ಎಕ್ಸಾಂ ಹತ್ತಿರವಿದೆ ಹೋಗೂ... ಪಾಲಕರ ಒತ್ತಾಯಕ್ಕೆ ಶಾಲೆಗೆ ಬಂದ ಬಾಲಕ ಶಿಕ್ಷಕಿಯ ಕಪಾಳ ಮೋಕ್ಷಕ್ಕೆ ಬಲಿ

ಮೃತ ಬಾಲಕ ಪ್ರಣಯ್ ತೇಜ (6)
ಮೃತ ಬಾಲಕ ಪ್ರಣಯ್ ತೇಜ (6)
Published on
ಆಂಧ್ರಪ್ರದೇಶ: ಎಕ್ಸಾಂ ಹತ್ತಿರವಿದೆ ಹೋಗು ಎಂದು ಮಗನನ್ನು ಶಾಲೆಗೆ ಕಳುಹಿಸಿದ ಪೋಷಕರು, ಮತ್ತೆ ಆತ ಇನ್ಯಾವತ್ತೂ ಮನೆಗೆ ಹಿಂತಿರುಗುವುದೇ ಇಲ್ಲ ಎಂಬ ಸುದ್ದಿ ತಿಳಿದು ಭಾರಿ ಆಘಾತಕ್ಕೊಳಗಾದ ದುರ್ಘಟನೆ ವಿಶಾಖಪಟ್ಟಣಂನ ಖಾಸಗಿ ಶಾಲೆಯೊಂದರಲ್ಲಿ ವರದಿಯಾಗಿದೆ.
ಮೃತ ಬಾಲಕನನ್ನು ಪ್ರಣಯ್ ತೇಜ (6) ಎಂದು ಗುರುತಿಸಲಾಗಿದೆ. ಎಕ್ಸಾಂ ಸಮೀಪಿಸುತ್ತಿದೆ ಪುಟ್ಟ, ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಬಾರದು ಎಂದು ಹೇಳಿ ಸ್ಕೂಲ್​ಗೆ ಕಳುಹಿಸಿದ ಪೋಷಕರಿಗೆ ಮಧ್ಯಾಹ್ನದ ಸುಮಾರಿಗೆ ನಿಮ್ಮ ಮಗ ಜೀವಂತವಾಗಿಲ್ಲ ಎಂಬ ಸುದ್ದಿ, ಬಿಸಿ ಊಟ ತಯಾರಿಸುವ ಅಡುಗೆ ಮನೆ ಸಿಬ್ಬಿಂದಿಯಿಂದ ಕೇಳಿಬಂದಿದ್ದು ದೊಡ್ಡ ಆಘಾತ ನೀಡಿತು. ತಕ್ಷಣವೇ ಶಾಲೆಗೆ ಓಡಿ ಬಂದ ಮೃತ ಬಾಲಕನ ತಂದೆ, ಇಷ್ಟಕ್ಕೆಲ್ಲ ಯಾರು, ಏನು ಕಾರಣ ಎಂದು ಕೇಳಿದಾಗ ಸತ್ಯಾಂಶ ಸಿಸಿಟಿವಿ ದೃಶ್ಯದಲ್ಲಿ ಹೊರಬಿದ್ದಿದೆ.
ಒನ್‌ಟೌನ್ ಪ್ರದೇಶದಲ್ಲಿರುವ ಲಿಟಲ್ ಗಾರ್ಡನ್ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಬೆಳಗ್ಗೆ ಆರೋಗ್ಯವಾಗಿಯೇ ಶಾಲೆಗೆ ತೆರಳಿದ್ದ ತೇಜ, ಶಾಲೆಯೊಳಗೆ ಹೋದ ಮೇಲೆ ಮೃತಪಟ್ಟಿರುವುದು ದೃಢವಾಗಿದೆ. ಕುಟುಂಬಸ್ಥರ ಪ್ರಕಾರ, ಪ್ರಣಯ್ ಗುರುವಾರ ಬೆಳಗ್ಗೆ ಎಂದಿನಂತೆ ಆರೋಗ್ಯವಾಗಿದ್ದ. ಪರೀಕ್ಷೆಗಳು ಸಮೀಪಿಸುತ್ತಿದ್ದ ಕಾರಣ, ಬೆಳಗ್ಗೆ 8 ಗಂಟೆಗೆ ಎದ್ದು ಶಾಲೆಗೆ ಹೋಗಲು ನಾವು ಹೇಳಿದೆವು. ಸ್ಕೂಲ್​ಗೆ ಹೋದ ಮಗುವಿಗೆ ಹೋಂವರ್ಕ್​ ಮಾಡಿಲ್ಲ ಎಂದು ಶಿಕ್ಷಕಿ ಹೊಡೆದ ಏಟಿಗೆ ಆತ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಕೋಲಿನಿಂದ ಹೊಡೆದ ಏಟಿಗೆ ಬಲಿ

ಘಟನೆ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಶಾಲೆಗೆ ಹೋಗಿ ಜಗಳವಾಡಿದ ತೇಜ ಹೆತ್ತವರು, ಆರೋಗ್ಯವಾಗಿದ್ದ ನಮ್ಮ ಮಗನು ಹೇಗೆ ಪ್ರಾಣ ಕಳೆದುಕೊಂಡ? ಇದು ನಮಗೆ ಗೊತ್ತಾಗಬೇಕು ಎಂದು ಪಟ್ಟು ಹಿಡಿದಾಗ, ಸಿಸಿಟಿವಿ ದೃಶ್ಯಗಳನ್ನು ತೋರಿಸಲಾಯಿತು. ಈ ವೇಳೆ, ತರಗತಿಯಲ್ಲಿ ತೇಜನಿಗೆ ಶಿಕ್ಷಕಿಯೊಬ್ಬರು ಹೋಂ ವರ್ಕ್​ ಮಾಡಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಬಾಲಕನಿಗೆ ಹೊಡೆದಿರುವುದು ಬೆಳಕಿಗೆ ಬಂದಿದೆ.
ಕುಟುಂಬದ ಆರೋಪದ ಪ್ರಕಾರ, ಶಿಕ್ಷಕಿ ಬಾಲಕನನ್ನು ಹೆದರಿಸಿ ಕೋಲಿನಿಂದ ಹೊಡೆದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲೂ ಶಿಕ್ಷಕಿ ಬಾಲಕನಿಗೆ ಹೊಡೆಯುತ್ತಿರುವುದು ಮತ್ತು ಆತ ಕೆಳಕ್ಕೆ ಬಿದ್ದಿರುವ ದೃಶ್ಯಗಳು ಸೆರೆಯಾಗಿದೆ. ಆದರೆ, ಬಾಲಕನ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ವೈದ್ಯಕೀಯ ಕಾರಣ ಸ್ಪಷ್ಟವಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net