ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಗೆ ಪುನರುಜ್ಜೀವ; ಮಾಜಿ ರಾ ಮುಖ್ಯಸ್ಥ ಅಲೋಕ್ ಜೋಶಿ ನೇತೃತ್ವ| Delhi

modi
Published on

Delhi| ಭಯೋತ್ಪಾದಕರ ಸ್ವರ್ಗವಾಗಿ ಮಾರ್ಪಟ್ಟಿರುವ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿರುವ ಭಾರತ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನು (NSAB) ಪುನರ್​ರಚಿಸುವ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಇದೀಗ ಮಂಡಳಿಯ ಅಧ್ಯಕ್ಷರಾಗಿ ಅಲೋಕ್ ಜೋಶಿ ಅವರನ್ನು ನೇಮಿಸಲಾಗಿದೆ.

ಅವರು ಈ ಹಿಂದೆ ಭಾರತೀಯ ಗುಪ್ತಚರ ಸಂಸ್ಥೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) ದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. NSAB ಏಳು ಸದಸ್ಯರನ್ನು ಹೊಂದಿರುತ್ತದೆ ಎಂದು ಕೇಂದ್ರ ಹೇಳಿದೆ. ಪಶ್ಚಿಮ ವಾಯುಪಡೆಯ ಮಾಜಿ ಕಮಾಂಡರ್ ಪಿ.ಎಂ. ಸಿನ್ಹಾ, ಮಾಜಿ ದಕ್ಷಿಣ ಸೇನಾ ಕಮಾಂಡರ್ ಎ.ಕೆ. ಸಿಂಗ್, ರಿಯರ್ ಅಡ್ಮಿರಲ್ ಮಾಂಟಿ ಖನ್ನಾ, ಮಾಜಿ ಐಪಿಎಸ್ ಅಧಿಕಾರಿಗಳಾದ ರಾಜೀವ್ ರಂಜನ್ ವರ್ಮಾ ಮತ್ತು ಮನಮೋಹನ್ ಸಿಂಗ್, ಮತ್ತು ಮಾಜಿ ಐಎಫ್‌ಎಸ್ ಅಧಿಕಾರಿ ಬಿ. ವೆಂಕಟೇಶ್ ವರ್ಮಾ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಭದ್ರತೆ ಕುರಿತ ಸಂಪುಟ ಸಮಿತಿ (CCS) ಸಭೆ ಇಂದು ಮಧ್ಯಾಹ್ನ ಮುಕ್ತಾಯವಾಯಿತು.

ಸಿಸಿಎಸ್ ಸಭೆಯ ಜೊತೆಗೆ, ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಪಿಎ) ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಎಂಬ ಎರಡು ಹೆಚ್ಚುವರಿ ಸಮಿತಿ ಸಭೆಗಳನ್ನು ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಕರೆಯಲಾಯಿತು. ಇಂದು ಮಧ್ಯಾಹ್ನ 3:00 ಗಂಟೆಗೆ ಸಂಪುಟ ಸಭೆ ನಡೆಯಲಿದೆ.

ಭಾರತೀಯ ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ಪ್ರಧಾನಿ ಮೋದಿ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net