ಇದು ಜಾತ್ಯತೀತತೆಯನ್ನು ನಾಶಮಾಡುವ ಮನಸ್ಥಿತಿ ಎಂದು ಸಿಎಂ ಪಿಣರಾಯಿ ವಿಜಯನ್​ ಕಿಡಿ | Pinarayi Vijayan

Pinarayi Vijayan | ಪಿಣರಾಯಿ ವಿಜಯನ್
Pinarayi Vijayan | ಪಿಣರಾಯಿ ವಿಜಯನ್
Published on
ತಿರುವನಂತಪುರಂ: ಎರ್ನಾಕುಲಂ-ಬೆಂಗಳೂರು ನಡುವಿನ ವಂದೇ ಭಾರತ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆರ್‌ಎಸ್‌ಎಸ್ ಗೀತೆ ಹಾಡುವಂತೆ ಒತ್ತಾಯಿಸಲಾಗಿದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ದಕ್ಷಿಣ ರೈಲ್ವೆ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ (ನ 8) ಕಿಡಿಕಾರಿದ್ದಾರೆ.
ವಂದೇ ಭಾರತ್ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಆರ್‌ಎಸ್‌ಎಸ್ ಗೀತೆ ಹಾಡುವಂತೆ ಒತ್ತಾಯಿಸಿರುವುದು ಖಂಡನೀಯ, ಇದು ಸ್ವೀಕಾರಾರ್ಹವಲ್ಲ ಎಂದರು. ಇತರ ಧರ್ಮಗಳ ವಿರುದ್ಧ ದ್ವೇಷ ಮತ್ತು ಕೋಮುವಾದಿ ವಿಭಜಕ ರಾಜಕೀಯ ಹರಡುವ ಆರ್‌ಎಸ್‌ಎಸ್ ಗೀತೆಯನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸೇರಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಉದ್ಘಾಟನಾ ಸಮಾರಂಭ ಹಿಂದುತ್ವ ರಾಜಕೀಯದ ನುಸುಳುವಿಕೆಗೆ ಸಾಕ್ಷಿಯಾಗಿದ್ದು. ಇದರ ಹಿಂದೆ ಜಾತ್ಯತೀತತೆಯನ್ನು ನಾಶಮಾಡುವ ಸಂಕುಚಿತ ರಾಜಕೀಯ ಮನಸ್ಥಿತಿ ಇತ್ತು, ಈ ಗೀತೆಯನ್ನು 'ದೇಶಭಕ್ತಿ ಗೀತೆ' ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ದಕ್ಷಿಣ ರೈಲ್ವೆ ತನ್ನನ್ನು ತಾನು ಅಪಹಾಸ್ಯ ಮಾಡಿಕೊಂಡಿದಷ್ಟೆ ಅಲ್ಲದೆ, ಭಾರತೀಯ ರಾಷ್ಟ್ರೀಯ ಚಳುವಳಿಯನ್ನೂ ಅಪಹಾಸ್ಯ ಮಾಡಿದೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತದ ಜಾತ್ಯತೀತ ರಾಷ್ಟ್ರೀಯತೆಯ ಮೂಲಾಧಾರವಾಗಿ ಕಾರ್ಯನಿರ್ವಹಿಸಿದ ರೈಲ್ವೆ, ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಆರ್‌ಎಸ್‌ಎಸ್‌ನ ಕೋಮು ಕಾರ್ಯಸೂಚಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.
ಸಿಎಂ ವಿಜಯನ್ ದಾಳಿಯ ಬಳಿಕ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಶಾಲಾ ವಿದ್ಯಾರ್ಥಿಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಆರ್‌ಎಸ್‌ಎಸ್ ಹಾಡನ್ನು ಹಾಡಲು ಏಕೆ ಒತ್ತಾಯಿಸಲಾಗಿದೆ ಎಂಬುದರ ಕುರಿತು ವಿವರಣೆಯನ್ನು ಕೋರಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದ್ದು, ಇದನ್ನು ದಕ್ಷಿಣ ರೈಲ್ವೆಯ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ಹೆಮ್ಮೆಯಿಂದ ಹಂಚಿಕೊಂಡಿದೆ. ಇದು ಪ್ರತಿಯೊಬ್ಬ ನಾಗರಿಕರಿಗೂ ಸೇರಿದ ರಾಷ್ಟ್ರೀಯ ಸಂಸ್ಥೆಯಾದ ಭಾರತೀಯ ರೈಲ್ವೆಯ ಸ್ಪಷ್ಟ ದುರುಪಯೋಗವಾಗಿದೆ ಎಂದು ಬರೆದಿದ್ದಾರೆ.
ಆರ್‌ಎಸ್‌ಎಸ್ ಶತಮಾನೋತ್ಸವವನ್ನು ಆಚರಿಸುವ ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ, ವಿಜಯನ್ ಸಾಮಾಜಿಕ ಮಾಧ್ಯಮದಲ್ಲಿ ಈ ಕ್ರಮವನ್ನು ಟೀಕಿಸಿದ್ದರು, ಅಂಚೆ ಚೀಟಿ ಮತ್ತು 100 ರೂ. ನಾಣ್ಯವನ್ನು ಬಿಡುಗಡೆ ಮಾಡುವುದು ನಮ್ಮ ಸಂವಿಧಾನಕ್ಕೆ ಮಾಡಿದ ಗಂಭೀರ ಅವಮಾನ ಎಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net