ಕಳೆದ 10 ವರ್ಷದಲ್ಲಿ 152 ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಯಾರಿಗೂ ಶಿಕ್ಷೆಯಾಗಿಲ್ಲ: ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ! Rahul Gandhi

ಕಳೆದ 10 ವರ್ಷದಲ್ಲಿ 152 ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಯಾರಿಗೂ ಶಿಕ್ಷೆಯಾಗಿಲ್ಲ: ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ! Rahul Gandhi
ಕಳೆದ 10 ವರ್ಷದಲ್ಲಿ 152 ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಯಾರಿಗೂ ಶಿಕ್ಷೆಯಾಗಿಲ್ಲ: ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ! Rahul Gandhi
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಹತ್ತು ವರ್ಷಗಳಲ್ಲಿ 152 ಪ್ರಶ್ನೆ ಪತ್ರಿಕೆ ಸೋರಿಕೆ ಎಂದ ರಾಹುಲ್ ಗಾಂಧಿ
  • ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
  • ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭ್ರಷ್ಟ ಮತ್ತು ಅಸಮರ್ಥ ತಕ್ಷಣ ರಾಜೀನಾಮೆ ನೀಡಲಿ ಎಂದು ರಾಹುಲ್ ಆಗ್ರಹ
  • ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ
ನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ( Rahul Gandhi ), ವಿದ್ಯಾರ್ಥಿಗಳು ನ್ಯಾಯಯುತ ಕಾರಣಕ್ಕಾಗಿಯೇ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ, ಆದರೆ ಕೇಂದ್ರ ಸರ್ಕಾರ ಅವರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಇಂದು (ಜುಲೈ 22) ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಸ್ತುತ ಆಡಳಿತದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭ್ರಷ್ಟ ಮತ್ತು ಅಸಮರ್ಥ ಎಂದು ಕರೆದಿರುವ ರಾಹುಲ್​, ತಕ್ಷಣವೇ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ತೀರ ನ್ಯಾಯಯುತವಾದ ಬೇಡಿಕೆಯಾಗಿದೆ ಎಂದು ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನ್ ಅವರು ಈ ಇಡೀ ಶಿಕ್ಷಣ ರಂಗದ ಗೊಂದಲಕ್ಕೆ ಮೂಲ ಕಾರಣವಾಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಭಾರತದ ಅತಿ ದೊಡ್ಡ ಆಸ್ತಿಯಾಗಿದ್ದ ಶಿಕ್ಷಣ ವ್ಯವಸ್ಥೆಯನ್ನು ಶಿಕ್ಷಣ ಸಚಿವರು ನಾಶಪಡಿಸಿದ್ದಾರೆ ಎಂದು ರಾಹುಲ್​ ಅವರು ಗಂಭೀರ ಆರೋಪ ಮಾಡಿದ್ದಾರೆ.

152 ಪ್ರಶ್ನೆ ಪತ್ರಿಕೆ ಸೋರಿಕೆ

ಕಳೆದ 10 ವರ್ಷಗಳಲ್ಲಿ ಕನಿಷ್ಠ 152 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಅಂಕಿ ಅಂಶಗಳನ್ನು ನೀಡಿದ ರಾಹುಲ್ ಗಾಂಧಿ, ಈ ವಿಚಾರದಲ್ಲಿ ಯಾವುದೇ ಹೊಣೆಗಾರಿಕೆ ಇಲ್ಲವಾಗಿದೆ ಎಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಸರಾಸರಿ ತಿಂಗಳಿಗೆ ಒಂದರಂತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇದರಿಂದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಆದಾಗ್ಯೂ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಶಿಕ್ಷಣವು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ತಲುಪದಂತೆ ದುಬಾರಿಯಾಗಿದೆ. ಭಾರತದಲ್ಲಿ ನೀಟ್ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳ ವಾರ್ಷಿಕ ಕೋಚಿಂಗ್ ವೆಚ್ಚ 1.32 ಲಕ್ಷ ಕೋಟಿ ರೂಪಾಯಿ ತಲುಪಿದ್ದು, ಇದು ದೇಶದ ವಾರ್ಷಿಕ ಶಿಕ್ಷಣ ಬಜೆಟ್ ಆದ 1.4 ಲಕ್ಷ ಕೋಟಿ ರೂಪಾಯಿಗೆ ಹತ್ತಿರದಲ್ಲಿದೆ. ಈ ಅಕ್ರಮ ವ್ಯವಸ್ಥೆಯು ಕೇವಲ ಶ್ರೀಮಂತರಿಗೆ ಮಾತ್ರವೇ ಅವಕಾಶ ನೀಡುತ್ತಿದ್ದು, ಬಡವರಿಗೆ ಯಾವುದೇ ಜಾಗವಿಲ್ಲದಂತೆ ಮಾಡಿದೆ ಎಂದು ರಾಹುಲ್​ ಗಾಂಧಿ ಅವರು ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳ ಇತರ ಬೇಡಿಕೆಗಳನ್ನು ಬೆಂಬಲಿಸಿದ ರಾಹುಲ್ ಗಾಂಧಿ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸೋಮವಾರ ನಡೆದ ದಾಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಯವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಎಂದು ಅವರು ತಮ್ಮ ಪಟ್ಟು ಮುಂದುವರಿಸಿದ್ದಾರೆ. ಪ್ರಧಾನಿ ನಿವಾಸದ ಹೊರಗೆ ನಡೆದ ಧರಣಿ ವೇಳೆ ಪೊಲೀಸರು ತಮ್ಮ ಮೇಲೆ ನಡೆಸಿದ ತಳ್ಳಾಟದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ತಮಗೆ ಬಿದ್ದ ಕೆಲವು ಪೆಟ್ಟುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ವಿದ್ಯಾರ್ಥಿಗಳ ಧ್ವನಿಯಾಗುವುದು ತಮಗೆ ಸಿಕ್ಕ ಗೌರವ ಎಂದು ಭಾವಿಸಿದ್ದು, ಸರ್ಕಾರ ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಮುಖ್ಯವಲ್ಲ, ಆದರೆ ವಿದ್ಯಾರ್ಥಿಗಳ ಬೇಡಿಕೆಗಳು ಮತ್ತು ಅವರ ಭವಿಷ್ಯವೇ ತಮಗೆ ಮುಖ್ಯ ಎಂದು ರಾಹುಲ್ ಗಾಂಧಿ​ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net