ಹೆಣ್ಣು ಮಗು ಹುಟ್ಟಿದರೆ 31 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್, 111 ಗಿಡ... ಈ ಹಳ್ಳಿಯ ನಿಯಮ ಕೇಳಿದರೆ ಸಲಾಂ ಅಂತೀರಾ! Girl

ಹೆಣ್ಣು ಮಗು ಹುಟ್ಟಿದರೆ 31 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್, 111 ಗಿಡ... ಈ ಹಳ್ಳಿಯ ನಿಯಮ ಕೇಳಿದರೆ ಸಲಾಂ ಅಂತೀರಾ! Girl
ಹೆಣ್ಣು ಮಗು ಹುಟ್ಟಿದರೆ 31 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್, 111 ಗಿಡ... ಈ ಹಳ್ಳಿಯ ನಿಯಮ ಕೇಳಿದರೆ ಸಲಾಂ ಅಂತೀರಾ! Girl
Published on

ಪ್ರಮುಖ ಮುಖ್ಯಾಂಶಗಳು

  • ಹೆಣ್ಣು ಮಗು ಜನಿಸಿದಾಗಲೆಲ್ಲಾ 111 ಸಸಿಗಳನ್ನು ನೆಡುವ ಮೂಲಕ ದೇಶಕ್ಕೇ ಮಾದರಿಯಾಗಿದೆ ರಾಜಸ್ಥಾನದ ಪಿಪ್ಲಾಂತ್ರಿ ಗ್ರಾಮ
  • ನಿರ್ಜಲೀಕರಣದಿಂದ ಮೃತಪಟ್ಟ ಮಗಳ ನೆನಪಿಗಾಗಿ ಮಾಜಿ ಪಂಚಾಯಿತಿ ಸದಸ್ಯ ಶ್ಯಾಮ್ ಸುಂದರ್ ಪಾಲಿವಾಲ್ ಈ ಅಭಿಯಾನ ಆರಂಭಿಸಿದರು
  • ಬಾಲ್ಯವಿವಾಹ ಮಾಡಲ್ಲ, ಶಾಲೆಗೆ ಕಳುಹಿಸುತ್ತೇವೆ ಮತ್ತು ಗಿಡ ಪೋಷಿಸುತ್ತೇವೆ ಎಂದು ಪೋಷಕರು ಪಂಚಾಯತ್‌ಗೆ ಅಫಿಡವಿಟ್ ನೀಡುವುದು ಕಡ್ಡಾಯ
  • ಹೆಣ್ಣು ಮಗುವಿನ ಆರ್ಥಿಕ ಭದ್ರತೆಗಾಗಿ ಗ್ರಾಮಸ್ಥರು ಮತ್ತು ತಂದೆ ಸೇರಿ 31,000 ರೂ. ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುತ್ತಾರೆ
ಜೈಪುರ : ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯಗಳು ದೊಡ್ಡ ಸಮಸ್ಯೆಯಾಗಿ ಮುಂದುವರಿದಿರುವುದರ ನಡುವೆಯೇ, ರಾಜಸ್ಥಾನದ ಸಣ್ಣ ಹಳ್ಳಿಯೊಂದು ಭರವಸೆಯ ದೊಡ್ಡ ಸಂದೇಶವನ್ನು ರವಾನಿಸುತ್ತಿದೆ. ರಾಜಸ್ಥಾನದ ರಾಜಸಮಂಡ್ ಜಿಲ್ಲೆಯಲ್ಲಿರುವ 'ಪಿಪ್ಲಾಂತ್ರಿ' ಗ್ರಾಮದ ಜನತೆ, ತಮ್ಮಲ್ಲಿ ಹೆಣ್ಣು ಮಗು ( Girl ) ಜನಿಸಿದಾಗಲೆಲ್ಲಾ ಅದರ ನೆನಪಿಗಾಗಿ ತಲಾ 111 ಸಸಿಗಳನ್ನು ನೆಡುವ ಮೂಲಕ ದೇಶಕ್ಕೇ ಮಾದರಿಯಾಗಿದ್ದಾರೆ.
ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಸಾಧಿಸುವ ಉದ್ದೇಶದ ಈ ವಿಶಿಷ್ಟ ಯೋಜನೆಯನ್ನು ಗ್ರಾಮದ ಮಾಜಿ ಸರಪಂಚ್ ಶ್ಯಾಮ್ ಸುಂದರ್ ಪಾಲಿವಾಲ್ ಅವರು 2006 ರಲ್ಲಿ ಪ್ರಾರಂಭಿಸಿದರು. ಡಿಹೈಡ್ರೇಷನ್​ನಿಂದಾಗಿ 18ನೇ ವಯಸ್ಸಿನಲ್ಲಿಯೇ ಮೃತಪಟ್ಟ ಮಗಳು ಕಿರಣ್ ಸವಿನೆನಪಿಗಾಗಿ ಅವರು ಈ ಅಭಿಯಾನವನ್ನು ಕೈಗೆತ್ತಿಕೊಂಡರು. ಇಂತಹ ಪರಿಸ್ಥಿತಿ ಮತ್ಯಾವ ಮಗುವಿಗೂ ಬರಬಾರದು ಮತ್ತು