ಪ್ರಧಾನಿ ಮೋದಿ ಭಾಷಣದ 'ಆ' ಒಂದು ಗ್ಲಾಸ್ ಕಥೆ!...ದೇಶದ ಅಭಿವೃದ್ಧಿ ಪಯಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ನಮೋ | PM Modi In SRCC

PM Modi In SRCC | ದೇಶದ ಅಭಿವೃದ್ಧಿ ಪಯಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ನಮೋ
PM Modi In SRCC | ದೇಶದ ಅಭಿವೃದ್ಧಿ ಪಯಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ನಮೋ
Published on
PM Modi In SRCC: ಕೆಲವು ಭಾಷಣಗಳು ಅವುಗಳನ್ನು ತಲುಪಿಸುವ ಶೈಲಿಯಿಂದ ಮನಸ್ಸಿನಲ್ಲಿ ಉಳಿದರೆ, ಇನ್ನು ಕೆಲವು ಭಾಷಣಗಳು ಕಾಲದ ಪರೀಕ್ಷೆಗೆ ಒಳಪಟ್ಟು ಇತಿಹಾಸದಲ್ಲಿ ದಾಖಲಾಗುತ್ತವೆ. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಎರಡನೇ ವರ್ಗಕ್ಕೆ ಸೇರುತ್ತದೆ. 13 ವರ್ಷಗಳ ಹಿಂದೆ ಅಂದರೆ 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಇದೇ ವೇದಿಕೆಯಲ್ಲಿ ಭಾಷಣ ಮಾಡಿದ್ದ ಮೋದಿ, 2026ರಲ್ಲಿ ದೇಶದ ಪ್ರಧಾನಿಯಾಗಿ ರಿಪೋರ್ಟ್ ಕಾರ್ಡ್ ಹಿಡಿದು ಮರಳಿದ್ದಾರೆ. 2013ರ ಆಶೋತ್ತರಗಳ ಭಾಷಣಕ್ಕೂ 2026ರ ಸಾಕ್ಷ್ಯಾಧಾರಿತ ವಿಶ್ಲೇಷಣಾತ್ಮಕ ಭಾಷಣಕ್ಕೂ ನಡುವಿರುವ ಅಂತರ ಭಾರತದ ಪರಿವರ್ತನೆಯ ಕಥೆಯನ್ನು ವಿವರಿಸುತ್ತದೆ.

ಅರ್ಧ ತುಂಬಿದ ಲೋಟದಿಂದ ಬದಲಾದ ವಾಸ್ತವದತ್ತ!...

2013ರಲ್ಲಿ ಮೋದಿ ನೀಡಿದ ಭಾಷಣದಲ್ಲಿ ಬಳಸಿದ್ದ ನೀರಿನ ಲೋಟದ ರೂಪಕ ಅತ್ಯಂತ ಪ್ರಸಿದ್ಧವಾದುದು. ಲೋಟ ಅರ್ಧ ಖಾಲಿ ಅಥವಾ ಅರ್ಧ ತುಂಬಿದೆ ಎನ್ನುವ ಸಾಂಪ್ರದಾಯಿಕ ಆಲೋಚನೆಗೆ ಭಿನ್ನವಾಗಿ, ಲೋಟದಲ್ಲಿ ಅರ್ಧ ನೀರಿದ್ದರೆ ಇನ್ನುಳಿದ ಅರ್ಧ ಗಾಳಿಯಿಂದ ತುಂಬಿದೆ ಎಂಬ ಸಕಾರಾತ್ಮಕ ನೋಟವನ್ನು ಅವರು ನೀಡಿದ್ದರು. ಆಗಿನ ಭಾರತವು ನೀತಿ ನಿಷ್ಕ್ರಿಯತೆ (Policy Paralysis), ಸಾಲು ಸಾಲು ಹಗರಣಗಳು ಮತ್ತು ಫ್ರಾಗೈಲ್ ಫೈವ್ (ಆರ್ಥಿಕವಾಗಿ ದುರ್ಬಲ ಐದು ದೇಶಗಳು) ಎಂಬ ಹೂಡಿಕೆದಾರರ ಕಳಪೆ ಪಟ್ಟಿಗೆ ಸೇರಿ ನಿರಾಶೆಯಲ್ಲಿ ಮುಳುಗಿತ್ತು. ಆದರೆ, 2026ರಲ್ಲಿ ಅದೇ ವೇದಿಕೆಗೆ ಮರಳಿದಾಗ, ಆ ಲೋಟ'ವನ್ನು ಕೇವಲ ಸಿದ್ಧಾಂತದಿಂದಲ್ಲ, ಬದಲಿಗೆ ಸಾಧನೆಗಳಿಂದ ಭರ್ತಿ ಮಾಡಲಾಗಿದೆ ಎಂಬುದನ್ನು ಸಾಬೀತುಪಡಿಸಿದರು.

