ಪೊಲೀಸರ ಮನೆಯೇ ಈತನ ಟಾರ್ಗೆಟ್​! ಖತರ್ನಾಕ್​ ಕಳ್ಳನ 15 ವರ್ಷಗಳ ಸೇಡು ಕಡೆಗೂ ಬಯಲು | Serial Thief

ಕಡೆಗೂ ಸಿಕ್ಕಿಬಿದ್ದ ಖತರ್ನಾಕ್​ ಕಳ್ಳ
ಕಡೆಗೂ ಸಿಕ್ಕಿಬಿದ್ದ ಖತರ್ನಾಕ್​ ಕಳ್ಳ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರ ಮನೆಯೇ ಈ ಕಳ್ಳನ ಟಾರ್ಗೆಟ್​
  • 15 ವರ್ಷಗಳ ದ್ವೇಷವೇ ಇದಕ್ಕೆ ಕಾರಣ
  • ಸರಣಿ ಕಳ್ಳತನದ ಕಿಲಾಡಿ ಕಡೆಗೂ ಖಾಕಿ ವಶಕ್ಕೆ
ಇಂದೋರ್​: ಪೊಲೀಸ್​ ಅಧಿಕಾರಿಗಳ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಕಿರಾತಕ ಕಳ್ಳನೊಬ್ಬ ಕಡೆಗೂ ಅರೆಸ್ಟ್​ ಆದ ಪ್ರಕರಣ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಮಧ್ಯೆ, ಇದೊಂದು ಸಾಮಾನ್ಯ ಕೇಸ್​ ಎಂದು ಸುಮ್ಮನಾಗಿದ್ದ ಖಾಕಿ ಪಡೆ, ಆತನ ಟಾರ್ಗೆಟ್​ ಹಿಂದಿದ್ದ ಉದ್ದೇಶ ಕೇಳಿ ಒಂದು ನಿಮಿಷ ಆಶ್ಚರ್ಯಚಕಿತರಾದರು.  
ಪೊಲೀಸರ ಮನೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಖದೀಮನನ್ನು ಅಲಿರಾಜ್‌ಪುರ ಮೂಲದ ದೀಪೇಶ್ ಎಂದು ಗುರುತಿಸಲಾಗಿದೆ. ವಿಚಿತ್ರವೆಂದರೆ, 15 ವರ್ಷಗಳ ಸೇಡು ತೀರಿಸಿಕೊಳ್ಳಲು ಅಧಿಕಾರಿಗಳ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದೆ ಎಂದು ದೀಪೇಶ್​ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ. ಅಷ್ಟಕ್ಕೂ, ಆತನ ದ್ವೇಷದ ಹಿಂದಿರುವ ಅಸಲಿ ಕಾರಣವೇನು? ಎಂಬುದರ ವಿವರ ಹೀಗಿದೆ ನೋಡಿ. 

ಖಾಕಿ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಜ.20ರಂದು ಖಾಂಡ್ವಾ ಪೊಲೀಸ್ ಲೈನ್ಸ್‌ನಲ್ಲಿರುವ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಕರಣ್‌ಪಾಲ್ ಸಿಂಗ್ ಮತ್ತು ಸುರೇಶ್ ಖಾಟೆ ಅವರ ಮನೆಗಳಲ್ಲಿ ದರೋಡೆ ನಡೆದಿತ್ತು. ಚಿನ್ನಾಭರಣ ಮತ್ತು ನಗದು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳವು ಮಾಡಲಾಗಿತ್ತು. ಆರಕ್ಷಕರ ಮನೆಯಲ್ಲೇ ಹೀಗೆ ಆದರೆ, ಇನ್ನೂ ಸಾಮಾನ್ಯ ಜನರ ಕಥೆಯೇನು? ಎಂಬ ಪ್ರಶ್ನೆ ಮೂಡುತ್ತಿದ್ದಂತೆ ಪ್ರಕರಣದ ತನಿಖೆ ಚುರುಕಾಯಿತು.

