ಕಳೆದ 10 ವರ್ಷಗಳಲ್ಲಿ 17 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ; ನಿರುದ್ಯೋಗ ದರ 3.1%ಕ್ಕೆ ಇಳಿದಿದೆ: ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯಾ | Unemployment rate down to 3.1%

ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ
ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ 10 ವರ್ಷಗಳಲ್ಲಿ 17 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮಾಹಿತಿ
  • ನಿರುದ್ಯೋಗ ದರ 3.1%ಕ್ಕೆ ಇಳಿದಿ ಎಂದ ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯಾ
  • 3 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸುವತ್ತ ಕೇಂದ್ರ ಸರ್ಕಾರದ ಗುರಿ
ನವದೆಹಲಿ: ಭಾರತದಲ್ಲಿ ಉದ್ಯೋಗಾವಕಾಶಗಳ ಕೊರತೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ 17 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಇತರೆ ಅಧಿಕೃತ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಈ ಮಾಹಿತಿ ನೀಡಿದ್ದಾರೆ.
ಎನ್​ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, 2014ರಿಂದ 2024ರವರೆಗೆ ದೇಶದಲ್ಲಿ ಸರಾಸರಿ ವರ್ಷಕ್ಕೆ 1.7 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ನೋಂದಾಯಿತ ಸಂಸ್ಥೆಗಳು ಮತ್ತು ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಔಪಚಾರಿಕ ಉದ್ಯೋಗ ವಲಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಭಾರತದ ನಿರುದ್ಯೋಗ ದರ 3.1%ಕ್ಕೆ ಇಳಿಕೆ

ವಿಶ್ವ ಬ್ಯಾಂಕ್ ಹಾಗೂ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ ಭಾರತದ ನಿರುದ್ಯೋಗ (Unemployment) ದರ 3.1%ಕ್ಕೆ ಇಳಿದಿದೆ. ಇದು ಜಾಗತಿಕ ಸರಾಸರಿ 4.8%ಗಿಂತ ಕಡಿಮೆ. ಯುವಕರ ಉದ್ಯೋಗಾವಕಾಶ (Employment) ಹೆಚ್ಚಿಸಲು ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ ಹಾಗೂ ಲಖ್ಪತಿ ದೀದಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದು ಎಂದು ಮಾಂಡವೀಯಾ ಪ್ರತಿಪಾದಿಸಿದ್ದಾರೆ.

3 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿ

ಇತ್ತೀಚೆಗೆ ಘೋಷಿಸಿರುವ 2 ಲಕ್ಷ ಕೋಟಿ ರೂಪಾಯಿಗಳ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಪ್ಯಾಕೇಜ್ ಮೂಲಕ 4 ಕೋಟಿಗೂ ಹೆಚ್ಚು ಯುವಕರಿಗೆ ಔಪಚಾರಿಕ ಉದ್ಯೋಗದ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ. ಜೊತೆಗೆ ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆ ಅಡಿ 3 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿಯಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಮಾಡಿದ ಹೂಡಿಕೆಯಿಂದ ರೈಲ್ವೆ, ಹೆದ್ದಾರಿ, ಮೆಟ್ರೋ, ವಿಮಾನ ನಿಲ್ದಾಣ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸುಮಾರು 5.88 ಕೋಟಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net