2 ಕಂಟೇನರ್​, 400 ಕೋಟಿ ರೂ.! ಬೆಳಗಾವಿಯಲ್ಲಿ ನಡೆದಿದೆ ದೇಶದ ಅತಿದೊಡ್ಡ ರಾಬರಿ; ಕೇಸ್​ ಹಿಂದೆ 3 ರಾಜ್ಯಗಳ ಖಾಕಿ ಪಡೆ

400 ಕೋಟಿ ರೂ. ಹಣ ಅಕ್ರಮ ಸಾಗಾಟ ಪ್ರಕರಣ ಬೆಳಕಿಗೆ
400 ಕೋಟಿ ರೂ. ಹಣ ಅಕ್ರಮ ಸಾಗಾಟ ಪ್ರಕರಣ ಬೆಳಕಿಗೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ದೇಶದ ಅತಿದೊಡ್ಡ ದರೋಡೆ ಕೇಸ್​
  • 2 ಕಂಟೇನರ್​ನಲ್ಲಿ 400 ಕೋಟಿ ರೂ. ಹಣ ಅಕ್ರಮ ಸಾಗಾಟ
  • ಕಳೆದ ವರ್ಷ ಅಕ್ಟೋಬರ್​ 16ರಂದು ನಡೆದಿರುವ ಪ್ರಕರಣ
  • ದೂರುದಾರನ ದೂರಿನ ಬಳಿಕ ಅತಿದೊಡ್ಡ ರಾಬರಿ ಕೇಸ್​ ಬೆಳಕಿಗೆ
ಬೆಳಗಾವಿ: ಎರಡು ಕಂಟೇನರ್​ನಲ್ಲಿ ಅಕ್ರಮವಾಗಿ 400 ಕೋಟಿ ರೂ. ಸಾಗಿಸಿದ ಪ್ರಕರಣವೊಂದು ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ನಡೆದಿರುವ ದೇಶದ ಅತಿದೊಡ್ಡ ದರೋಡೆ ಕೇಸ್​ ಇದಾಗಿದೆ. ಸದ್ಯ ಈ ಕೇಸ್​ ಬೆನ್ನತ್ತಿರುವ ಖಾಕಿ ಪಡೆಗೆ ಇದೆಲ್ಲಿಂದ ಆರಂಭವಾಯಿತು? ಯಾವಾಗ ಸಂಭವಿಸಿತು? ಎಂಬ ಸಂಪೂರ್ಣ ಚಿತ್ರಣ ಈಗಾಗಲೇ ಲಭಿಸಿದೆ.

ದೇಶದ ಅತಿದೊಡ್ಡ ದರೋಡೆ

ದೇಶದ ಅತಿದೊಡ್ಡ ದರೋಡೆ ಎನ್ನಲಾದ ಈ ಪ್ರಕರಣವನ್ನು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಪೊಲೀಸರು ಬೆನ್ನತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್​ 16ರಂದು ನಡೆದಿರುವ ದರೋಡೆ ಕೇಸ್​ ಇದಾಗಿದ್ದು, ಆರೋಪಿಗಳು ಅಕ್ರಮವಾಗಿ ಎರಡು ಕಂಟೇನರ್ ನಲ್ಲಿ 400 ಕೋಟಿ ರೂ. ಹಣ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸಮೀಪದ ಚೋರ್ಲಾ ಘಾಟ್​ನಲ್ಲಿ ನಡೆದಿರುವ ದರೋಡೆ ಎನ್ನಲಾಗಿದೆ. ಎರಡು ಕಂಟೇನರ್ ಪತ್ತೆಗೆ ಬೆಳಗಾವಿ ಪೊಲೀಸರ ಸಹಕಾರ ಕೋರಿರುವ ಮಹಾರಾಷ್ಟ್ರದ ನಾಶಿಕ ಖಾಕಿ ಪಡೆ, ಗೋವಾದಿಂದ ಕಂಟೇನರ್‌ನಲ್ಲಿ ನಾಲ್ಕನೂರು ಕೋಟಿ ರೂ. ಸಾಗಾಟವಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೀಗೆ ಹಣ ಹೊತ್ತೊಯ್ದ ಎರಡು ಕಂಟೇನರ್ ಬೆಳಗಾವಿ ಗಡಿಭಾಗದಲ್ಲಿ ಕಣ್ಮರೆಯಾಗಿವೆ ಎಂದು ತಿಳಿಸಲಾಗಿದೆ.

