಇವರ ಬ್ರ್ಯಾಂಡ್ ಪ್ರಸಕ್ತ ಸಾವಿರಾರು ಕೆಜಿ ಜೇನುತುಪ್ಪವನ್ನು ದೇಶಾದ್ಯಂತ ಮಾರಾಟ ಮಾಡುತ್ತಿದೆ.
ಕ್ರೀಡೆ ಮತ್ತು ಇತರ ಸೇವೆಗಳು: ಪುಲ್ವಾಮಾದ ಸಾಂಗ್ಮ್ ಭಾಗದಲ್ಲಿರುವ ‘ಗ್ರೆ ಎಯ್ಟ್ ಸ್ಪೋರ್ಟ್ಸ್’ ಕಂಪನಿಯು ಕಾಶ್ಮೀರಿ ವಿಲೋ ಬ್ಯಾಟ್ಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ಇತ್ತೀಚಿನ ವಿಶ್ವಕಪ್ಗಳಲ್ಲಿ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟಿಗರು ಇಲ್ಲಿ ತಯಾರಾದ ಬ್ಯಾಟ್ಗಳನ್ನು ಬಳಸುತ್ತಿದ್ದಾರೆ. 2022ರಲ್ಲಿ ಪುಲ್ವಾಮಾದಲ್ಲಿ ಸ್ಥಾಪಿತವಾದ ‘ಕಾಶ್ಕಾನ್ ಇಂಜಿನಿಯರಿಂಗ್’ ಸಿವಿಲ್ ಇಂಜಿನಿಯರಿಂಗ್, ಮೂಲಸೌಕರ್ಯ ಸಲಹಾ ಸೇವೆಗಳನ್ನು ನೀಡುತ್ತಿದೆ.
ಲಾಜಿಸ್ಟಿಕ್ಸ್ ಮತ್ತು ಐಟಿ: ‘ಫಾಸ್ಟ್ಬೀಟಲ್’ ನವೋದ್ಯಮ ಶ್ರೀನಗರದಲ್ಲಿ ಕೇಂದ್ರ ಕಚೇರಿ ಹೊಂದಿದ್ದರೂ, ಪುಲ್ವಾಮಾದಂತಹ ಜಿಲ್ಲೆಗಳ ಸ್ಥಳೀಯ ಕುಶಲಕರ್ವಿುಗಳು ಮತ್ತು ಸಣ್ಣ ಉದ್ಯಮಿಗಳ ಉತ್ಪನ್ನ ಜಗತ್ತಿಗೆ ತಲುಪಿಸುತ್ತಿದೆ.
ರೈಲ್ವೆ ಸಂಪರ್ಕ ಜಾಲ: ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದ ಉಳಿದ ಭಾಗಗಳೊಂದಿಗೆ ಸಂರ್ಪಸುವ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ ಲಿಂಕ್ ಯೋಜನೆ ಪುಲ್ವಾಮಾ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. 272 ಕಿ.ಮೀ. ಉದ್ದದ ಈ ರೈಲು ಕಾರಿಡಾರ್ ಈಗ ಕಾರ್ಯಾರಂಭ ಮಾಡಿದ್ದು (2025ರ ಜೂನ್ನಲ್ಲಿ ಪೂರ್ಣಗೊಂಡಿದೆ), ಪುಲ್ವಾಮಾ ಜಿಲ್ಲೆಯೂ ಈ ಮಾರ್ಗದಲ್ಲಿದೆ. ಇದು ಜಿಲ್ಲೆಯ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳ ರಫ್ತಿಗೆ ದೊಡ್ಡ ಬಲ ನೀಡಿದೆ. ಖಾಜಿಗುಂಡ್-ಶ್ರೀನಗರ- ಬದ್ಗಾಮ್ ನಡುವಿನ 118 ಕಿ.ಮೀ. ಮಾರ್ಗದ ದ್ವಿಪಥ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಇದು ಪುಲ್ವಾಮಾದ ಮೂಲಕ ಹಾದುಹೋಗುವುದರಿಂದ ರೈಲು ಸಂಚಾರದ ವೇಗ ಮತ್ತು ಸಾಮರ್ಥ್ಯ ಹೆಚ್ಚಾಗಲಿದೆ.
ಲಸ್ಸಿಪೋರಾದಲ್ಲಿ ಯುವ ಉದ್ಯಮಿ ಉಬೈರ್ ಶಾ ಎಐ ಆಧಾರಿತ ಆಪಲ್ ಗ್ರೇಡಿಂಗ್ ಮತ್ತು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಿದ್ದಾರೆ. ಇದು ಸೇಬು ಬೆಳೆಗಾರರು ಮಧ್ಯವರ್ತಿ ಗಳಿಲ್ಲದೆ ಲಾಭ ಪಡೆಯಲು ಸಹಾಯ ಮಾಡುತ್ತಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಭಯೋತ್ಪಾದಕರು ನಡೆಸಿದ ದಾಳಿ ಭಾರತದಲ್ಲೇ ನಡೆದ ಭೀಕರ ಭಯೋತ್ಪಾದನಾ ದಾಳಿಗಳಲ್ಲಿ ಒಂದು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ವಾಹನಗಳ ಸಾಲಿನ (ಕಾನ್ವಾಯ್) ಮೇಲೆ ನಡೆದ ಅಂದಿನ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ಹಲವರು ಗಾಯಗೊಂಡಿದ್ದರು. ದೇಶ ಕಾಯುವ ಯೋಧರನ್ನು ಬಲಿ ತೆಗೆದುಕೊಂಡ ಈ ಘೋರ ಹತ್ಯಾಕಾಂಡಕ್ಕೆ ತಾನೇ ಹೊಣೆಯೆಂದು ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮದ್ ಭಯೋತ್ಪಾದಕ ಸಂಘಟನೆ ಹೇಳಿಕೊಂಡಿತು. ಈ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೆಂದು ಭಾರತ ಸಾಕ್ಷ್ಯಗಳ ಸಮೇತ ಹೇಳಿತು.
