ಡಿಗ್ರಿ ಇಲ್ಲದೆ BMW ಕಂಪನಿಯಲ್ಲಿ ಪ್ರತಿಷ್ಠಿತ ಹುದ್ದೆ ಗಿಟ್ಟಿಸಿಕೊಂಡ 19 ವರ್ಷದ ಯುವತಿ!

BMW
BMW
Published on
ನವದೆಹಲಿ: ಇಂದಿನ ಕಾಲದಲ್ಲಿ ಕೈಯಲ್ಲೊಂದು ಪದವಿ ಇಲ್ಲದೆ ಕೆಲಸ ಸಿಗುವುದು ಕಷ್ಟ ಎಂಬ ಕಾಲಮಾನದಲ್ಲಿ, 19 ವರ್ಷದ ಯುವತಿಯೊಬ್ಬಳು ಜಾಗತಿಕ ಮಟ್ಟದ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು (BMW) ನಲ್ಲಿ ಉದ್ಯೋಗ ಪಡೆದು ಹೊಸ ಸಂಚಲನ ಸೃಷ್ಟಿಸಿದ್ದಾಳೆ.
ಹೌದು, ಡಿಗ್ರಿ ಇಲ್ಲದಿದ್ದರೂ ಕೌಶಲವಿದ್ದರೆ ಜಗತ್ತು ನಿಮ್ಮ ಕಾಲಬುಡಕ್ಕೆ ಬರುತ್ತದೆ ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ 19 ವರ್ಷದ ಯುವತಿಯೊಬ್ಬಳು ತನ್ನ ಸೋಶಿಯಲ್ ಮೀಡಿಯಾ ಬ್ರ್ಯಾಂಡಿಂಗ್ ಮೂಲಕವೇ ಪ್ರತಿಷ್ಠಿತ ಬಿಎಂಡಬ್ಲ್ಯು (BMW) ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಯಾವುದೇ ಫಾರ್ಮಲ್ ಡಿಗ್ರಿ ಇಲ್ಲದಿದ್ದರೂ ಕೇವಲ ತನ್ನ 'ಪರ್ಸನಲ್ ಬ್ರ್ಯಾಂಡಿಂಗ್' ಮೂಲಕವೇ ಈ ಸಾಧನೆ ಮಾಡಿರುವ ಗೌರಿ ಎಂ. ಅವರ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸೋಶಿಯಲ್ ಮೀಡಿಯಾವೇ ಈಕೆಯ ಪೋರ್ಟ್‌ಫೋಲಿಯೋ!

ಗೌರಿ ಎಂ. ಅವರ ಈ ಯಶಸ್ಸಿನ ಹಿಂದೆ ಇರುವುದು ಅವರ ಪ್ರಬಲ ಸಾಮಾಜಿಕ ಜಾಲತಾಣದ ಉಪಸ್ಥಿತಿ. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಹೆಚ್ಚಾಗಿ ಅವರು ಡಿಜಿಟಲ್ ಜಗತ್ತಿನಲ್ಲಿ ತಮ್ಮದೇ ಆದ ಚಹರೆ ಮೂಡಿಸಿದ್ದರು.
ಲಿಂಕ್ಡ್‌ಇನ್ (LinkedIn) 65,000 ಕ್ಕೂ ಹೆಚ್ಚು ಫಾಲೋವರ್ಸ್ ಮತ್ತು ಇನ್‌ಸ್ಟಾಗ್ರಾಮ್ (Instagram): 35,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇವರು ಸತತವಾಗಿ ಗುಣಮಟ್ಟದ ಕಂಟೆಂಟ್ ಕ್ರಿಯೇಟ್ ಮಾಡುವುದು ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ದೃಷ್ಟಿಕೋನವನ್ನು ಹಂಚಿಕೊಳ್ಳುವುದು ಇವರ ಹವ್ಯಾಸವಾಗಿತ್ತು. ಇದೇ ಇವರನ್ನು ಬಿಎಂಡಬ್ಲ್ಯು ರೆಕ್ರೂಟರ್‌ಗಳ ಕಣ್ಣಿಗೆ ಬೀಳುವಂತೆ ಮಾಡಿದೆ.

ಗೌರಿ ಹೇಳಿದ್ದೇನು? ನಾನು ಯಾರನ್ನೂ ಪಿಚ್ ಮಾಡಿಲ್ಲ!

