ತಾಂತ್ರಿಕ ಸಮಸ್ಯೆಯಿಂದ 6000 ಏರ್​ಬಸ್​ ಹಾರಾಟ ಸ್ಥಗಿತ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಜಗತ್ತಿನ ಪ್ರಮುಖ ವಿಮಾನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಏರ್​ಬಸ್​ನ(Airbus) ಎ320 ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಸುಮಾರು 6000 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ವಿಮಾನ ಸೇವೆಯ ಮೇಲೆ ಪರಿಣಾಮ ಬೀರಿದೆ.
ವಿಮಾನದ ಸಾಫ್ಟ್​ವೇರ್​ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಸಾಫ್ಟ್​ವೇರ್​ ಅಪ್ಡೇಟ್​ ಮಾಡಲು ಮತ್ತು ಕೆಲವೊಂದು ಅಗತ್ಯ ಉಪಕರಣಗಳನ್ನು ಬದಲಿಸಲು ಸೂಚಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ತಮ್ಮಲ್ಲಿರುವ ಏರ್​ಬಸ್​ನ ಎ 320 ವರ್ಗದ ವಿಮಾನಗಳಲ್ಲಿ ಸಾಫ್ಟ್​ವೇರ್​ ಅಪ್ಡೇಟ್​ ಮಾಡುತ್ತಿವೆ.

ಭಾರತದ ಮೇಲೆ ಏನು ಪರಿಣಾಮ?

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬಳಿ ಸುಮಾರು 370 ಏರ್​ಬಸ್​ ಎ320 ವಿಮಾನಗಳಿವೆ, ಏರ್​ ಇಂಡಿಯಾ ಬಳಿ 127, ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಬಳಿ 40 ವಿಮಾನಗಳಿವೆ. ಈ ವಿಮಾನಗಳಲ್ಲಿರುವ ದೋಷಪೂರಿತ ಸಾಫ್ಟ್​ವೇರ್​ ಬದಲಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಏರ್​ ಇಂಡಿಯಾ ಸಾಫ್ಟ್​ವೇರ್​ ಸಮಸ್ಯೆ ಇದ್ದ ಶೇ. 40 ಕ್ಕಿಂತ ಹೆಚ್ಚು ವಿಮಾನಗಳಲ್ಲಿ ಸಾಫ್ಟ್​ವೇರ್​ ಅಪ್ಡೇಡ್​ ಮಾಡಲಾಗಿದೆ. ಇಎಎಸ್​ಎ ವಿಧಿಸಿರುವ ಕಾಲಮಿತಿಯೊಳಗೆ ಉಳಿದ ವಿಮಾನಗಳ ಸಾಫ್ಟ್​ವೇರ್​ ಅಪ್ಡೇಟ್​ ಮಾಡಲಾಗುವುದು ಎಂದು ತಿಳಿಸಿದೆ.

ಜಗತ್ತಿನಾದ್ಯಂತ ವಿಮಾನ ಸೇವೆ ವ್ಯತ್ಯಯ

ಏರ್​ಬಸ್​ನ 55 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ವಿಶ್ವದಾದ್ಯಂತ ಒಟ್ಟು ಕಾರ್ಯಾಚರಣೆಯಲ್ಲಿರುವ ಎ320 ವಿಮಾನಗಳಲ್ಲಿ ಅರ್ಧದಷ್ಟು ವಿಮಾನಗಳು ಸಾಫ್ಟ್​ವೇರ್​ ಅಪ್ಡೇಟ್​ಗೆ ಒಳಗಾಗುತ್ತಿವೆ. ಸಾವಿರಾರು ವಿಮಾನಗಳ ಹಾರಾಟ ರದ್ದುಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಮುಂದಿನ 2&3 ದಿನದಲ್ಲಿ ವಿಮಾನಗಳ ಸಾಫ್ಟ್​ವೇರ್​ ಅಪ್ಡೇಟ್​ ಮುಕ್ತಾಯವಾಗುವ ನಿರೀಕ್ಷೆ ಇದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ತಾಂತ್ರಿಕ ಸಮಸ್ಯೆ ಯಾವುದು?

ಕಳೆದ ತಿಂಗಳು ಮೆಕ್ಸಿಕೋದ ಕ್ಯಾನ್​ಕಸ್​ನಿಂದ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ನ್ಯೂವಾರ್ಕ್​ ಗೆ ಪ್ರಯಾಣಿಸುತ್ತಿದ್ದ 320 ವಿಮಾನ 35000 ಅಡಿ ಎತ್ತರದಲ್ಲಿ ಚಲಿಸುತ್ತಿತ್ತು. ಈ ವೇಳೆ ಪೈಲಟ್​ ಸೂಚನೆ ಇಲ್ಲದೆ ವಿಮಾನ ಕೆಳಮುಖವಾಗಿ ಸಂಚರಿಸಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್​ಗಳು ವಿಮಾನವನ್ನು ಸುರತವಾಗಿ ಪ್ಲೋರಿಡಾದ ಟ್ಯಾಂಪಾ ವಿಮಾನನಿಲ್ದಾಣದಲ್ಲಿ ಲ್ಯಾಂಡ್​ ಮಾಡಿದ್ದರು. ಈ ಘಟನೆಯ ತನಿಖೆ ವೇಳೆ ಪೈಲಟ್​ ನೀಡುವ ಆಜ್ಞೆಗಳನ್ನು ರೆಕ್ಕೆಗಳು ಮತ್ತು ಬಾಲಕ್ಕೆ ತಲುಪಿಸುವ ಪ್ರಮುಖ ವ್ಯವಸ್ಥೆಯಾದ ವಿಮಾನದ ಎಲಿವೇಟರ್​ ಮತ್ತು ಐಲೆರಾನ್​ ಕಂಪ್ಯೂಟರ್​ (ಇಎಲ್​ಎಸಿ)ನಲ್ಲಿ ದೋಷ ಕಂಡುಬಂದಿತ್ತು. ತೀವ್ರವಾದ ವಿಕಿರಣಶೀಲ ಬೆಳಕಿನಿಂದಾಗಿ ಇಎಲ್​ಎಸಿಯ ಸಾಫ್ಟ್​ವೇರ್​ನಲ್ಲಿ ದೋಷ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಯುರೋಪಿಯನ್​ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ (ಇಎಎಸ್​ಎ) ವಿಮಾನಗಳ ಸಾಫ್ಟ್​ವೇರ್​ ಅಪ್ಡೇಟ್​ ಮಾಡುವಂತೆ ಸೂಚಿಸಿತ್ತು ಎಂದು ದೋಷಪೂರಿತ ಕಂಪ್ಯೂಟರ್​ ಅನ್ನು ಬದಲಿಸಿ ಇಎಲ್​ಎಸಿ ಎಲ್​103 ಅನ್ನು ಅಳವಡಿಸಬೇಕು ಎಂದು ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net