₹500ರ ಟಿಕೆಟ್ 30 ಕೋಟಿ ಬಹುಮಾನ! : ಕೇರಳದ ಬೊಕ್ಕಸಕ್ಕೂ ಭರ್ಜರಿ ಲಾಭ

ಕೇರಳದ ವ್ಯಕ್ತಿಯೊಬ್ಬರು ಕೇವಲ 500 ರೂಪಾಯಿ ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಕೆಲವೇ ತಿಂಗಳುಗಳ ನಂತರ ಅವರಿಗೆ ಬರೋಬ್ಬರಿ 30 ಕೋಟಿ ರೂಪಾಯಿಗಳ ಜಾಕ್​ಪಾಟ್ ಒಲಿಯಿತು. ಇದು ಕೇರಳ ಸರ್ಕಾರದ ಲಾಟರಿ ವ್ಯವಸ್ಥೆ. ಕೇರಳ ಸರ್ಕಾರವು 1967ರಲ್ಲಿ ಲಾಟರಿಯನ್ನು ಪ್ರಾರಂಭಿಸಿತು. ಭಾರತದಲ್ಲಿ ಕಾನೂನುಬದ್ಧವಾಗಿ ಲಾಟರಿ ಶುರುವಾಗಿದ್ದು ಅದೇ ಮೊದಲು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರWEB
Published on: 

ಕೇರಳದ ವ್ಯಕ್ತಿಯೊಬ್ಬರು ಕೇವಲ 500 ರೂಪಾಯಿ ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಕೆಲವೇ ತಿಂಗಳುಗಳ ನಂತರ ಅವರಿಗೆ ಬರೋಬ್ಬರಿ 30 ಕೋಟಿ ರೂಪಾಯಿಗಳ ಜಾಕ್​ಪಾಟ್ ಒಲಿಯಿತು. ಇದು ಕೇರಳ ಸರ್ಕಾರದ ಲಾಟರಿ ವ್ಯವಸ್ಥೆ. ಕೇರಳ ಸರ್ಕಾರವು 1967ರಲ್ಲಿ ಲಾಟರಿಯನ್ನು ಪ್ರಾರಂಭಿಸಿತು. ಭಾರತದಲ್ಲಿ ಕಾನೂನುಬದ್ಧವಾಗಿ ಲಾಟರಿ ಶುರುವಾಗಿದ್ದು ಅದೇ ಮೊದಲು. ಕೇರಳ ಸರ್ಕಾರದ ಲಾಟರಿ ಇಲಾಖೆಯು ಪ್ರತಿ ವಾರ ಸಾಮಾನ್ಯ ಲಕ್ಕಿ ಡ್ರಾ ನಡೆಸುತ್ತದೆ; ಆದರೆ ಓಣಂ, ಕ್ರಿಸ್​ವುಸ್, ಹೊಸ ವರ್ಷ ಮತ್ತು ವಿಷು ಮುಂತಾದ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಬಂಪರ್ ಡ್ರಾಗಳನ್ನು ಆಯೋಜಿಸುತ್ತದೆ. ಈ ಸಂದರ್ಭಗಳಲ್ಲಿ ಬಹುಮಾನದ ಮೊತ್ತವು ಸಾಮಾನ್ಯ ಡ್ರಾಗಳಿಗಿಂತ ಹಲವು ಪಟ್ಟು ಹೆಚ್ಚಿರುತ್ತದೆ. ಅಷ್ಟಕ್ಕೂ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ, ಇದರಿಂದ ಸರ್ಕಾರಕ್ಕೆ ಏನು ಲಾಭ? ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಇದೆಯೇ? ಈ ಕುರಿತಾದ ವಿವರ ಇಲ್ಲಿದೆ.

ಈ ಬಾರಿಯ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳ ಸರ್ಕಾರವು ಬಿಆರ್-111 ತಿರುವೋಣಂ ಬಂಪರ್​ಗಾಗಿ ಮೊದಲ ಬಹುಮಾನವಾಗಿ -ಠಿ;30 ಕೋಟಿ ಮತ್ತು ಕನಿಷ್ಠ -ಠಿ;500ವರೆಗಿನ ಬಹುಮಾನಗಳನ್ನು ನಿಗದಿಪಡಿಸಿತ್ತು. ಸೆಪ್ಟೆಂಬರ್ 26ರಂದು ತಿರುವನಂತಪುರದ ಗೋರ್ಕಿ ಭವನದಲ್ಲಿ ಇದರ ಲಕ್ಕಿ ಡ್ರಾ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ.ಮುರಳೀಧರನ್ ಉಪಸ್ಥಿತರಿದ್ದರು. ಅಲ್ಲದೆ, ನ್ಯಾಯಾಧೀಶರ ಸಮಿತಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್​ಗಳು ಉಪಸ್ಥಿತರಿದ್ದು, ಅವರ ಮೇಲ್ವಿಚಾರಣೆಯಲ್ಲಿ ಲಕ್ಕಿ ಡ್ರಾ ನಡೆಸಲಾಯಿತು.