ಕಿಲಾಡಿ ದೀಪೇಶ್ 

ಸ್ಥಳೀಯ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ಶಂಕಿತ ವ್ಯಕ್ತಿಯನ್ನೇ ಆರೋಪಿ ಎಂದು ಗುರುತಿಸಿದ ಪೊಲೀಸರು, ಆತನಿಗಾಗಿ ಶೋಧ ಆರಂಭಿಸಿದರು. ಜಹಾಬುವಾ, ಅಲಿರಾಜ್‌ಪುರ ಮತ್ತು ಧಾರಾ ಜಿಲ್ಲೆಗಳಲ್ಲಿಯೂ ಈತನಿಗಾಗಿ ಖಾಕಿ ಪಡೆ ನಿರಂತರವಾಗಿ ಹುಡುಕಾಟ ನಡೆಸಿತು. ಆದರೆ, ಕಿಲಾಡಿ ದೀಪೇಶ್ ಆಗಾಗ್ಗೆ ಸ್ಥಳ ಬದಲಾಯಿಸುತ್ತಿದ್ದರಿಂದ ಅಷ್ಟು ಸುಲಭವಾಗಿ ಅವನನ್ನು ಹಿಡಿಯುವುದು ಕಷ್ಟಸಾಧ್ಯವಾಯಿತು. 
ಟೆಕ್ನಿಕಲ್​ ಟ್ರ್ಯಾಕಿಂಗ್ ಆಧಾರದ ಮೇಲೆ ಆರೋಪಿಯು ಬುರ್ಹಾನ್‌ಪುರದ ಕಡೆಗೆ ತೆರಳುತ್ತಿದ್ದಾಗ ಅರೆಸ್ಟ್​ ಮಾಡಲಾಯಿತು. ಪೊಲೀಸರು ತನ್ನನ್ನು ಬೆನ್ನತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆತ ಛಾವಣಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಆಗಲಿಲ್ಲ. ಮೊದಲೇ ಕೈ ಮತ್ತು ಕಾಲಿಗೆ ಗಾಯ ಮಾಡಿಕೊಂಡಿದ್ದ ದೀಪೇಶ್​ನನ್ನು ಬಂಧಿಸಿದ ಖಾಕಿ ಪಡೆ, ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕವೇ ನ್ಯಾಯಾಲಯಕ್ಕೆ ಹಾಜರುಪಡಿಸಿತು. 

15 ವರ್ಷಗಳ ದ್ವೇಷಕ್ಕೆ ಇದೇ ಕಾರಣ

ಸ್ಟೇಷನ್ ಹೌಸ್ ಅಧಿಕಾರಿ ಪ್ರವೀಣ್ ಆರ್ಯ ಆರೋಪಿಯ ಬಗ್ಗೆ ಕೆಲವು ವಿಚಾರಗಳನ್ನು ಬಹಿರಂಗಪಡಿಸಿದರು. 15 ವರ್ಷಗಳ ಹಿಂದೆ ಅಲಿರಾಜ್‌ಪುರದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ದೀಪೇಶ್​ನನ್ನು ಮನಬಂದಂತೆ ಥಳಿಸಿದ್ದರು. ಈ ಸಿಟ್ಟು ಅವನ ಮನಸ್ಸಿನಲ್ಲಿ ಆಳವಾಗಿ ಬೇರೂರಿತು. ಅಂದಿನಿಂದ ಇಂದಿನವರೆಗೆ ಆತ ಪೊಲೀಸರ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ. ಅವರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದರು.

ಇನ್ನಿಬ್ಬರು ಬಾಕಿ

ದೀಪೇಶ್ ಇಲ್ಲಿಯವರೆಗೆ 16 ಪೊಲೀಸ್​ ಸಿಬ್ಬಂದಿ ಮತ್ತು ಅಧಿಕಾರಿಗಳ ಮನೆಗಳಲ್ಲಿ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಇರುವ ಪ್ರದೇಶಗಳಲ್ಲಿ, ಬೀದಿ ವ್ಯಾಪಾರಿಯಂತೆ ನಟಿಸುತ್ತಾ, ರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ. ಈ ಕಳ್ಳತನ ಕೇಸ್​ನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ರಮೇಶ್ ಮತ್ತು ಭುರಾಲಿಯಾ ಸೆರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net