ನಾಗ್ಪುರದ 18 ಮಹಿಳೆಯರಲ್ಲೂ ಒಂದೇ ಸಮಸ್ಯೆ! ತನಿಖೆಯಲ್ಲಿ ವೈದ್ಯರಿಗೆ ಕಾದಿತ್ತು ಶಾಕಿಂಗ್ ವಿಚಾರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆಗೆ ದಾಖಲಾದ 18 ಮಹಿಳೆಯರಿಗೂ ಒಂದೇ ರೀತಿಯ ಕಿಡ್ನಿ ಸಮಸ್ಯೆ
  • ವೈದ್ಯರ ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಸಂಗತಿ
ನಾಗ್ಪುರ: ಆಸ್ಪತ್ರೆಗೆ ದಾಖಲಾದ 18 ಮಹಿಳೆಯರಿಗೂ ಒಂದೇ ರೀತಿಯ ಕಿಡ್ನಿ ಸಮಸ್ಯೆ (Kidney Problems) ಕಾಣಿಸಿಕೊಂಡ ಬೆನ್ನಲ್ಲೇ ತನಿಖೆ ಕೈಗೊಂಡ ವೈದ್ಯರು ಒಂದು ನಿಮಿಷ ಅಕ್ಷರಶಃ ಬೆರಗಾಗಿ ಹೋಗಿದ್ದಾರೆ.
ವಯೋನ್​ ನ್ಯೂಸ್​ ವರದಿ ಪ್ರಕಾರ, ಪಾಕಿಸ್ತಾನಿ ಫೇರ್‌ನೆಸ್ ಕ್ರೀಮ್ 'ಗೋರಿ' ಎನ್ನಲಾದ ಬ್ಯೂಟಿ ಉತ್ಪನ್ನವನ್ನು ಬಳಸಿದ ನಾಗ್ಪುರದ 15ಕ್ಕೂ ಹೆಚ್ಚು ಮಹಿಳೆಯರಿಗೆ ಒಂದೇ ರೀತಿಯ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಸಲಿಗೆ ಚರ್ಮವನ್ನು ಬಿಳುಪುಗೊಳಿಸುವ ಕ್ರೀಮ್ ಅನ್ನು ಭಾರತದಲ್ಲಿ ಮೀಶೋ ಆ್ಯಪ್​ ಮತ್ತು ಇನ್‌ಸ್ಟಾಗ್ರಾಮ್ ಪುಟಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಅಷ್ಟಕ್ಕೂ, ಈ ಬ್ಯೂಟಿ ಕ್ರೀಮ್ ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟಿದೆ ಮತ್ತು ಭಾರತದಲ್ಲಿ ಖರೀದಿಗೆ ಲಭ್ಯವಿರುವುದು ಸದ್ಯ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಇಂತಹ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯನ್ನು ಹೇಗೆ ಪ್ರವೇಶಿಸಲು ಸಾಧ್ಯ ಎಂಬ ಪ್ರಶ್ನೆ ಜನರಲ್ಲಿ ಕಾಡತೊಡಗಿವೆ. ಒಟ್ಟು ಮೂರು ಬ್ಯೂಟಿ ಪ್ರಾಡೆಕ್ಟ್​ಗಳ ಪೈಕಿ ಎರಡು ಉತ್ಪನ್ನಗಳನ್ನು ಬಳಕೆಗೆ ಅಸುರಕ್ಷಿತ ಎಂದು ಪರಿಗಣಿಸಲಾಗಿದೆ. ಕಾರಣ, ಇದರಲ್ಲಿ ಮೆರ್ಕ್ಯೂರಿ ಮತ್ತು ಲೆಡ್​ ಅಂಶಗಳು ಕೂಡಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಗೋರಿ ಬ್ಯೂಟಿ ಕ್ರೀಮ್, ಫೇಸ್ ಫ್ರೆಶ್ ಗೋಲ್ಡ್ (ಬ್ಯೂಟಿ ಕ್ರೀಮ್ ಮತ್ತು ಬ್ಯೂಟಿ ಸೀರಮ್) ಮತ್ತು ಗೋಲ್ಡನ್ ಸ್ಟಾರ್ ಬ್ಯೂಟಿ ಕ್ರೀಮ್‌ಗಳ ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ನಿಷೇಧಿಸುವಂತೆ ಎಫ್‌ಡಿಎ ಆದೇಶಿಸಿದೆ. ಪಾಕಿಸ್ತಾನ ಜೊತೆಗೆ ನೇರ ವಾಣಿಜ್ಯ ಆಮದು ಮತ್ತು ವ್ಯಾಪಾರದ ಮೇಲೆ ಕೇಂದ್ರ ಸರ್ಕಾರವು ಸಂಪೂರ್ಣ ನಿಷೇಧ ಹೇರಿದೆ. ಆದಾಗ್ಯೂ, ಕೆಲವು ಜನರು ಪಾಕಿಸ್ತಾನಿ ಉತ್ಪನ್ನಗಳನ್ನು ಭಾರತಕ್ಕೆ ಸಾಗಿಸಲು ಅಕ್ರಮ ಮಾರ್ಗಗಳನ್ನು ಕಂಡುಕೊಂಡಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ.
ವೈದ್ಯರು ಹಲವಾರು ರೋಗಿಗಳಲ್ಲಿ ಒಂದೇ ಮಾದರಿಯ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಈ ಘಟನೆ ಬೆಳಕಿಗೆ ಬಂದಿದೆ. ಎರಡು ವರ್ಷಗಳ ಅವಧಿಯಲ್ಲಿ ನಾಗ್ಪುರದಲ್ಲಿ ಒಟ್ಟು ಹದಿನೆಂಟು ಮಹಿಳೆಯರಿಗೆ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಂಡಿವೆ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದೆ. ಚಿಕಿತ್ಸೆ ಪಡೆಯಲು ಬಂದ ಇವರೆಲ್ಲರೂ ಒಂದೇ ಕ್ರೀಮ್ ಬಳಸುತ್ತಿದ್ದಾರೆ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net