ಹೀಗಿರುತ್ತದೆ ಪ್ರಕ್ರಿಯೆ: ಲಕ್ಕಿ ಡ್ರಾಗಾಗಿ 8 ಚಕ್ರಗಳಿರುವ ಒಂದು ಮೆಕ್ಯಾನಿಕಲ್ ಯಂತ್ರ ಬಳಸಲಾಗುತ್ತದೆ. ಇದರ ಮೊದಲ 2 ಚಕ್ರಗಳಿಂದ ಸರಣಿ (ಸೀರೀಸ್) ಸಂಖ್ಯೆಯನ್ನು ಆಯ್ಕೆ ಮಾಡಲಾಗುತ್ತದೆ (ಉದಾಹರಣೆಗೆ: ಟಿಎ, ಟಿಬಿ, ಟಿಸಿ ಇತ್ಯಾದಿ). ಇನ್ನುಳಿದ ಕೊನೆಯ 6 ಚಕ್ರಗಳಿಂದ 0ಯಿಂದ 9ರವರೆಗಿನ ಅಂಕಿಗಳನ್ನು ಡ್ರಾ ಮಾಡಲಾಗುತ್ತದೆ. ಫಲಿತಾಂಶವನ್ನು ಪ್ರಕಟಿಸುವ ಮುನ್ನ, ಯಂತ್ರವನ್ನು ಚಲಾಯಿಸಿ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಿ ವಿವರಿಸಲಾಗುತ್ತದೆ. ನಂತರ ಆಪರೇಟರ್ ಸ್ವಿಚ್ ಒತ್ತುವ ಮೂಲಕ ಬಹುಮಾನಗಳಿಗೆ ಅನುಗುಣವಾಗಿ ಪ್ರತ್ಯೇಕ ಸಂಖ್ಯೆಗಳನ್ನು ತೆಗೆಯುತ್ತಾರೆ ಹಾಗೂ ಅವುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

ಮೊದಲ ಬಹುಮಾನಕ್ಕಾಗಿ ಸಂಪೂರ್ಣ ಒಂದು ಸಂಖ್ಯೆಯನ್ನು ಡ್ರಾ ಮಾಡಲಾಗುತ್ತದೆ, ಅಂದರೆ ಸರಣಿ ಮತ್ತು 6 ಅಂಕಿಗಳನ್ನೊಳಗೊಂಡ ಸಂಪೂರ್ಣ ಒಂದು ಸಂಖ್ಯೆ. ಈ ಬಾರಿ ಈ ಸಂಖ್ಯೆ ಟಿಎಲ್ 360615 ಆಗಿದೆ. ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಬಹುಮಾನಗಳಿಗಾಗಿ ಕೊನೆಯ 6 ಅಂಕಿಗಳ ಸಂಖ್ಯೆಯನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ 239406 ಸಂಖ್ಯೆ ಬಂದರೆ, ಪ್ರತಿಯೊಂದು ಸರಣಿಯಲ್ಲೂ ಕೊನೆಯ 6 ಅಂಕಿಗಳು 239406 ಆಗಿರುವ ಎಲ್ಲರಿಗೂ ಬಹುಮಾನ ಸಿಗುತ್ತದೆ. ನಂತರ ಸಣ್ಣ ಬಹುಮಾನಗಳಿಗಾಗಿ ಕೊನೆಯ 4 ಅಂಕಿಗಳ ಸಂಖ್ಯೆಯನ್ನು ಡ್ರಾ ಮಾಡಲಾಗುತ್ತದೆ ಮತ್ತು ಪ್ರತಿ ಸರಣಿಯಲ್ಲೂ ಆ ಸಂಖ್ಯೆಯನ್ನು ಹೊಂದಿರುವವರಿಗೆ ಬಹುಮಾನ ನೀಡಲಾಗುತ್ತದೆ. ಉದಾಹರಣೆಗೆ 0145 ಸಂಖ್ಯೆ ಬಂದರೆ, ಪ್ರತಿಯೊಂದು ಸರಣಿಯಲ್ಲೂ ಕೊನೆಯ 4 ಅಂಕಿಗಳು 0145 ಆಗಿರುವ ಎಲ್ಲರಿಗೂ ಆ ಬಹುಮಾನ ಲಭಿಸುತ್ತದೆ.

