ದೆಹಲಿ ಹೋರಾಟದ ಹಾದಿಯಲ್ಲಿ ಬೆಳಕು ಕಳೆದುಕೊಂಡ ಯುವಕ! ಕಣ್ಣಿಗೆ ಬಿತ್ತು ಪೆಲೆಟ್ ಗುಂಡು, ಶೇ. 1 ಮಾತ್ರ ಆಶಾಭಾವನೆ! Jantar Mantar Protest

 Jantar Mantar Protest  ಸಾಂದರ್ಭಿಕ ಚಿತ್ರ
Jantar Mantar Protest ಸಾಂದರ್ಭಿಕ ಚಿತ್ರ
Published on
ನವದೆಹಲಿ: ಜುಲೈ 20 ರಂದು ಸಂಸತ್ತಿನ ಕಡೆಗೆ ಜಿರಳೆ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿದ್ದ ಮೆರವಣಿಗೆಯ (Jantar Mantar Protest) ವೇಳೆ ನಡೆದ ಭದ್ರತಾ ಪಡೆಗಳ ಕ್ರಮದಿಂದಾಗಿ, 19 ವರ್ಷದ ಯುವ ಪ್ರತಿಭಟನಾಕಾರನೊಬ್ಬ ತನ್ನ ಬಲಗಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾನೆ. ಘಟನೆಯಲ್ಲಿ ಪೆಲೆಟ್ ಫೈರಿಂಗ್ (Pellet Firing) ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ನೂತನ ಪುರಾವೆಗಳು ಲಭ್ಯವಾಗುತ್ತಿದ್ದಂತೆ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿದೆ.

ಶಸ್ತ್ರಚಿಕಿತ್ಸೆಯ ನಂತರವೂ ದೃಷ್ಟಿ ಮರಳಿ ಬರುವುದು ಅನುಮಾನ!

ಸಂಸತ್ತು ಚಲೋ ಪ್ರತಿಭಟನೆಯ ವೇಳೆ ಗಾಯಗೊಂಡಿದ್ದ ನೈಋತ್ಯ ದೆಹಲಿಯ ನಜಾಫ್‌ಗಢ ನಿವಾಸಿ ಸಾಹಿಲ್ ಲೋಚಬ್ (19) ಅವರ ಬಲಗಣ್ಣಿನಿಂದ ಪೆಲೆಟ್ ಗುಂಡುಗಳನ್ನು ಹೊರತೆಗೆಯಲು ಮಂಗಳವಾರ ಏಮ್ಸ್‌ನ (AIIMS) 'ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಟ್ರಾಮಾ ಸೆಂಟರ್'ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
'ದಿ ಹಿಂದೂ' ವರದಿಯ ಪ್ರಕಾರ, ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನಲ್ಲಿದ್ದ ಗುಂಡುಗಳನ್ನು ವೈದ್ಯರು ಹೊರತೆಗೆದಿದ್ದರೂ, ಕಣ್ಣಿನ ಪಾಪೆಯ ಭಾಗಕ್ಕೆ ತೀವ್ರ ಪೆಟ್ಟಾಗಿರುವುದರಿಂದ ದೃಷ್ಟಿ ಮರಳಿ ಪಡೆಯುವ ಸಾಧ್ಯತೆ ಕೇವಲ ಶೇ. 1 ರಷ್ಟು ಮಾತ್ರವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತೊಬ್ಬ ಯುವಕನಿಗೂ ಗಂಭೀರ ಗಾಯ: ವೈರಲ್ ವೀಡಿಯೋದಿಂದ ಬಟಾಬಯಲಾಯ್ತಾ ಸತ್ಯ?

