3 ಲಕ್ಷಕ್ಕೆ ಮಾರಾಟವಾಗಿದ್ದ ಯುವತಿ ಇಂಡೋ-ಪಾಕ್ ಗಡಿಯಲ್ಲಿ 3 ವರ್ಷದ ಬಳಿಕ ಪತ್ತೆ: ಆಕೆ ಹೇಳಿದ ಸತ್ಯ ಕೇಳಿ ಪೊಲೀಸರೇ ಶಾಕ್! Missing

3 ಲಕ್ಷಕ್ಕೆ ಮಾರಾಟವಾಗಿದ್ದ ಯುವತಿ ಇಂಡೋ-ಪಾಕ್ ಗಡಿಯಲ್ಲಿ 3 ವರ್ಷದ ಬಳಿಕ ಪತ್ತೆ: ಆಕೆ ಹೇಳಿದ ಸತ್ಯ ಕೇಳಿ ಪೊಲೀಸರೇ ಶಾಕ್! Missing
3 ಲಕ್ಷಕ್ಕೆ ಮಾರಾಟವಾಗಿದ್ದ ಯುವತಿ ಇಂಡೋ-ಪಾಕ್ ಗಡಿಯಲ್ಲಿ 3 ವರ್ಷದ ಬಳಿಕ ಪತ್ತೆ: ಆಕೆ ಹೇಳಿದ ಸತ್ಯ ಕೇಳಿ ಪೊಲೀಸರೇ ಶಾಕ್! Missing
Published on

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನದಲ್ಲಿ ಹಲವು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಪತ್ತೆ
  • 22 ವರ್ಷದ ಯುವತಿಯನ್ನು ಪತ್ತೆಹಚ್ಚುವಲ್ಲಿ ಕೊನೆಗೂ ಯಶಸ್ವಿಯಾದ ಜಾರ್ಖಂಡ್ ಪೊಲೀಸರು
  • ಆಕೆ ಅನುಭವಿಸಿದ ನರಕಯಾತನೆಯ ಆಘಾತಕಾರಿ ಮಾಹಿತಿಗಳು ಪೊಲೀಸನ್ನೇ ಬೆಚ್ಚಿಬೀಳಿಸಿದೆ
  • ಮೂರು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು ಎಂಬ ಆಘಾತಕಾರಿ ಸತ್ಯ ಇದೀಗ ಬಯಲಾಗಿದೆ
ರಾಂಚಿ: ರಾಜಸ್ಥಾನದಿಂದ ಹಲವು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ( Missing ) ಯುವತಿಯೊಬ್ಬಳನ್ನು ಜಾರ್ಖಂಡ್ ಪೊಲೀಸರು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣದಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಜಾರ್ಖಾಂಡ್​ನ ಸಿಮ್ದೇಗಾ ನಿವಾಸಿಯಾದ 22 ವರ್ಷದ ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತೀವ್ರ ತನಿಖೆ ಕೈಗೊಂಡ ಪೊಲೀಸರು ಆಕೆಯನ್ನು ಕೊನೆಗೂ ಪತ್ತೆಹಚ್ಚಿದ್ದಾರೆ. ಆದರೆ, ಸುದೀರ್ಘ ವರ್ಷಗಳ ಬಳಿಕ ಪತ್ತೆಯಾದ ಯುವತಿ, ವಿಚಾರಣೆ ವೇಳೆ ಪೊಲೀಸರ ಎದುರು ಬಿಚ್ಚಿಟ್ಟಿರುವ ಸತ್ಯಗಳು ಹಾಗೂ ಅವಳು ಅನುಭವಿಸಿದ ನರಕಯಾತನೆಯ ಆಘಾತಕಾರಿ ಮಾಹಿತಿಗಳು ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ.
ಈ ನಾಪತ್ತೆ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಸಂತ್ರಸ್ತ ಯುವತಿ 2023 ರಲ್ಲಿ ನಾಪತ್ತೆಯಾಗಿದ್ದಳು. ಆ ಸಮಯದಲ್ಲಿ ನೆರೆಹಳ್ಳಿಯ ವ್ಯಕ್ತಿಯೊಬ್ಬ ಕೆಲಸ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ದೆಹಲಿಗೆ ಕರೆದೊಯ್ದಿದ್ದನು. ದೆಹಲಿಯ ಏಜೆನ್ಸಿಯೊಂದರ ಮೂಲಕ ಆಕೆ ಮನೆಯೊಂದರಲ್ಲಿ ಮನೆಗೆಲಸದಾಕೆಯಾಗಿ ಸೇರಿದರಾದರೂ, ಅಲ್ಲಿನ ತೀವ್ರ ಕಿರುಕುಳವನ್ನು ತಡೆಯಲಾರದೆ ಕೆಲವೇ ದಿನಗಳಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಓಡಿಬಂದಿದ್ದಳು.
ತದನಂತರ ದೆಹಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದ ಬಳಿ ದಿಕ್ಕುತೋಚದೆ ಅಲೆಯುತ್ತಿದ್ದ ಆಕೆಯನ್ನು ಮೀರತ್ ಮೂಲದ ದಂಪತಿಗಳು ಕರೆದೊಯ್ದು, ಬಳಿಕ ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಬಾರ್ಮರ್‌ನ ಕುಟುಂಬವೊಂದಕ್ಕೆ ಬರೋಬ್ಬರಿ ಮೂರು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು ಎಂಬ ಆಘಾತಕಾರಿ ಸತ್ಯ ಈಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಬಾರ್ಮರ್ ತಲುಪಿದ ನಂತರವೂ ಆ ಯುವತಿಯ ಕಷ್ಟಗಳು ಕೊನೆಗೊಳ್ಳಲಿಲ್ಲ, ಅಲ್ಲಿನ ಕುಟುಂಬ ಆಕೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿತ್ತು. ಈ ನರಕಯಾತನೆಯ ಬಂಧನದ ನಡುವೆಯೇ ಆ ಯುವತಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ಎಂದು ಡಿಎಸ್‌ಪಿ ರಣವೀರ್ ಸಿಂಗ್ ಅವರು ತಿಳಿಸಿದ್ದಾರೆ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿದ ಯುವತಿ, ಹೇಗೋ ಫೋನ್ ಮೂಲಕ ತನ್ನ ತಾಯಿಯನ್ನು ಸಂಪರ್ಕಿಸಿ, ತಾನು ಅನುಭವಿಸುತ್ತಿರುವ ಘೋರ ದೌರ್ಜನ್ಯದ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.
ಮಗಳ ಕರುಣಾಜನಕ ಕಥೆಯನ್ನು ಕೇಳಿದ ಯುವತಿಯ ಸಂಬಂಧಿಕರು ತಕ್ಷಣವೇ ಮೇ 20 ರಂದು ಸಿಮ್ದೇಗಾದ ‘ಮಾನವ ಕಳ್ಳಸಾಗಣೆ ತಡೆ ಘಟಕ’ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದರು. ಪ್ರಕರಣದ ಗಾಂಭೀರ್ಯತೆಯನ್ನು ಅರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವಿಶೇಷ ತನಿಖಾ ತಂಡವೊಂದನ್ನು ರಚಿಸಿ ರಾಜಸ್ಥಾನದ ಬಾರ್ಮರ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಯುವತಿಯನ್ನು ಪತ್ತೆಹಚ್ಚಿದ್ದಾರೆ. ಸದ್ಯ ಯುವತಿ ಹಾಗೂ ಆಕೆಯ ಮಗುವನ್ನು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಕರೆತರಲಾಗಿದೆ ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net