ಇದೇ ಪ್ರಕ್ರಿಯೆಯ ಮೂಲಕ -ಠಿ;30 ಕೋಟಿಯ ಮೊದಲ ಬಹುಮಾನ ‘ಟಿಎಲ್ 360615’ ಟಿಕೆಟ್​ಗೆ ಒಲಿದಿದೆ. ಈ ಟಿಕೆಟ್ ಅನ್ನು ಕಣ್ಣೂರಿನ ಲಾಟರಿ ಏಜೆಂಟ್ ಅನೀಶ್ ಎಂ.ವಿ. ಮಾರಾಟ ಮಾಡಿದ್ದರು. ಕಣ್ಣೂರಿನ ನಿವಾಸಿಯೊಬ್ಬರಿಗೆ ಈ ಮೊದಲ ಬಹುಮಾನ ಸಿಕ್ಕಿದೆ (ಹೆಸರನ್ನು ಈವರೆಗೆ ಬಹಿರಂಗ ಪಡಿಸಲಾಗಿಲ್ಲ). ಈ ಬಂಪರ್​ನಲ್ಲಿ ಎರಡನೇ ಬಹುಮಾನವಾಗಿ ತಲಾ -ಠಿ;1 ಕೋಟಿಯಂತೆ 20 ಜನರಿಗೆ, ಮೂರನೇ ಬಹುಮಾನವಾಗಿ ತಲಾ -ಠಿ;25 ಲಕ್ಷದಂತೆ 20 ಜನರಿಗೆ, ನಾಲ್ಕನೇ ಬಹುಮಾನವಾಗಿ ತಲಾ -ಠಿ;5 ಲಕ್ಷದಂತೆ 10 ಜನರಿಗೆ ಹಾಗೂ ಐದನೇ ಬಹುಮಾನವಾಗಿ ತಲಾ -ಠಿ;2 ಲಕ್ಷದಂತೆ 10 ಜನರಿಗೆ ನೀಡಲಾಗುತ್ತದೆ. ಇದಲ್ಲದೆ -ಠಿ;5000, -ಠಿ;2000, -ಠಿ;1000 ಮತ್ತು -ಠಿ;500ರ 4 ಸಣ್ಣ ಬಹುಮಾನಗಳೂ ಇವೆ. ಒಟ್ಟಾರೆಯಾಗಿ 5.34 ಲಕ್ಷ ಜನರಿಗೆ -ಠಿ;125.54 ಕೋಟಿ ಹಂಚಿಕೆಯಾಗಿದೆ.

ಕೇರಳ ಸರ್ಕಾರ ಇಷ್ಟೊಂದು ದೊಡ್ಡ ಮೊತ್ತವನ್ನು ಏಕೆ ನೀಡುತ್ತದೆ?

ಈ ಸಂಪೂರ್ಣ ಲೆಕ್ಕಾಚಾರವು ಭಾರಿ ಪ್ರಮಾಣದ ಟಿಕೆಟ್ ಮಾರಾಟದ ಮೇಲೆ ಆಧಾರಿತವಾಗಿದೆ. ಈ ಬಾರಿಯ ತಿರುವೋಣಂ ಬಂಪರ್​ಗಾಗಿ ಕೇರಳ ಸರ್ಕಾರವು ಟಿಎಯಿಂದ ಟಿಎಲ್​ವರೆಗೆ 10 ಪ್ರತ್ಯೇಕ ಸರಣಿಗಳಲ್ಲಿ ಟಿಕೆಟ್​ಗಳನ್ನು ಮುದ್ರಿಸಿತ್ತು. ಲಾಟರಿ ಇಲಾಖೆಯ ಪ್ರಕಾರ, ಒಟ್ಟು 90 ಲಕ್ಷ ಟಿಕೆಟ್​ಗಳು ಮಾರಾಟವಾಗಿವೆ. ಪ್ರತಿ ಟಿಕೆಟ್​ನ ಬೆಲೆ -ಠಿ;500 ಆಗಿತ್ತು. ಅಂದರೆ ಸರಿಸುಮಾರು -ಠಿ;450 ಕೋಟಿ ಮೌಲ್ಯದ ಟಿಕೆಟ್​ಗಳು ಮಾರಾಟವಾದವು. ಈ ಮೊತ್ತದಿಂದ ಈ ಬಾರಿ ಸಣ್ಣ-ದೊಡ್ಡ ಬಹುಮಾನಗಳನ್ನು ಒಳಗೊಂಡಂತೆ ಒಟ್ಟು -ಠಿ;125.54 ಕೋಟಿ ಹಂಚಿಕೆ ಮಾಡಲಾಯಿತು. ಟಿಕೆಟ್​ಗಳ ಮುದ್ರಣ, ಏಜೆಂಟರ ಕಮಿಷನ್ ಮತ್ತು ಇತರ ಆಡಳಿತಾತ್ಮಕ ವೆಚ್ಚಗಳನ್ನು ಸಹ ಇದೇ ಮೊತ್ತದಿಂದ ಭರಿಸಲಾಯಿತು.