ಈ ಘಟನೆಯಲ್ಲಿ ಸಾಹಿಲ್ ಲೋಚಬ್ ಜೊತೆಗೆ ಶೇಖ್ ಇರ್ಷಾದ್ ಮನ್ಸೂರಿ ಎಂಬ ಮತ್ತೊಬ್ಬ ಯುವಕ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಕನ್ನಾಟ್ ಪ್ಲೇಸ್‌ನ ಭೂಗತ ಪಾಲಿಕಾ ಬಜಾರ್ ಮಾರುಕಟ್ಟೆಯ ಬಳಿ ಮನ್ಸೂರಿ ಗಾಯಗೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅವರ ದೇಹದಲ್ಲಿದ್ದ ಗುಂಡುಗಳಂತಹ ವಸ್ತುಗಳನ್ನು ಹೊರತೆಗೆದಿದ್ದಾರೆ. ಸದ್ಯ ಅವರು ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು (LHMC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ದಿ ವೈರ್' ಪರಿಶೀಲಿಸಿದ ದೃಶ್ಯಗಳಲ್ಲಿ ಆರ್‌ಎಎಫ್ ಸಿಬ್ಬಂದಿ ಅದೇ ಸ್ಥಳ ಮತ್ತು ಸಮಯದಲ್ಲಿ ಮನ್ಸೂರಿ ಅವರ ಹೊಟ್ಟೆಯ ಭಾಗಕ್ಕೆ ಪೆಲೆಟ್ ಗನ್‌ನಂತೆ ಕಾಣುವ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಮತ್ತೊಂದು ವೀಡಿಯೋದಲ್ಲಿ ಅದೇ ದಿನ ಮತ್ತೊಬ್ಬ ವ್ಯಕ್ತಿಯೂ ಪೆಲೆಟ್ ಗಾಯಗಳಿಂದ ನರಳುತ್ತಿರುವುದು ಸೆರೆಯಾಗಿದೆ.

ದೆಹಲಿ ಪೊಲೀಸ್ ನಿರಾಕರಣೆ: ಆರ್‌ಎಎಫ್ (RAF) ಕಡೆಗೆ ತಿರುಗಿದ ಬೆರಳು!

ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಸಿರುವುದನ್ನು ದೆಹಲಿ ಪೊಲೀಸರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮ್ಮ ಬಳಿ ಪೆಲೆಟ್ ಶಸ್ತ್ರಾಸ್ತ್ರಗಳೇ ಇಲ್ಲ ಹಾಗೂ ಅವುಗಳನ್ನು ಬಳಸಿಯೇ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ 'ಸತ್ಯ-ಪರಿಶೀಲನೆ' ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ, ಘಟನಾ ಸ್ಥಳದಲ್ಲಿದ್ದ ಕೇಂದ್ರ ಸಿಆರ್​ಪಿಎಫ್​ ಮತ್ತು ಆರ್​ಎಎಫ್​ ಪೆಲೆಟ್ ಗನ್ ಬಳಸಿರಬಹುದು ಎಂಬ ಅನುಮಾನಗಳು ಮತ್ತು ಆರೋಪಗಳು ತೀವ್ರಗೊಂಡಿವೆ.

ಏನಿದು ಪೆಲೆಟ್ ಗನ್?

ಸಾಮಾನ್ಯ ಏರ್ ಗನ್‌ಗಳಿಗಿಂತ ಇವು ಸಂಪೂರ್ಣ ಭಿನ್ನ. ಭದ್ರತಾ ಪಡೆಗಳು ಜನಸಂದಣಿಯನ್ನು ನಿಯಂತ್ರಿಸಲು ಬಳಸುವ 12-ಗೇಜ್ ಪಂಪ್-ಆಕ್ಷನ್ ಶಾಟ್‌ಗನ್‌ಗಳು ಒಂದೇ ಬಾರಿಗೆ ಸುಮಾರು 500 ರಿಂದ 600 ಸಣ್ಣ ಲೋಹದ ಗುಂಡುಗಳನ್ನು (Pellets) ಸಿಡಿಸುತ್ತವೆ. ಒಂದೇ ಪೆಟ್ಟಿನಲ್ಲಿ ನೂರಾರು ಚೂರುಗಳು ವಿಶಾಲ ಪ್ರದೇಶದಲ್ಲಿ ಹರಡುವುದರಿಂದ, ಪ್ರತಿಭಟನಾಕಾರರಿಗೆ ವ್ಯಾಪಕ ಹಾಗೂ ತೀವ್ರ ಪ್ರಮಾಣದ ಗಾಯಗಳಾಗುವ ಅಪಾಯವಿರುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net