ಡಿವೋರ್ಸ್​ ಆಗಿ 3 ವರ್ಷಗಳ ಬಳಿಕ ಮೇರಿ ಕೋಮ್ ಮತ್ತು ಮಾಜಿ ಪತಿ ಪರಸ್ಪರ ಆರೋಪ; ಏನಿದು ಆಸ್ತಿ, ಅಫೇರ್ ಕಲಹ ಇಲ್ಲಿದೆ ನೋಡಿ | Mary Kom

ಮೇರಿ ಕೋಮ್ ಮತ್ತು ಅವರ ಮಾಜಿ ಪತಿ ಕರುಂಗ್ ಓನ್ಖೋಲರ್
ಮೇರಿ ಕೋಮ್ ಮತ್ತು ಅವರ ಮಾಜಿ ಪತಿ ಕರುಂಗ್ ಓನ್ಖೋಲರ್
Published on
ನವದೆಹಲಿ: ಸುಮಾರು 18 ವರ್ಷಗಳ ದಾಂಪತ್ಯಕ್ಕೆ 2023ರಲ್ಲಿ ಡಿವೋರ್ಸ್ ಮೂಲಕ ಅಂತ್ಯವಾಡಿದ್ದ ಭಾರತದ ಪ್ರಸಿದ್ದ ಬಾಕ್ಸರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್(Mary Kom) ಮತ್ತು ಅವರ ಮಾಜಿ ಪತಿ ಕರುಂಗ್ ಓನ್ಖೋಲರ್ ಮೂರು ವರ್ಷಗಳ ಬಳಿಕ ಇಬ್ಬರು ವಿವಾಹ ಮುರಿದು ಬಿದ್ದ ಬಗ್ಗೆ ಸಾರ್ವಜನಿಕವಾಗಿ ಪರಸ್ಪರ ಆಸ್ತಿ, ಅಕ್ರಮ ಸಂಬಂಧಗಳ ಆರೋಪ ಮಾಡಿದ್ದಾರೆ.
ಭಾರತದ ಮೊದಲ ಮಹಿಳಾ ಬಾಕ್ಸರ್, 6 ಬಾರಿ ವರ್ಲ್ಡ್ ಅಮೆಚ್ಯೂರ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ ಕೋಮ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವಿವಾಹ, ಪತಿ, ಮಕ್ಕಳು, ಡಿವೋರ್ಸ್​ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತಮ್ಮ ಮತ್ತು ಪತಿ ನಡುವಿನ 18 ವರ್ಷಗಳ ದಾಂಪತ್ಯ ಮುರಿದ ಬಿದ್ದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ದಾಂಪತ್ಯದ ಅವಧಿಯನ್ನು ತಮ್ಮ ಜೀವನದ ಕತ್ತಲೆಯ ಹಂತ ಕರೆದಿರುವ ಮೇರಿ ಕೋಮ್, ನಾನು ಏನನ್ನು ಅನುಭವಿಸಿದೆ ಎಂಬುದರ ಬಗ್ಗೆ ಏನೂ ತಿಳಿದಿಲ್ಲದ ಜನ ನನ್ನ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಒಲಿಂಪಿಕ್ಸ್​ನಲ್ಲಿ ಭಾಗವಹಿಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಹಣಕಾಸಿನ ವಿಚಾರದಲ್ಲಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಆದರೆ 2012ರ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಗಾಯಗೊಂಡಾಗ ನಾನು ನನಗೆ ಹಣಕಾಸಿನ ಬಗ್ಗೆ ಅರಿವಾಯಿತು. ನನ್ನ ಪತಿ ತಮ್ಮ ಹೆಸರಿನಲ್ಲಿದ್ದ ಹಣ, ಆಸ್ತಿಗಳನ್ನ ತನಗೆ ಹೇಳದೆಯೇ ಮಾರಾಟ ಮಾಡಿದ್ದರು. ಕೋಟ್ಯಂತರ ರೂಪಾಯಿ ಸಾಲ ಮಾಡಿದ್ದರು. ನಾನು ಗಾಯಗೊಂಡು ಬೆಡ್‌ರೆಸ್ಟ್ ಆದಾಗ ಅದನ್ನು ನೆನಸಿಕೊಂಡು ನೋವು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಮೇರಿ ಕೋಮ್ ಆರೋಪಕ್ಕೆ ಪತಿ ಅಫೇರ್ ಆರೋಪ

ಡಿವೋರ್ಸ್​ ಪಡೆದು ಮೂರು ವರ್ಷಗಳ ಬಳಿಕ ಮೇರಿ ಕೋಮ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಪತಿ ಕರುಂಗ್ ಓನ್ಖೋಲರ್, ಮೇರಿ ಕೋಮ್ ಮಾಡಿರುವ ಆರೋಪ ಆಧಾರರಹಿತ, ಅವರು ಅಕ್ರಮ ಸಂಬಂಧಗಳಲ್ಲಿ ಭಾಗವಹಿಸಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಡಿವೋರ್ಸ್​​ಗಿಂತ 10 ವರ್ಷಗಳ ಮುಂದೆಯೇ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದವು. 2013ರಲ್ಲಿ ಅವರು ತಮ್ಮ ಜೂನಿಯರ್ ಬಾಕ್ಸರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಬಳಿಕ 2017ರಲ್ಲಿ ಬಾಕ್ಸಿಂಗ್ ಆಕಾಡೆಮಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರ ಜೊತೆಗೂ ಸಂಬಂಧ ಹೊಂದಿದ್ದರು. ಇದಕ್ಕೆ ಸಂಬಂಧ ಪಟ್ಟಂತೆ ನನ್ನತ್ತಿರ ವಾಟ್ಸಾಪ್ ಮೆಸೇಜ್​ನ ಆಧಾರಗಳಿವೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಇಬ್ಬರ ನಡುವೆ ಗಲಾಟೆಯಾಗಿ ಎರಡೂ ಕುಟುಂಬಗಳು ರಾಜಿ ಮಾಡಿ, ಸಂಸಾರವನ್ನು ಮುಂದುವರೆಸಿಕೊಂಡು ಹೋಗಲು ತಿಳಿಸಿದ್ದರು. ಕುಟುಂಬದವರ ಮಾತಿಗೆ ನಾನು ಸುಮ್ಮನಾಗಿದ್ದೆ, ಮುಂದೆ ಇದು ಸಾಧ್ಯವಿಲ್ಲ ಅನ್ನಿಸಿದಾಗ ನಾವು ಡಿವೋರ್ಸ್ ಪಡೆದಿದ್ದೇವೆ. ಅವರು ಸೆಲೆಬ್ರೆಟಿ, ನಾನು ಸಾಮಾನ್ಯ ಮನುಷ್ಯ. ಅವರು ತಮ್ಮ ಜೀವನವನ್ನು ಮುಂದುವರೆಸಲು ನಾನು ಅಡ್ಡಿಪಡಿಸಲ್ಲ. ಆದರೆ ವಿನಾಕಾರಣ ನನ್ನ ಮೇಲೆ ಆರೋಪ ಮಾಡೋದು ಬೇಡ ಎಂದು ಹೇಳಿದ್ದಾರೆ.
ಮೇರಿ ಕೋಮ್ ಮತ್ತುಕರುಂಗ್ ಓನ್ಖೋಲರ್ 2005 ರಲ್ಲಿ ವಿವಾಹವಾದರು. 2023ರಲ್ಲಿ ವಿಚ್ಚೇದನಗೊಂಡಿದ್ದಾರೆ. ದಂಪತಿ ಒಟ್ಟು ನಾಲ್ಕು ಮಕ್ಕಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net