ಚಡ್ಡಿಯಲ್ಲಿ ಮೂತ್ರ ವಿಸರ್ಜಿಸಿದ 5 ವರ್ಷದ ಮಗುವಿನ ಖಾಸಗಿ ಅಂಗವನ್ನೇ ಸುಟ್ಟಿದ ಶಿಕ್ಷಕಿ! ಮಹಿಳೆಯ ವಿಕೃತಿಗೆ ಹಿಡಿಶಾಪ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಡ್ಡಿಯಲ್ಲೇ ಮೂತ್ರ ವಿಸರ್ಜಿಸಿದ ಐದು ವರ್ಷದ ಪುಟ್ಟ ಕಂದಮ್ಮ
  • ಒಂದು ಸಣ್ಣ ತಪ್ಪಿಗೆ ಆತನ ಖಾಸಗಿ ಅಂಗವನ್ನೇ ಸುಟ್ಟಿದ ಶಿಕ್ಷಕಿ
ಉತ್ತರ ಪ್ರದೇಶ: ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಂತೆ ತರಗತಿಯಲ್ಲಿ ಕುಳಿತಿದ್ದ ಐದು ವರ್ಷದ ಪುಟ್ಟ ಕಂದಮ್ಮ ಚಡ್ಡಿಯಲ್ಲೇ ಮೂತ್ರ ವಿಸರ್ಜಿಸಿದ ಎಂಬ ಒಂದು ಸಣ್ಣ ಕಾರಣಕ್ಕೆ ಆತನ ಖಾಸಗಿ ಅಂಗವನ್ನು ಶಿಕ್ಷಕಿ ಸುಟ್ಟಿದ ಘಟನೆ ವಾರಣಾಸಿಯಲ್ಲಿ ವರದಿಯಾಗಿದೆ.
ಜುಲೈ 24ರಂದು ಘಟನೆ ನಡೆದಿದ್ದು, ಸೆರೆನಾ ಸೋನಿ ಪ್ಲೇ ಸ್ಕೂಲ್​ನಲ್ಲಿದ್ದ ಮಗುವು ತರಗತಿಯ ಮಧ್ಯೆ ತಾನು ಶೌಚಾಲಯಕ್ಕೆ ಹೋಗಲು ಅವಸರವಾಗಿದೆ ಎಂದು ಶಿಕ್ಷಕಿಯನ್ನು ಕೇಳಿದೆ. ಆದರೆ, ಇದಕ್ಕೆ ಆ ಕ್ಷಣ ಒಪ್ಪದ ಮಹಿಳೆಯ ಮಾತಿನಿಂದ ಹೆಚ್ಚು ಸಮಯ ತಡೆದುಕೊಳ್ಳಲಾಗದೆ ಕಂದಮ್ಮ ಚಡ್ಡಿಯಲ್ಲೇ ಮೂತ್ರ ವಿಸರ್ಜಿಸಿದೆ. ಇದನ್ನು ಕಂಡು ಸಿಟ್ಟಾದ ಶಿಕ್ಷಕಿ, ಬಾಲಕನನ್ನು ಪಕ್ಕದ ಕೊಠಡಿಗೆ ಎಳೆದೊಯ್ದು, ಚಾಕುವನ್ನು ಬೆಂಕಿಯಲ್ಲಿ ಕಾಯಿಸಿ, ಖಾಸಗಿ ಅಂಗವನ್ನು ಸುಟ್ಟಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.
ದಾಖಲಾಗಿರುವ ಎಫ್​ಐಆರ್ ಪ್ರಕಾರ, ಬಾಲಕನು ಓರ್ವ ವಕೀಲರ ಪುತ್ರ. ಗ್ಯಾಸ್​ ಸ್ಟೌವ್​ನಲ್ಲಿ ಚಾಕುವನ್ನು ಕೆಂಪಾಗುವವರೆಗೆ ಕಾಯಿಸಿ, ಆತನ ಖಾಸಗಿ ಅಂಗವನ್ನು ಸುಟ್ಟಿದ್ದಾಳೆ. ಈ ವಿಷಯವನ್ನು ಯಾರ ಬಳಿಯೂ ಬಾಯಿ ಬಿಡಬಾರದು ಹಾಗೂ ಇನ್ನೊಮ್ಮೆ ಇಂತಹ ಮಿಸ್ಟೇಕ್​ ರಿಪೀಟ್​ ಆಗಬಾರದು ಎಂದು ಎಚ್ಚರಿಕೆ ಕೊಟ್ಟು ಮನೆಗೆ ಕಳುಹಿಸಿದ್ದಾಳೆ. ಇದನ್ನು ಪ್ರಶ್ನಿಸಲು ಹೋದ ನನಗೆ ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಬೆದರಿಕೆ ಹಾಕಿದ್ದಾರೆ ಎಂದು ಮಗುವಿನ ತಂದೆ ವಿವರಿಸಿದ್ದಾರೆ.
ಗಾಯದ ನೋವಿನಿಂದ ಮನೆಗೆ ಹೋದ ಬಾಲಕ, ವಿಪರೀತ ಸಂಕಟದಿಂದ ಹೆತ್ತವರ ಬಳಿ ತನಗಾದ ದುಃಖವನ್ನು ತೋಡಿಕೊಂಡಿದ್ದಾನೆ. ಮಗುವಿನ ತಂದೆ ಮತ್ತು ತಾಯಿ ತಕ್ಷಣವೇ ತರಗತಿ ಶಿಕ್ಷಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಆಕೆ ಯಾವ ಕರೆಗೂ ಉತ್ತರಿಸಿಲ್ಲ. ನಂತರ, ಅವರು ಶಾಲೆಯ ಪ್ರಾಂಶುಪಾಲರಾದ ಹೇಮಲತಾ ಸಿಂಗ್ ಜತೆ ಮಾತನಾಡಿದಾಗ, ಕ್ರಮ ಕೈಗೊಳ್ಳಬೇಕಾದವರೇ ಬೆದರಿಕೆ ಹಾಕಿದಾಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಗುವು ಮಾನಸಿಕ ಆಘಾತ ಮತ್ತು ದೈಹಿಕ ಗಾಯಗಳಿಂದ ನರಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net