ಚಾರ್ಲ್ಸ್ ಶೋಭರಾಜ್ 1970ರ ದಶಕದಲ್ಲಿ ಏಷ್ಯಾದಾದ್ಯಂತ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸರಣಿ ಕೊಲೆ ಹಾಗೂ ವಂಚನೆಗಳನ್ನು ಮಾಡಿದ್ದ ಒಬ್ಬ ಕುಖ್ಯಾತ ಅಂತಾರಾಷ್ಟ್ರೀಯ ಸರಣಿ ಹಂತಕ, ಕಳ್ಳ ಮತ್ತು ವಂಚಕ. ನಕಲಿ ಗುರುತುಗಳನ್ನು ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ಹಲವು ಬಾರಿ ಜೈಲಿನಿಂದ ತಪ್ಪಿಸಿಕೊಳ್ಳುತ್ತಿದ್ದ ಈತನ ಚಾಣಾಕ್ಷತನದಿಂದಾಗಿ ಈತನಿಗೆ 'ದಿ ಸರ್ಪೆಂಟ್' ಹಾಗೂ 'ಬಿಕಿನಿ ಕಿಲ್ಲರ್' ಎಂಬ ಹೆಸರುಗಳು ಬಂದಿದ್ದವು. ಥಾಯ್ಲೆಂಡ್, ಭಾರತ ಮತ್ತು ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ಕನಿಷ್ಠ 12ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಈತನ ಮೇಲಿದ್ದು, ಭಾರತದ ತಿಹಾರ್ ಜೈಲಿನಲ್ಲಿ ದೀರ್ಘಕಾಲ ಶಿಕ್ಷೆ ಅನುಭವಿಸಿದ ಬಳಿಕ ನೇಪಾಳದಲ್ಲೂ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈತನನ್ನು 2022ರಲ್ಲಿ ವಯೋಸಹಜ ಕಾರಣಗಳಿಗಾಗಿ ಜೈಲಿನಿಂದ ಬಿಡುಗಡೆ ಮಾಡಿ ಫ್ರಾನ್ಸ್‌ಗೆ ಗಡಿಪಾರು ಮಾಡಲಾಗಿದೆ, (ಏಜೆನ್ಸೀಸ್).