

ನವದೆಹಲಿ: ಐದು ವರ್ಷಗಳ ಸುದೀರ್ಘ ಕಾಯುವಿಕೆ ನಂತರ, ಕೇಂದ್ರ ಸರ್ಕಾರ ನಾಲ್ಕು ಹೊಸ ಕಾರ್ವಿುಕ ಸಂಹಿತೆಗಳನ್ನು (ಲೇಬರ್ ಕೋಡ್) ಸಂಪೂರ್ಣ ಕಾರ್ಯಗತಗೊಳಿಸಲು ಗೆಜೆಟ್ನಲ್ಲಿ ನಿಯಮಾವಳಿ ಪ್ರಕಟಿಸಿದೆ. ಈ ಮೂಲಕ ದೇಶದ ಕಾರ್ವಿುಕ ವಲಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಪ್ರತಿಯೊಬ್ಬ ಕಾರ್ವಿುಕನಿಗೂ ಕನಿಷ್ಠ ವೇತನ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಲಾಗಿದೆ.
ವೇತನ ಸಂಹಿತೆ (2019), ಕೈಗಾರಿಕಾ ಸಂಬಂಧಗಳ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020) ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ (2020) ಎಂಬ ನಾಲ್ಕು ಕಾನೂನುಗಳು 2025ರ ನ. 21ರಿಂದಲೇ ಜಾರಿಗೆ ಬಂದಿದ್ದರೂ, ಸ್ಪಷ್ಟ ನಿಯಮಾವಳಿಗಳಿಲ್ಲದೆ ಕೆಲವು ಗೊಂದಲಗಳು ಉಂಟಾಗಿದ್ದವು. ಈಗ ನಿಯಮಗಳನ್ನು ಅಧಿಸೂಚಿಸುವ ಮೂಲಕ ಸರ್ಕಾರ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಕಾರ್ವಿುಕರ ವಿಷಯವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವುದರಿಂದ, ರಾಜ್ಯ ಸರ್ಕಾರಗಳು ಸಹ ಈ ನಿಯಮಗಳನ್ನು ಅಳವಡಿಸಿಕೊಳ್ಳಬೇಕಿದ್ದು, ಇದು ದೇಶದಲ್ಲಿ ಹೂಡಿಕೆಗೆ ಪೂರಕವಾದ ಮತ್ತು ಕಾರ್ವಿುಕ ಸ್ನೇಹಿ ವಾತಾವರಣ ನಿರ್ವಿುಸುವ ಗುರಿ ಹೊಂದಿದೆ.
ಕೆಲಸದ ಅವಧಿ: ವಾರದ ಕೆಲಸದ ಅವಧಿಯನ್ನು ಗರಿಷ್ಠ 48 ಗಂಟೆಗಳಿಗೆ ಸೀಮಿತಗೊಳಿಸಲಾಗಿದೆ. ವಾರದಲ್ಲಿ ಕನಿಷ್ಠ ಒಂದು ದಿನ ಕಡ್ಡಾಯ ವಿಶ್ರಾಂತಿ ನೀಡಬೇಕು ಮತ್ತು ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ‘ಓವರ್ಟೈಮ್ ಭತ್ಯೆ ನೀಡುವುದು ಕಡ್ಡಾಯ.
ಆರೋಗ್ಯ, ಸುರಕ್ಷತೆ: 40 ವರ್ಷ ದಾಟಿದ ಕಾರ್ವಿುಕರಿಗೆ ಉದ್ಯೋಗದಾತರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಪ್ರತಿಯೊಬ್ಬ ಕಾರ್ವಿುಕನಿಗೂ ಅಧಿಕೃತ ನೇಮಕಾತಿ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಮಹಿಳಾ ಸಬಲೀಕರಣ: ಮಹಿಳಾ ಉದ್ಯೋಗಿಗಳಿಗೆ ಸಮಾನ ವೇತನ, ಸಮಾನ ಅವಕಾಶ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ರಕ್ಷಣೆ ನೀಡುವುದಕ್ಕೆ ವಿಶೇಷ ಒತ್ತು ನೀಡಲಾಗಿದೆ.
ಮರುಕೌಶಲ ನಿಧಿ: ಕೆಲಸ ಕಳೆದುಕೊಂಡ ಕಾರ್ವಿುಕರಿಗೆ ಹೊಸ ಕೌಶಲ ತರಬೇತಿ ನೀಡಲು ರಾಷ್ಟ್ರೀಯ ಮರುಕೌಶಲ ನಿಧಿ (ನ್ಯಾಷನಲ್ ರೀಸ್ಕಿಲ್ಲಿಂಗ್ ಫಂಡ್) ಸ್ಥಾಪನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.