ಎಲ್ಲ ವೆಚ್ಚಗಳನ್ನು ಕಳೆದ ನಂತರ ಉಳಿಯುವ ಹಣವು ನೇರವಾಗಿ ಸರ್ಕಾರದ ಖಜಾನೆಗೆ ಸೇರುತ್ತದೆ. ಅಂದಾಜಿನ ಪ್ರಕಾರ, ಕೇರಳ ಸರ್ಕಾರಕ್ಕೆ ತೆರಿಗೆಯೇತರ ಮೂಲಗಳಿಂದ ಬರುವ ಆದಾಯದಲ್ಲಿ 70% ಆದಾಯವು ಈ ಲಾಟರಿ ವ್ಯವಸ್ಥೆಯಿಂದಲೇ ಬರುತ್ತದೆ. ಇತ್ತೀಚಿನ ಆರ್​ಟಿಐ ವರದಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ ಕೇರಳ ಸರ್ಕಾರಕ್ಕೆ ಲಾಟರಿಯಿಂದ -ಠಿ;5658.05 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಈ ಆದಾಯ -ಠಿ;1774.52 ಕೋಟಿಯಷ್ಟಿತ್ತು. ಈ ಆದಾಯದಿಂದ ಕೇರಳ ಸರ್ಕಾರವು ‘ಕಾರುಣ್ಯ’ ಹೆಸರಿನ ಯೋಜನೆಯನ್ನು ನಡೆಸುತ್ತಿದ್ದು, ಇದು ಕ್ಯಾನ್ಸರ್, ಕಿಡ್ನಿ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. 2020ರಿಂದ 2025ರ ಅವಧಿಯಲ್ಲಿ ಕಾರುಣ್ಯ ಯೋಜನೆಯಡಿ 2.37 ಲಕ್ಷ ಡಯಾಲಿಸಿಸ್, 83 ಸಾವಿರಕ್ಕೂ ಹೆಚ್ಚು ಕಿಮೊಥೆರಪಿ ಹಾಗೂ 16 ಸಾವಿರಕ್ಕೂ ಅಧಿಕ ಆಂಜಿಯೋಪ್ಲಾ್ಯಸ್ಟಿಗಳನ್ನು ಉಚಿತವಾಗಿ ಮಾಡಲಾಗಿದೆ. ಇದಲ್ಲದೆ, ಕಾನೂನುಬದ್ಧವಾಗಿ ರಾಜ್ಯದಲ್ಲಿ ಲಾಟರಿ ವ್ಯವಸ್ಥೆಯನ್ನು ನಡೆಸುವ ಸಂಪೂರ್ಣ ಹೊಣೆಗಾರಿಕೆಯೂ ಕೇರಳ ಸರ್ಕಾರದ್ದೇ ಆಗಿದೆ.

ಇತರ ರಾಜ್ಯಗಳ ಜನರು ಕೂಡ ಕೇರಳದ ಲಾಟರಿಯನ್ನು ಖರೀದಿಸಬಹುದೇ?

