_1765994222597.webp?w=480&auto=format%2Ccompress&fit=max)
_1765994222597.webp?w=480&auto=format%2Ccompress&fit=max)
ನವದೆಹಲಿ: ಜಾಗತಿಕ ಸಾಲದ ಮಟ್ಟ ಏರುತ್ತಿರುವುದೇ ಚಿನ್ನದ ಬೆಲೆ ಏರಿಕೆಯ ಹಿಂದಿನ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ಟೇಟ್ ಹೇಳಿದ್ದಾರೆ. ಆರ್ಥಿಕ ಶೃಂಗಸಭೆಯೊಂದರಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2026ರ ವೇಳೆಗೆ ಚಿನ್ನವು ಪ್ರತಿ ಔನ್ಸ್ಗೆ 6,000 ಡಾಲರ್ ಆಗಲಿದೆ. ಭಾರತೀಯ ರೂಪಾಯಿಯಲ್ಲಿ ಇದು ಪ್ರತಿ 10 ಗ್ರಾಂಗೆ ಸುಮಾರು 1,92,800 ರೂ.ಗೆ ತಲುಪಲಿದೆ. ಜಾಗತಿಕ ಸಾಲದ ಮಟ್ಟ ಗಮನಾರ್ಹ ಇಳಿಕೆಯಾಗದ ಹೊರತು ಚಿನ್ನದ ಬೆಲೆ ಏರಿಕೆ ನಿಲ್ಲುವ ಸಾಧ್ಯತೆ ಇಲ್ಲ ಎಂದರು.
ಸುಂಕ ಹೇರಿಕೆ ಮತ್ತು ಅಲ್ಪಾವಧಿಯ ಸ್ಥೂಲ ಆರ್ಥಿಕ ಬೆಳವಣಿಗೆಗಳು ಹೆಚ್ಚಾಗಿ ಪಾರ್ಶ್ವ ವಿದ್ಯಮಾನಗಳಾಗಿವೆ. ಚಿನ್ನದ ದೀರ್ಘಕಾಲೀನ ಬೆಲೆ ಏರಿಕೆಯು ತಾತ್ಕಾಲಿಕ ಭೌಗೋಳಿಕ ರಾಜಕೀಯ ಘಟನೆಗಳಿಗಿಂತ ಆಳವಾದ ರಚನಾತ್ಮಕ ಸಮಸ್ಯೆಗಳಲ್ಲಿ ಬೇರೂರಿದೆ. 2026ರಲ್ಲಿ ಚಿನ್ನದ ಬೆಲೆ ಏರುತ್ತಲೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಆರು ಪ್ರಮುಖ ಕಾರಣಗಳನ್ನು ಅವರು ಉಲ್ಲೇಖಿಸಿದ್ದಾರೆ. ಚೀನಾದಲ್ಲಿನ ನಿಯಂತ್ರಣ ಸಡಿಲಿಕೆ, ದುರ್ಬಲಗೊಳ್ಳುತ್ತಿರುವ ಜಾಗತಿಕ ಕರೆನ್ಸಿಗಳು, ನಿರಂತರ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ಮತ್ತು ಸುಂಕಕ್ಕೆ ಸಂಬಂಧಿಸಿದ ಒತ್ತಡ, ಹೆಚ್ಚುತ್ತಿರುವ ಪರಮಾಣು ಅಪಾಯ, ಹಣಕಾಸು, ಹೂಡಿಕೆ ಅಸ್ಥಿರತೆ ಇವೇ ಆ 6 ಕಾರಣಗಳು ಎಂದಿದ್ದಾರೆ. ರಷ್ಯಾ-ಯೂಕ್ರೇನ್ ಯುದ್ಧ ಅಥವಾ ಸುಂಕದ ವಿವಾದಗಳಿಂದ ಚಿನ್ನದ ಬೆಲೆ ಏರುತ್ತಿಲ್ಲ. ಇಂತಹ ಘಟನೆಗಳು ಬಂದು ಹೋಗುತ್ತಿರುತ್ತವೆ. ಅತಿಯಾದ ಸರ್ಕಾರಿ ವೆಚ್ಚದಿಂದ ಉಂಟಾಗುವ ನಿರಂತರ ಆರ್ಥಿಕ ಒತ್ತಡವೇ ಚಿನ್ನದ ಬೆಲೆ ಏರಿಕೆಗೆ ಕಾರಣ. ವೆಚ್ಚವನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಬ್ರಿಟನ್ ಇದಕ್ಕೊಂದು ಉದಾಹರಣೆ ಎಂದರು.
ಬೆಂಗಳೂರಿನಲ್ಲಿ 4-5 ದಿನಗಳ ಹಿಂದೆಯೇ 2 ಲಕ್ಷ ರೂ.ನ ಗಡಿ ದಾಟಿದ್ದ ಬೆಳ್ಳಿಯ ಬೆಲೆ, ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಬಾರಿಗೆ ಪ್ರತಿ ಕೆಜಿಗೆ 2 ಲಕ್ಷ ರೂ. ಗಡಿ ದಾಟಿದೆ. ಬೆಳ್ಳಿಯ ಬೆಲೆ 7,300 ರೂ.ಗಳಷ್ಟು ಜಿಗಿದು ಬುಧವಾರ ಪ್ರತಿ ಕೆಜಿಗೆ 2,05,800 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಮಂಗಳವಾರ ಇದು 1,98,500 ರೂ. ಇತ್ತು. ಈ ವರ್ಷದಲ್ಲಿ ಇಲ್ಲಿಯವರೆಗೆ, ಬೆಳ್ಳಿ ಬೆಲೆ 1,15,300 ರೂ. ಅಥವಾ ಶೇ. 127.40 ರಷ್ಟು ಹೆಚ್ಚಾಗಿದೆ. ಜ. 1ರಂದು ಇದು 90,500 ರೂ. ಇತ್ತು. ಚಿನ್ನದ ಬೆಲೆ ಬುಧವಾರ 600 ರೂ. ಏರಿಕೆಯಾಗಿ ಪ್ರತಿ 10 ಗ್ರಾಂಗೆ 1,36,500 ರೂ. ತಲುಪಿದೆ. ಮಂಗಳವಾರ ಇದು 1,35,900 ರೂ. ಇತ್ತು.