ಪ್ರಕರಣ ಎಸ್​ಐಟಿಗೆ

ಚೋರ್ಲಾ ಘಾಟ್​ನಲ್ಲಿಯೇ ಕೋಟಿಗಟ್ಟಲೇ ಹಣವಿದ್ದ ಕಂಟೇನರ್ ಹೈಜಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಕರ್ನಾಟಕ ಪೊಲೀಸರ ಸಹಾಯ ಕೋರಿರುವ 'ಮಹಾ' ಖಾಕಿ ಪಡೆ, ಪ್ರಸ್ತುತ ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದೆ. ಅತಿದೊಡ್ಡ ದರೋಡೆ ಕೇಸ್​ ಅನ್ನು ಭಾರೀ ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ‌ಸಿಎಂ ದೇವೇಂದ್ರ ಫಡ್ನವಿಸ್, ಪ್ರಕರಣ ತನಿಖೆಗೆ ಎಸ್ಐಟಿ ರಚಿಸಲು ಆದೇಶ ಹೊರಡಿಸಿದ್ದಾರೆ.

ಒಂದೂವರೆ ತಿಂಗಳು ಒತ್ತೆಯಾಳು...

ಕಂಟೇನರ್ ‌ಕಳ್ಳತನವಾದ ಬಗ್ಗೆ ನಾಶಿಕ ನಿವಾಸಿ ಸಂದೀಪ್ ಪಾಟೀಲ ಎಂಬ ವ್ಯಕ್ತಿಯಿಂದ ದೂರು ದಾಖಲಾಗಿದೆ. ತನ್ನನ್ನು ಕಂಟೇನರ್ ಕಳ್ಳತನ ಆರೋಪದಲ್ಲಿ ಅಪಹರಿಸಿದ್ದರು. ಗನ್ ಪಾಯಿಂಟ್ ಹಿಡಿದು, ಕಂಟೇನರ್ ಕದ್ದಿದ್ದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹಾಕಿದರು ಎಂದು ಬಿಲ್ಡರ್ ಕಿಶೋರ್ ಸಾಳ್ವೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಒಂದೂವರೆ ತಿಂಗಳು ಒತ್ತೆಯಾಳು ಮಾಡಿಕೊಂಡು ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕೊಲೆ ಬೆದರಿಕೆ...

ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಸಂದೀಪ್‌ಗೆ ಕಿಶೋರ್ ಸಹಚರರು ತೀವ್ರ ಹಿಂಸೆ ನೀಡಿದ್ದು, ನೀನೇ ಹಣ ಲಪಟಾಯಿಸಿದ್ದೀಯಾ, 400 ಕೋಟಿ ರೂ. ವಾಪಾಸ್​ ಕೊಡದಿದ್ರೆ, ನಿನ್ನ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸಂದೀಪ್​ ನೀಡಿರುವ ದೂರಿನ ಹಿನ್ನೆಲೆ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ. ಸಂದೀಪ್ ದೂರಿನ ಅನ್ವಯ ಸದ್ಯ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ.

ಗೋವಾ-ಕರ್ನಾಟಕ-ಮಹಾರಾಷ್ಟ್ರ

ಮತ್ತೊಂದೆಡೆ ಪ್ರಕರಣ ತನಿಖೆಗೆ ಸಹಕಾರ ನೀಡುವಂತೆ ಬೆಳಗಾವಿ ಎಸ್ಪಿ ರಾಮರಾಜನ್‌ಗೂ ಪತ್ರ ಕಳುಹಿಸಿರುವ ಮಹಾರಾಷ್ಟ್ರ ಸರ್ಕಾರ, ಗೋವಾ ಪೊಲೀಸರ ಸಹಕಾರವನ್ನೂ ಕೋರಿದೆ. ತಮ್ಮ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಹಣವನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಫಡ್ನವಿಸ್ ಪೊಲೀಸ್​ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net