ಹೌದು, ಇತರ ರಾಜ್ಯಗಳಲ್ಲಿ ವಾಸಿಸುವವರು ಕೂಡ ಕೇರಳ ಸರ್ಕಾರದ ಲಾಟರಿ ಟಿಕೆಟ್​ಗಳನ್ನು ಖರೀದಿಸಬಹುದು ಮತ್ತು ಗೆದ್ದರೆ ಬಹುಮಾನದ ಮೊತ್ತವನ್ನು ಪಡೆಯಬಹುದು. ಆದರೆ ಇದಕ್ಕಾಗಿ ಕೆಲವು ಷರತ್ತುಗಳಿವೆ. ಖರೀದಿದಾರರು ಸ್ವತಃ ಕೇರಳಕ್ಕೆ ತೆರಳಿ ಅಲ್ಲಿನ ನೋಂದಾಯಿತ ಲಾಟರಿ ಏಜೆಂಟರಿಂದಲೇ ಟಿಕೆಟ್ ಖರೀದಿಸಬೇಕಾಗುತ್ತದೆ. ಏಕೆಂದರೆ ಕೇರಳದ ಹೊರಗೆ ಈ ಟಿಕೆಟ್​ಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಕಾಗದದ (ಫಿಸಿಕಲ್) ಟಿಕೆಟ್ ಇರುವುದು ಕಡ್ಡಾಯ. ಇವುಗಳನ್ನು ಆನ್​ಲೈನ್ ಮೂಲಕ ಅಥವಾ ಕೊರಿಯರ್ ಮೂಲಕ ಖರೀದಿಸುವುದನ್ನು ನಿಷೇಧಿಸಲಾಗಿದೆ; ಒಂದು ವೇಳೆ ಹಾಗೆ ಖರೀದಿಸಿದರೆ, ಆ ಟಿಕೆಟ್ ಅಮಾನ್ಯವಾಗುತ್ತದೆ.

ಬಹುಮಾನವನ್ನು ಕ್ಲೈಮ್ ಮಾಡಲು ಖರೀದಿದಾರರ ಬಳಿ ಅಸಲಿ ಲಾಟರಿ ಟಿಕೆಟ್, ಬ್ಯಾಂಕ್ ಖಾತೆಯ ವಿವರಗಳು ಮತ್ತು ಪಾಸ್​ಪೋರ್ಟ್ ಅಳತೆಯ ಫೋಟೋ ಇರಬೇಕು. ಜೊತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಾಸ್​ಪೋರ್ಟ್ ನಂತಹ ಗುರುತಿನ ಚೀಟಿಯನ್ನೂ ಒದಗಿಸಬೇಕಾಗುತ್ತದೆ. ಬಹುಮಾನದ ಮೊತ್ತಕ್ಕೆ ಅನ್ವಯವಾಗುವ ತೆರಿಗೆಯನ್ನು ಕಡಿತಗೊಳಿಸಿದ ನಂತರ, ಕೇರಳ ಸರ್ಕಾರವು ಉಳಿದ ಮೊತ್ತವನ್ನು ವಿಜೇತರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. 2023ರ ಓಣಂ ಬಂಪರ್​ನ -ಠಿ;25 ಕೋಟಿಯ ಮೊದಲ ಬಹುಮಾನವನ್ನು ತಮಿಳುನಾಡಿನ ತಿರುಪ್ಪೂರ್​ನ ನಾಲ್ವರು ಸ್ನೇಹಿತರು ಗೆದ್ದುಕೊಂಡಿದ್ದರು. ಇವರು ಕೇರಳ-ತಮಿಳುನಾಡು ಗಡಿಯ ಸಮೀಪವಿರುವ ಪಾಲಕ್ಕಾಡ್​ನಲ್ಲಿ ಟಿಕೆಟ್ ಖರೀದಿಸಿದ್ದರು.

ಭಾರತದ ಎಲ್ಲ ರಾಜ್ಯಗಳಲ್ಲೂ ಲಾಟರಿ ವ್ಯವಸ್ಥೆ ಜಾರಿಯಲ್ಲಿದೆಯೇ?