ಪರಿಸರವನ್ನು ರಕ್ಷಿಸಬೇಕು ಎಂಬ ದೃಢ ಸಂಕಲ್ಪದಿಂದ ಪಾಲಿವಾಲ್​ ಅವರು ಈ ಮಹತ್ತರ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯಡಿ ಹೆಣ್ಣು ಮಗು ಜನ್ಮತಾಳಿದ ಪ್ರತಿ ಕುಟುಂಬವೂ ಗ್ರಾಮ ಪಂಚಾಯಿತಿಯ ಸಮ್ಮುಖದಲ್ಲಿ ಅಫಿಡವಿಟ್ (ಪ್ರಮಾಣಪತ್ರ) ಒಂದಕ್ಕೆ ಸಹಿ ಮಾಡುವುದು ಕಡ್ಡಾಯವಾಗಿದೆ. ಅದರಲ್ಲಿ, ಮಗಳಿಗೆ 18 ವರ್ಷ ತುಂಬುವ ಮುನ್ನ ಬಾಲ್ಯವಿವಾಹ ಮಾಡುವುದಿಲ್ಲ, ಅವಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುತ್ತೇವೆ, ಭ್ರೂಣಹತ್ಯೆ ಮಾಡುವುದಿಲ್ಲ ಮತ್ತು ಮಗಳ ಹೆಸರಿನಲ್ಲಿ ನೆಟ್ಟ ಸಸಿಗಳನ್ನು ಪೋಷಿಸುತ್ತೇವೆ ಎಂದು ಕುಟುಂಬಸ್ಥರು ಪ್ರಮಾಣ ಮಾಡಬೇಕಾಗುತ್ತದೆ. ಈ ಗಿಡಗಳ ರಕ್ಷಣೆಗಾಗಿ ಅವುಗಳ ಸುತ್ತಲೂ ಲೋಳೆಸರವನ್ನು (ಅಲೋವೆರಾ) ನೆಡಲಾಗುತ್ತಿದ್ದು, ಪ್ರಸ್ತುತ ಈ ಲೋಳೆಸರದಿಂದ ತಯಾರಾಗುವ ಉತ್ಪನ್ನಗಳು ಗ್ರಾಮಸ್ಥರಿಗೆ ಉತ್ತಮ ಆದಾಯದ ಮೂಲವಾಗಿಯೂ ಮಾರ್ಪಟ್ಟಿವೆ.
ರಾಜಸ್ಥಾನದ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ ಮದುವೆ ಮಾಡುವ ಬಾಲ್ಯವಿವಾಹ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ ಎಂಬ ವರದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಪಿಪ್ಲಾಂತ್ರಿ ಗ್ರಾಮದ ಈ ನಡೆ ಅತ್ಯಂತ ಮಹತ್ವಾಕಾಂಕ್ಷೆಯದಾಗಿದೆ. ಈ ಯೋಜನೆಯ ಭಾಗವಾಗಿ, ಹೆಣ್ಣು ಮಗು ಜನಿಸಿದಾಗ ಗ್ರಾಮಸ್ಥರೆಲ್ಲರೂ ಸೇರಿ 21,000 ರೂಪಾಯಿ ಹಾಗೂ ಮಗುವಿನ ತಂದೆ 10,000 ರೂಪಾಯಿ ಒಟ್ಟುಗೂಡಿಸಿ, ಒಟ್ಟು 31,000 ರೂಪಾಯಿಗಳನ್ನು ಆ ಮಗುವಿನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ (ಸ್ಥಿರ ಠೇವಣಿ) ಮಾಡುತ್ತಾರೆ. 20 ವರ್ಷಗಳ ಅವಧಿಯ ಈ ಠೇವಣಿಯು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ.
ಸಾಮಾಜಿಕ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಎರಡಕ್ಕೂ ಸಮಾನ ಒತ್ತು ನೀಡಿದ ಪಿಪ್ಲಾಂತ್ರಿಯ ಈ ಮಾದರಿಯು ಇಂದು ಇಡೀ ದೇಶಕ್ಕೇ ಒಂದು ಅತ್ಯುತ್ತಮ ಉದಾಹರಣೆಯಾಗಿ ಮೂಡಿಬಂದಿದೆ. ಹೆಣ್ಣು ಮಗುವನ್ನು ಸಮಾಜದಲ್ಲಿ ಒಂದು ಶಾಪ ಅಥವಾ ಹೊರೆ ಎಂದು ನೋಡುವ ಸಂಕುಚಿತ ಮನೋಭಾವದ ವಿರುದ್ಧ ಈ ಪುಟ್ಟ ಗ್ರಾಮವು ಅತ್ಯಂತ ಪ್ರಬಲ ಹಾಗೂ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net