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಸಂಕಲ್ಪ ಮಾಡಿತು. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಬಾಲಾ ಕೋಟ್ನಲ್ಲಿರುವ ಜೈಷ್ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳು ನುಗ್ಗಿ ಬಾಂಬ್ ದಾಳಿ ನಡೆಸಿ ನೂರಾರು ಶಿಬಿರಗಳನ್ನು ಉಧ್ವಸ್ತಗೊಳಿಸಿದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ 12 ಮಿರಾಜ್ -2000 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ, ಪಾಕಿಸ್ತಾನ ಗಡಿ ಒಳಗಿದ್ದ ಜೈಷ್ ಉಗ್ರರ ಪ್ರಮುಖ ತರಬೇತಿ ಕೇಂದ್ರವನ್ನೂ ನಾಶಗೊಳಿಸಿದವು.
ಫೆ. 26ರ ನಸುಕಿನ ಜಾವ 3.30ರ ಸುಮಾರಿಗೆ ನಡೆದ ವೈಮಾನಿಕ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರಶಿಬಿರಗಳು ನಾಶವಾಗಿ, ಕಮಾಂಡರ್ಗಳು ಸೇರಿದಂತೆ 300ಕ್ಕೂ ಹೆಚ್ಚು ಉಗ್ರರು ಹತರಾದರು. ಭಾರತದ ಹಲವೆಡೆ ದಾಳಿ ನಡೆಸಲು ಈ ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಯಿತು. ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಮೊದಲಿನಂತೆ ಮೃದುಧೋರಣೆ ತಳೆಯುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಿತು.
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಸಂಕಲ್ಪ ಮಾಡಿತು. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಬಾಲಾ ಕೋಟ್ನಲ್ಲಿರುವ ಜೈಷ್ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳು ನುಗ್ಗಿ ಬಾಂಬ್ ದಾಳಿ ನಡೆಸಿ ನೂರಾರು ಶಿಬಿರಗಳನ್ನು ಉಧ್ವಸ್ತಗೊಳಿಸಿದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ 12 ಮಿರಾಜ್ -2000 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ, ಪಾಕಿಸ್ತಾನ ಗಡಿ ಒಳಗಿದ್ದ ಜೈಷ್ ಉಗ್ರರ ಪ್ರಮುಖ ತರಬೇತಿ ಕೇಂದ್ರವನ್ನೂ ನಾಶಗೊಳಿಸಿದವು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾ ಎಂಬಲ್ಲಿ 2019ರ ಫೆಬ್ರವರಿ 14ರಂದು ಈ ಘೋರ ದುಷ್ಕೃತ್ಯ ನಡೆಯಿತು. ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್ಪಿಎಫ್ ಯೋಧರ ಕಾನ್ವಾಯ್ ಮೇಲೆ ಒಬ್ಬ ಆತ್ಮಹತ್ಯಾ ಬಾಂಬರ್ ಎರಗಿ ಭೀಕರ ಸ್ಪೋಟಕ್ಕೆ ಕಾರಣವಾಗಿದ್ದ.
ಪುಲ್ವಾಮಾ ಘಟನೆ ಬಳಿಕ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಕಟ್ಟಿಹಾಕಲು ಮಹತ್ವದ ಕ್ರಮಗಳನ್ನು ಅನುಸರಿಸಿದ ಭಾರತ ಅದಕ್ಕೆ ನೀಡಲಾದ ‘ಪರಮಾಪ್ತ ರಾಷ್ಟ್ರ’ದ ಸ್ಥಾನವನ್ನು ಹಿಂತೆಗೆದುಕೊಂಡಿತು. ಪರಿಣಾಮ, ಪಾಕ್ನೊಂದಿಗಿನ ವಾಣಿಜ್ಯ-ವಹಿವಾಟುಗಳು ಸ್ಥಗಿತಗೊಂಡವಲ್ಲದೆ ಅಲ್ಲಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇಕಡ 200ರಷ್ಟು ಸುಂಕ ಹೇರಿ ಬಿಸಿ ಮುಟ್ಟಿಸಿತು. ಮುಖ್ಯವಾಗಿ, ಪಾಕ್ನ ಕರಾಳಕೃತ್ಯವನ್ನು ಅಂತಾರಾಷ್ಟ್ರೀಯ ವಲಯಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಯಿತು.
ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ ವಿಶ್ವದ ಹಲವು ಶಕ್ತಿಗಳು ಪುಲ್ವಾಮಾ ದಾಳಿಯನ್ನು ಬಲವಾಗಿ ಖಂಡಿಸಿದವು. ಅಷ್ಟು ಮಾತ್ರವಲ್ಲ, ಚೀನಾದ ತಗಾದೆ ನಡುವೆಯೂ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನಾ ನಿರ್ಣಯ ಅಂಗೀಕರಿಸಿದ್ದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಗೆಲುವು. ಈ ಕ್ರಮಗಳ ಬೆನ್ನಲ್ಲೇ, ಭಾರತೀಯ ಸೇನೆ ವೈಮಾನಿಕ ದಾಳಿ ಮೂಲಕ ಉಗ್ರಶಿಬಿರಗಳನ್ನು ಧ್ವಂಸಗೊಳಿಸಿಸುವ ಮೂಲಕ ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ದಿಟ್ಟಹೆಜ್ಜೆ ಇರಿಸಿತು.