

ಕೋಲಾರ: ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲೆಯಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ನಟೇಶ್ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ ವಿಶೇಷ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇದರ ಜತೆಗೆ ಲೋಕ ಅದಾಲತ್ ಕೂಡ ನಡೆಯಲಿದೆ ಎಂದರು.
ಪ್ರತಿ ವರ್ಷ 4 ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 2 ಅದಾಲತ್ ಮುಗಿಸಲಾಗಿದ್ದು, 3ನೇ ಅದಾಲತ್ ನಡೆಯುತ್ತಿದೆ. ಜಿಲ್ಲೆಯ 6 ತಾಲೂಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಯಾಯ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಲೋಕ ಅದಾಲತ್ನಲ್ಲಿ ತೀಮಾರ್ನ ಮಾಡುವುದಾದರೆ ಪ್ರಕರಣಗಳು ಅತೀ ಶೀಘ್ರ ಇತ್ಯರ್ಥವಾಗುತ್ತವೆ. ನ್ಯಾಯಾಲಯದ ಶುಲ್ಕ ಇರುವುದಿಲ್ಲ. ಕೆಲವರಿಗೆ ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನುರಿತ ವಕೀಲರು ಸಂಧಾನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಕ್ಷಿದಾರರು ಅವರ ತೀರ್ಪನ್ನು ಅವರೇ ಪಡೆದುಕೊಳ್ಳಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಕೌಟುಂಬಿಕ ದೌರ್ಜನ್ಯ, ಚೆಕ್ ಬೌನ್ಸ್ ಪ್ರಕರಣ, ವಾಣಿಜ್ಯ ಕಲಹ ಪ್ರಕರಣ, ಸೇವಾ ವಿಷಯದ ಪ್ರಕರಣ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣ, ಗ್ರಾಹಕರ ವ್ಯಾಜ್ಯ, ಸಾಲ ಮರುಪಾವತಿ ವ್ಯಾಜ್ಯ, ವಿಭಾಗದ ದಾವೆ, ಎವಿಕ್ಷನ್ ದಾವೆ, ಭೂಸ್ವಾಧಿನ ದಾವೆ, ಇತರ ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಜು. 7ರಂದು ಈ ಅಭಿಯಾನ ಆರಂಭವಾಗಿದ್ದು, ಅ.7ರವರೆಗೆ ನಡೆಯಲಿದೆ. ಪ್ರಕರಣಗಳ ಸ್ವರೂಪ ಗುರುತಿಸಿ ಅವುಗಳನ್ನು ಮಧ್ಯಸ್ಥಿಕೆದಾರರಿಗೆ ಕಳುಹಿಸಲಾಗುತ್ತದೆ. ಮಧ್ಯಸ್ಥಿಕೆದಾರರಿಂದ ಪಕ್ಷಗಾರರಿಗೆ ನೋಟಿಸ್ ಜಾರಿಯಾಗುತ್ತದೆ. ವಾರವಿಡೀ ಮಧ್ಯಸ್ಥಿಕಾ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ಆದರ್ಶ, ವಕೀಲರಾದ ಸತೀಶ್, ಸುಜಾತಾ ಇದ್ದರು.