ಪ್ರಧಾನಿ ಮೋದಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು!...

ಕಲ್ಪನೆಯಿಂದ ಅಂಕಿಅಂಶಗಳ ಕಡೆಗೆ ಜಿಗಿತ: 2013ರಲ್ಲಿ ಮೋದಿ ಹಂಚಿಕೊಂಡಿದ್ದು ಕೇವಲ ಕಲ್ಪನೆ ಮತ್ತು ಆಶೋತ್ತರಗಳನ್ನು ಮಾತ್ರ. ಆದರೆ, ಈ ಬಾರಿ ಅವರ ಬಳಿ ಬಲವಾದ ಅಂಕಿಅಂಶಗಳಿದ್ದವು. ಜಾಗತಿಕ ಮಟ್ಟದಲ್ಲಿ ಯುದ್ಧ ಮತ್ತು ವಾಣಿಜ್ಯ ಬಿಕ್ಕಟ್ಟುಗಳು ಎದುರಾಗಿದ್ದರೂ ಭಾರತವು 7.8% ತ್ರೈಮಾಸಿಕ ಜಿಡಿಪಿ ಪ್ರಗತಿ ಸಾಧಿಸಿರುವುದನ್ನು ಪ್ರಸ್ತಾಪಿಸಿದರು.
ಅಭಿವೃದ್ಧಿಯ ನೈಜ ಸೂಚ್ಯಂಕಗಳು: ಬರಿ ಜಿಡಿಪಿ ಅಂಕಿಅಂಶ ಮಾತ್ರವಲ್ಲದೆ, ಏಪ್ರಿಲ್-ಜೂನ್ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಶೇ. 9 ರಷ್ಟು ಏರಿಕೆ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ. 20 ರಷ್ಟು ಹೆಚ್ಚಳ ಹಾಗೂ ಸಿಮೆಂಟ್ ಮತ್ತು ಉಕ್ಕು ಬಳಕೆಯಲ್ಲಿ ಶೇ. 8 ರಷ್ಟು ಪ್ರಗತಿಯಾಗಿರುವುದನ್ನು ಎತ್ತಿ ತೋರಿಸಿದರು. ಇವು ದೇಶದ ತಳಮಟ್ಟದ ನಿರ್ಮಾಣ ಮತ್ತು ಆರ್ಥಿಕ ಚಟುವಟಿಕೆಗಳ ಏರಿಕೆಗೆ ನೇರ ಸಾಕ್ಷಿ.
ಉತ್ಪಾದನೆ ಮತ್ತು ರಕ್ಷಣೆ: 2013ರಲ್ಲಿ ಮೇಡ್ ಇನ್ ಇಂಡಿಯಾ ಎನ್ನುವುದು ಬರಿ ಕನಸಾಗಿತ್ತು. ಆದರೆ ಇಂದು ಸ್ಮಾರ್ಟ್‌ಫೋನ್ ರಫ್ತು 2.5 ಲಕ್ಷ ಕೋಟಿ ರೂ. ಗಡಿ ದಾಟಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತೀಯ ಉತ್ಪಾದನೆ 2 ಲಕ್ಷ ಕೋಟಿ ರೂ.ಗೆ ತಲುಪಿದ್ದು, ರಫ್ತು ಮೊತ್ತ 40,000 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಆಮದು ಮಾಡಿಕೊಳ್ಳುತ್ತಿದ್ದ ದೇಶವೊಂದು ಸ್ವಾವಲಂಬಿಯಾಗಿ ಬೆಳೆದ ಪರಿ.
ಜನಧನ್; ಮೌನ ಕ್ರಾಂತಿಯ ಭದ್ರ: ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗೆ ಜನಧನ್ ಯೋಜನೆ ತಂದ ಕ್ರಾಂತಿ ಅಪಾರ. ಕಳೆದ 12 ವರ್ಷಗಳಲ್ಲಿ 60 ಕೋಟಿಗೂ ಹೆಚ್ಚು ನೂತನ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ದೇಶದ ಅರ್ಧಕ್ಕಿಂತ ಹೆಚ್ಚು ಬಡ ಜನರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯಾಪ್ತಿಗೆ ತರಲಾಗಿದೆ. ಇದು ಕೇವಲ ಖಾತೆಗಳಲ್ಲ, ಬದಲಾಗಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಯುಪಿಐ (UPI) ಮತ್ತು ಸರ್ಕಾರದ ಯೋಜನೆಗಳ ನೇರ ತಲುಪುವಿಕೆಗೆ ಬಲವಾದ ಅಡಿಪಾಯವಾಗಿದೆ.