ಭಾರತದಲ್ಲಿ ಲಾಟರಿ ವ್ಯವಹಾರವು ಕೇಂದ್ರ ಸರ್ಕಾರದ ‘ಲಾಟರೀಸ್ (ರೆಗ್ಯುಲೇಶನ್) ಆಕ್ಟ್, 1998’ ಕಾಯ್ದೆಯ ಅಡಿಯಲ್ಲಿ ನಡೆಯುತ್ತದೆ. ಈ ಕಾನೂನಿನ ಪ್ರಕಾರ, ಯಾವುದೇ ಖಾಸಗಿ ಕಂಪನಿ ಅಥವಾ ಆಪ್ ಲಾಟರಿ ವ್ಯವಸ್ಥೆಯನ್ನು ನಡೆಸುವಂತಿಲ್ಲ; ರಾಜ್ಯ ಸರ್ಕಾರಗಳು ಮಾತ್ರ ತಮ್ಮದೇ ಆದ ನಿಯಮ ಮತ್ತು ಷರತ್ತುಗಳೊಂದಿಗೆ ಲಾಟರಿಯನ್ನು ನಡೆಸಬಹುದು. ಅನುಮತಿಯಿಲ್ಲದೆ ಲಾಟರಿ ನಡೆಸುವುದು ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್) ಸೆಕ್ಷನ್ 297ರ ಅಡಿಯಲ್ಲಿ ಅಪರಾಧವಾಗಿದೆ. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.

ಪ್ರಸ್ತುತ ಒಟ್ಟು 9 ರಾಜ್ಯಗಳಲ್ಲಿ ಲಾಟರಿಗೆ ಅನುಮತಿ ಇದೆ. ಕೇರಳ, ಗೋವಾ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾ ಲ್ಯಾಂಡ್, ಸಿಕ್ಕಿಂ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ. ಆದರೆ ಕರ್ನಾಟಕ, ಗುಜರಾತ್, ತಮಿಳುನಾಡು, ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜ್ಯ ಸರ್ಕಾರಗಳು ತಮ್ಮ ಲಾಂಛನವನ್ನು (ಲೋಗೋ) ಬಳಸಿ ಕೆಲವು ನೋಂದಾಯಿತ ಏಜೆಂಟರು, ವಿತರಕರ ಮೂಲಕ ಹಾಗೂ ಸ್ವತಃ ತಾವೇ ಟಿಕೆಟ್​ಗಳನ್ನು ಮಾರಾಟ ಮಾಡುತ್ತವೆ. ಮಾರಾಟವಾದ ಟಿಕೆಟ್​ಗಳ ಹಣವು ನೇರವಾಗಿ ಸರ್ಕಾರದ ಖಾತೆಗೆ ಜಮೆಯಾಗುತ್ತದೆ. ನಂತರ ಸರ್ಕಾರವೇ ಲಾಟರಿ ಡ್ರಾವನ್ನು ನಡೆಸುತ್ತದೆ.

ಲಾಟರಿಯಲ್ಲಿ ಗೆದ್ದ ಮೊತ್ತದ ಮೇಲೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 194ಬಿ ಅನ್ವಯವಾಗುತ್ತದೆ. ಬಹುಮಾನದ ಮೊತ್ತವು -ಠಿ;10,000ಕ್ಕಿಂತ ಹೆಚ್ಚಿದ್ದರೆ, ಮೊದಲು 30% ಟಿಡಿಎಸ್ ಕಡಿತಗೊಳ್ಳುತ್ತದೆ, ನಂತರ ತೆರಿಗೆಯ ಮೇಲೆ ಆರೋಗ್ಯ ಮತ್ತು ಶಿಕ್ಷಣ ಸೆಸ್ ವಿಧಿಸಲಾಗುತ್ತದೆ. ಅಂದರೆ ಒಟ್ಟು ಕಡಿತವು ಸರಿಸುಮಾರು 31.2% ಆಗುತ್ತದೆ. ಒಂದು ವೇಳೆ ಬಹುಮಾನದ ಮೊತ್ತವು -ಠಿ;50ಲಕ್ಷದಿಂದ -ಠಿ;1 ಕೋಟಿಯ ಒಳಗಿದ್ದರೆ, ತೆರಿಗೆಯ ಮೇಲೆ 10% ಹೆಚ್ಚುವರಿ ಸರ್​ಚಾರ್ಜ್ ಅನ್ವಯವಾಗುತ್ತದೆ, ಅಂದರೆ ಒಟ್ಟು 34.32% ಕಡಿತವಾಗುತ್ತದೆ. ಮೊತ್ತವು -ಠಿ;1 ಕೋಟಿಗಿಂತ ಹೆಚ್ಚಿದ್ದರೆ, ಈ ಸರ್​ಚಾರ್ಜ್ 15% ಆಗುತ್ತದೆ, ಅಂದರೆ ಒಟ್ಟು 35.88%ರಷ್ಟು ಮೊತ್ತ ಕಡಿತಗೊಳ್ಳುತ್ತದೆ. ಇದರಲ್ಲಿ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net