ಎರಡು ಟ್ರಕ್‌ಗಳ ನಡುವೆ ಭೀಕರ ಅಪಘಾತ; 11 ಮಂದಿ ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ! Truck Accident

Truck Accident (ಸಾಂದರ್ಭಿಕ ಚಿತ್ರ)
Truck Accident (ಸಾಂದರ್ಭಿಕ ಚಿತ್ರ)
Published on
ಉತ್ತರ ಪ್ರದೇಶ: ಎರಡು ಟ್ರಕ್​ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Truck Accident) ಮಕ್ಕಳು ಸೇರಿದಂತೆ 11 ಜನ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬುಧವಾರ ರಾತ್ರಿ (ಏ.22) ನಡೆದಿದೆ ಎಂದು ವರದಿಯಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಬುಧವಾರ ರಾತ್ರಿ 8:30 ರ ಸುಮಾರಿಗೆ ಡ್ರಾಮಂಡ್‌ಗಂಜ್ ಕಣಿವೆಯ ಬಳಿ ರಾಷ್ಟ್ರೀಯ ಹೆದ್ದಾರಿ -135 ರಲ್ಲಿ ಈ ಅಪಘಾತ ಸಂಭವಿಸಿದ್ದು, ಕೆಳಗೆ ಇಳಿಯುತ್ತಿದ್ದ ಟ್ರಕ್​ ಮುಂದೆ ಸಾಗುತ್ತಿದ್ದ ಮತ್ತೊಂದು ಟ್ರಕ್​ಗೆ ಡಿಕ್ಕಿ ಹೊಡೆದು ನಡುವೆ ಇದ್ದ ಕಾರನ್ನು ನುಜ್ಜುಗುಜ್ಜುಗೊಳಿಸಿತು. ಈ ವೇಳೆ ಮತ್ತೊಂದು ಕಾರು ಕೂಡಾ ಬೆಂಕಿಗೆ ಆಹುತಿಯಾಗಿದೆ ಎಂದು ಶಂಕಿಸಲಾಗಿದೆ.

ಘಟನೆ ಬಗ್ಗೆ ಪೊಲೀಸರು ಹೇಳಿದ್ದೇನು?

ರಾತ್ರಿ 8:30 ರ ಸುಮಾರಿಗೆ, ಬ್ರಾಹ್ಮಣ ಗಂಜ್‌ನಿಂದ ವಾಹನಗಳು ಇಳಿಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ವೇಳೆ ಎರಡು ಟ್ರಕ್​ಗಳ ನಡುವೆ ಕಾರು ಸಿಕ್ಕಿಹಾಕಿಕೊಂಡಿದ್ದು, ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡಿದೆ. ಇದರಿಂದ ಪ್ರಯಾಣಿಸುತ್ತಿದ್ದ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಧನ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಸಂಭವಿಸಿದ ಅಪಘಾತದಿಂದ ಅನೇಕರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ಕುಟುಂಬಗಳಿಗೂ ಪಿಎಂಎನ್​ಆರ್​ಎಫ್ ನಿಂದ 2 ಲಕ್ಷ ರೂ. ನೀಡಲಾಗುವುದು ಜೊತೆಗೆ ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಪ್ರಧಾನಿ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net