ಮೌಸ್ ತಂತ್ರಜ್ಞರಿಂದ ಸ್ಟಾರ್ಟ್‌ಅಪ್ ತಲೆಮಾರಿನತ್ತ

2013ರಲ್ಲಿ ಭಾರತದ ಯುವಜನತೆಯನ್ನು ಜಗತ್ತು ಕಂಪ್ಯೂಟರ್ ಮೌಸ್ ನಿಯಂತ್ರಿಸುವವರು ಎಂದು ನೋಡುತ್ತಿದ್ದ ದಿನಗಳಿಂದ ಹಿಡಿದು, ಇಂದು ಸ್ಟಾರ್ಟ್‌ಅಪ್‌ಗಳು, ಯೂನಿಕಾರ್ನ್‌ಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಾಯಕರಾಗಿ ಬೆಳೆದಿರುವುದು. ಯುವ ಸಮುದಾಯವು ಈಗ ಕೇವಲ ಉದ್ಯೋಗ ಹುಡುಕುವವರಲ್ಲ, ಬದಲಿಗೆ ಉದ್ಯೋಗ ನೀಡುವ ನಾಯಕರಾಗಿ ಬದಲಾಗಿದ್ದಾರೆ ಎಂದು ಪ್ರಧಾನಿ ಮೋದಿ ವಿವರಿಸಿದರು.

ನಾರಾಜ್ ಫೂಫಾ ಮತ್ತು ರಾಜಕೀಯ ನಂಬಿಕೆ!...

ತಮ್ಮ ಭಾಷಣದಲ್ಲಿ ನಾರಾಜ್ ಫೂಫಾ (ಸದಾ ಅಸಮಾಧಾನಗೊಳ್ಳುವ ಕೌಟುಂಬಿಕ ಸಂಬಂಧಿಕರು) ಎಂಬ ಹಾಸ್ಯಮಯ ಉದಾಹರಣೆ ನೀಡಿದ ಪ್ರಧಾನಿ, ದೇಶದಲ್ಲಿ ಏನೇ ಹೊಸ ಬೃಹತ್ ಯೋಜನೆ ತಂದರೂ ಇದರ ಅಗತ್ಯವೇನಿತ್ತು..? ಎಂದು ಪ್ರಶ್ನಿಸುವ ಸದಾ ನಕಾರಾತ್ಮಕ ಮನಸ್ಥಿತಿಯ ವಿಮರ್ಶಕರನ್ನು ಟೀಕಿಸಿದರು. ಒಟ್ಟಾರೆಯಾಗಿ, 2013ರ ಎಸ್‌ಆರ್‌ಸಿಸಿ ಭಾಷಣವು ದೇಶದ ಯುವಜನರಲ್ಲಿ ನಂಬಿಕೆಯನ್ನು ಬಿತ್ತುವ ಪ್ರಯತ್ನವಾಗಿದ್ದರೆ, 2026ರ ಭಾಷಣವು ಆ ನಂಬಿಕೆಗಳನ್ನು ಸಾಧನೆಯಾಗಿ ತೋರಿಸುವ ಸಾಕ್ಷಿಯಾಗಿದೆ. ರಾಜಕೀಯ ವಾಕ್ಚಾತುರ್ಯವನ್ನು ಮೀರಿ, ಭಾರತವು ಆಶೋತ್ತರಗಳ ಮಟ್ಟದಿಂದ ಅಂಕಿಅಂಶಗಳ ಶಕ್ತಿಯತ್ತ ಹೇಗೆ ಸಾಗಿದೆ ಎಂಬುದಕ್ಕೆ ಈ ರಿಪೋರ್ಟ್​ ಕಾರ್ಡ್ ಸ್ಪಷ್ಟ ಕನ್ನಡಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net