2026ರ ಪಂಚರಾಜ್ಯ ಚುನಾವಣೆ ಫಲಿತಾಂಶ; ಬಂಗಾಳದಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ವಿಜಯ ಕಿಂಗ್ ಮೇಕರ್? DMKಗೆ ಭಾರೀ ಹಿನ್ನೆಡೆ | Election Results

ಸಿಎಂ ಮಮತಾ ಬ್ಯಾನರ್ಜಿ, ದಳಪತಿ ವಿಜಯ್ ಹಾಗೂ ಎಂ.ಕೆ.ಸ್ಟಾಲಿನ್
ಸಿಎಂ ಮಮತಾ ಬ್ಯಾನರ್ಜಿ, ದಳಪತಿ ವಿಜಯ್ ಹಾಗೂ ಎಂ.ಕೆ.ಸ್ಟಾಲಿನ್
Published on
ನವದೆಹಲಿ: 2026ರ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ (Election results) ಮತ ಎಣಿಕೆ ಭರದಿಂದ ಸಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಆರಂಭಿಕವಾಗಿ ಬಿಜೆಪಿ, ಕೇರಳದಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದ್ದು​, ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಅದ್ಭುತ ಚೊಚ್ಚಲ ಪ್ರವೇಶದಿಂದ ಭರ್ಜರಿ ಮುನ್ನಡೆ ಸಾಧಿಸಿದ್ದು, ಡಿಎಂಕೆ ಹಿನ್ನಡೆ ಅನುಭವಿಸಿದೆ.
ಬೆಳಗ್ಗೆ 10 ಗಂಟೆಯ ಟ್ರೆಂಡ್ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 166 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನೂ ಕಾಂಗ್ರೆಸ್ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 
ತಮಿಳುನಾಡು ಚುನಾವಣೆಯಲ್ಲಿ ಈ ಭಾರಿ ಬದಲಾವಣೆಯ ಗಾಳಿ ಬೀಸಿದ್ದು, ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಪಕ್ಷವೂ ತನ್ನ ಚೊಚ್ಚಲ ಚುನಾವಣೆಯಲ್ಲಿ ಆರಂಭಿಕವಾಗಿ ಭರ್ಜರಿ ಮುನ್ನಡೆ ಸಾಧಿಸಿದ್ದು, 100 ಸ್ಥಾನಗಳ ಗಡಿ ದಾಟಿದೆ. ಆಡಳಿತರೂಢ ಡಿಎಂಕೆ ಭಾರಿ ಹಿನ್ನಡೆ ಅನುಭವಿಸಿದ್ದು 59 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ವಿಪಕ್ಷ ಎಐಎಡಿಎಂಕೆ 79 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
50 ವರ್ಷಗಳಿಗೂ ಹೆಚ್ಚು ಕಾಲ ದ್ರಾವಿಡ ರಾಜಕೀಯದ ಭದ್ರಕೋಟೆಯಾಗಿದ್ದ, ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿದ್ದ ರಾಜ್ಯದಲ್ಲಿ ದಳಪತಿ ವಿಜಯ್ ಅವರ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇತ್ತೀಚಿನ ಮತಗಟ್ಟೆ ಸಮೀಕ್ಷೆಗಳು ಡಿಎಂಕೆ ಸತತ ಎರಡನೇ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಆಕ್ಸಿಸ್ ಮೈ ಇಂಡಿಯಾ ಈ ಬಾರಿ ರಾಜ್ಯದಲ್ಲಿ ವಿಜಯ್ ಎಫೆಕ್ಟ್ ಪರಿಣಾಮ ಬೀರಲಿದೆ ಎಂದಿತ್ತು. ಅದರಂತೆ ಫಲಿತಾಂಶ ಸಾಗಿದೆ.
ಭಾರಿ ಗೆಲುವಿನಿಂದ ಮರಳಿ ಅಧಿಕಾರಕ್ಕೇರು ನಿರೀಕ್ಷೆಯಿದ್ದ ಡಿಎಂಕೆಗೆ ಭಾರೀ ಆಘಾತವಾಗಿದ್ದು, ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಸಂಭ್ರಮಾಚಾರಣೆಗೆ ಸಿದ್ದಪಡಿಸಿದ್ದ ಎಲ್ಲಾ ವಸ್ತುಗಳನ್ನು ತೆಗೆದುಹಾಕಲಾಗಿದೆ. ಇನ್ನೂ ಮೊದಲ ಚುನಾವಣೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಟಿವಿಕೆ ಪಕ್ಷ ಮತ್ತು ಅದರ ಮುಖ್ಯಸ್ಥ ದಳಪತಿ ವಿಜಯ್, ಗೆಲುವು ನಮ್ಮದೇ ಎಂದು ಹೇಳಿದ್ದಾರೆ. ಇನ್ನೂ ಟಿವಿಕೆ ಜೊತೆಗೆ ಮೈತ್ರಿ ಸಿದ್ದ ಎಂದು ವಿಪಕ್ಷ ಎಐಎಡಿಎಂಕೆ ಹೇಳಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net