ತನ್ನ ಈ ಉದ್ಯೋಗದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೌರಿ, "ನಾನು ವಿಶ್ವದ ಅತಿದೊಡ್ಡ ಕಾರು ಸಮೂಹದಿಂದ ಉದ್ಯೋಗದ ಪ್ರಸ್ತಾಪವನ್ನು ಪಡೆದಿದ್ದೇನೆ. ವಿಶೇಷವೆಂದರೆ, ನಾನು ಯಾರನ್ನೂ ಕೆಲಸಕ್ಕಾಗಿ ಕೇಳಿಕೊಂಡಿಲ್ಲ ಅಥವಾ ಒಂದೇ ಒಂದು ಕೋಲ್ಡ್ ಇಮೇಲ್ ಕೂಡ ಕಳುಹಿಸಿಲ್ಲ. ಕಂಪನಿಯೇ ನನ್ನನ್ನು ಹುಡುಕಿಕೊಂಡು ಬಂದಿದೆ" ಎಂದು ಬರೆದುಕೊಂಡಿದ್ದಾರೆ. ಅದೇ ವಾರದಲ್ಲಿ ಅವರಿಗೆ ಕ್ರೀಡಾ ಬ್ರ್ಯಾಂಡ್ ಸೇರಿದಂತೆ ಇನ್ನೂ ಹಲವು ಕಂಪನಿಗಳಿಂದ ಆಫರ್ ಬಂದಿದ್ದವಂತೆ!

ಡಿಗ್ರಿ ವರ್ಸಸ್ ಸ್ಕಿಲ್

ಗೌರಿ ಅವರ ಈ ಸಾಧನೆ ಎರಡು ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಪರ್ಸನಲ್ ಬ್ರ್ಯಾಂಡಿಂಗ್ ಪರ: "ಡಿಗ್ರಿ ಅಥವಾ ದೀರ್ಘಕಾಲದ ಅನುಭವಕ್ಕಿಂತ ಇಂದಿನ ಕಾಲದಲ್ಲಿ ನಿಮ್ಮ ವೈಯಕ್ತಿಕ ಪ್ರೊಫೈಲ್ ದೊಡ್ಡ ಆಸ್ತಿಯಾಗಿದೆ" ಎಂದು ಅನೇಕರು ಗೌರಿಯನ್ನು ಬೆಂಬಲಿಸಿದ್ದಾರೆ.
ವಿಮರ್ಶಾತ್ಮಕ ನೋಟ: "ಇದು ಕೇವಲ ಅಪರೂಪದ ಘಟನೆಯಾಗಿರಬಹುದು. ಎಲ್ಲಾ ಉದ್ಯಮಗಳಿಗೂ ಇದು ಅನ್ವಯಿಸುವುದಿಲ್ಲ. ಇಂದಿಗೂ ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳಿಗೆ ಸಾಂಪ್ರದಾಯಿಕ ಪದವಿ ಅನಿವಾರ್ಯ" ಎಂದು ಕೆಲವರು ವಾದಿಸಿದ್ದಾರೆ. ಶಿಕ್ಷಣದ ಮಹತ್ವವನ್ನು ಯಾರೂ ಕಡೆಗಣಿಸಬಾರದು ಎಂಬ ಎಚ್ಚರಿಕೆಯನ್ನು ನೆಟ್ಟಿಗರು ನೀಡಿದ್ದಾರೆ.
ಒಟ್ಟಿನಲ್ಲಿ, ಈ 19 ವರ್ಷದ ಯುವತಿಯ ಯಶಸ್ಸು ಇಂದಿನ ಯುವ ಪೀಳಿಗೆಗೆ ಹೊಸ ದಾರಿಯನ್ನಂತೂ ತೋರಿಸಿದೆ. ಕೇವಲ ಅಂಕಪಟ್ಟಿಯ ಹಿಂದೆ ಓಡುವ ಬದಲು, ತಮ್ಮಲ್ಲಿರುವ ಕೌಶಲವನ್ನು ಜಗತ್ತಿಗೆ ಸರಿಯಾದ ರೀತಿಯಲ್ಲಿ ಪ್ರದರ್ಶಿಸಿದರೆ ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಇದು ಉದಾಹರಣೆ,(ಎಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net