ಭಯ ಮತ್ತು ನಂಬಿಕೆಯ ನಡುವೆ ಒಂದನ್ನು ಆರಿಸಿಕೊಳ್ಳಬೇಕಿದೆ..ದೀದಿ ಸರ್ಕಾರದ 15 ವರ್ಷಗಳ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ ಅಮಿತ್​ ಷಾ | Amit Shah

Amit Shah |  ಗೃಹ ಸಚಿವ ಅಮಿತ್ ಷಾ
Amit Shah | ಗೃಹ ಸಚಿವ ಅಮಿತ್ ಷಾ
Published on
ಕೊಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ರಾಜಕೀಯ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah), ಶನಿವಾರ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ 15 ವರ್ಷಗಳ ಸುದೀರ್ಘ ಚಾರ್ಜ್‌ಶೀಟ್ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಷಾ, ಈ ಮೂಲಕ ಬಂಗಾಳದ ಆಡಳಿತ, ಕಾನೂನು ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಮಮತಾ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಸ್ಸಾಂನಲ್ಲಿ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ, ಆದರೆ ಬಂಗಾಳವು ಇಂದಿಗೂ ಒಳನುಸುಳುವವರಿಗೆ ಸುಲಭ ಪ್ರವೇಶ ಬಿಂದುವಾಗಿ ಉಳಿದಿದೆ ಎಂದು ಆರೋಪಿಸಿದ ಷಾ, ಅಕ್ರಮ ವಲಸಿಗರು ಸ್ಥಳೀಯರ ಉದ್ಯೋಗ ಮತ್ತು ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿದ್ದಾರೆ, ಗಡಿ ಬೇಲಿ ಹಾಕಲು ಮಮತಾ ಸರ್ಕಾರ ಭೂಮಿ ನೀಡಲು ವಿಫಲವಾಗಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ 45 ದಿನಗಳಲ್ಲಿ ಗಡಿ ಭದ್ರತೆಯ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಬಿಡುಗಡೆ ಮಾಡಲಾದ 15 ವರ್ಷಗಳ ಚಾರ್ಜ್‌ಶೀಟ್​​ನಲ್ಲಿ ಭ್ರಷ್ಟಾಚಾರ, ಕೈಗಾರಿಕಾ ಹಿನ್ನಡೆ, ರಾಜಕೀಯ ಹಿಂಸಾಚಾರ ಮತ್ತು ಕಟ್ ಮನಿ ಸಂಸ್ಕೃತಿಯನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಟಿಎಂಸಿ ಆಡಳಿತದ ಅರಾಜಕತೆಯನ್ನು ಗಮನಿಸಿದರೆ, ಜನ ಈಗ ಕಮ್ಯುನಿಸ್ಟ್ ಆಡಳಿತವೇ ಉತ್ತಮವಾಗಿತ್ತು ಎನ್ನುವ ಮಟ್ಟಕ್ಕೆ ಬೇಸತ್ತಿದ್ದಾರೆ ಎಂದು ಷಾ ಲೇವಡಿ ಮಾಡಿದರು. 
ಮಹಿಳಾ ಮುಖ್ಯಮಂತ್ರಿಯ ಆಡಳಿತದಲ್ಲೇ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ ಮತ್ತು ಅಪರಾಧಿಗಳಿಗೆ ಆಡಳಿತ ಪಕ್ಷದ ನಾಯಕರೇ ಆಶ್ರಯ ನೀಡುತ್ತಿದ್ದಾರೆ, ಮಮತಾ ಬ್ಯಾನರ್ಜಿ ಅವರು ಕಾಲಿಗೆ ಪೆಟ್ಟಾದಂತಹ ಘಟನೆಗಳನ್ನು ಬಳಸಿ ವಿಕ್ಟಿಮ್​ ಕಾರ್ಡ್ ಆಟ ಆಡುವ ಮೂಲಕ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ, ಆದರೆ ಈ ಬಾರಿ ಅಂತಹ ತಂತ್ರಗಳು ನಡೆಯುವುದಿಲ್ಲ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
ರಾಜಕೀಯ ಹಿಂಸಾಚಾರವನ್ನು ಚುನಾವಣೆ ಗೆಲ್ಲುವ ತಂತ್ರವನ್ನಾಗಿ ಟಿಎಂಸಿ ಬಳಸುತ್ತಿದೆ ಎಂದು ಅಮಿತ್ ಶಾ ಟೀಕಿಸಿದ್ದು, ಬಿಜೆಪಿ ಬೆಂಬಲಿಗರನ್ನು ಗುರಿಯಾಗಿಸುವುದು ಮತ್ತು ಮತದಾರರ ಪಟ್ಟಿಯಲ್ಲಿ ನುಸುಳುಕೋರರನ್ನು ಸೇರಿಸಿ ಅಕ್ರಮ ನಡೆಸಲಾಗುತ್ತಿದೆ, ಬಂಗಾಳದ ಜನತೆ ಈಗ ಭಯ ಮತ್ತು ನಂಬಿಕೆಯ ನಡುವೆ ಒಬ್ಬರನ್ನು ಆರಿಸಿಕೊಳ್ಳಬೇಕಿದೆ ಎಂದಿರುವ ಅಮಿತ್ ಷಾ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾ, ಬಂಗಾಳದ ಘನತೆ, ಉದ್ಯೋಗ ಮತ್ತು ಭೂಮಿಯನ್ನು ರಕ್ಷಿಸಲು ಬಿಜೆಪಿ ಬದ್ಧವಾಗಿದೆ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net