

ಪಾಂಡವಪುರ: ಪಟ್ಟಣದ ನ್ಯಾಯಾಲಯದ ವತಿಯಿಂದ ಇದೇ ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ರಾಜಿ ಸಂಧಾನವಾಗುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.
ನ್ಯಾಯಾಲಯದಲ್ಲಿ ರಾಜಿಗೆ ಅರ್ಹ ಇರುವಂತಹ 1080 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಎಂವಿಸಿ 145 ಪ್ರಕರಣ, ಎಂಎಂಆರ್‌ಡಿ-19, ಎಲ್‌ಎಸಿ-07, ವಿಭಾಗದ ದಾವೆ-155, ಇತರ ಸಿವಿಲ್ ಪ್ರಕರಣ-197, ನಿರ್ಧಿಷ್ಟ ಪರಿಹಾರಕ್ಕಾಗಿ ದಾವೆ-225, ಕ್ರಿಮಿನಲ್ ಪ್ರಕರಣ-22 ಹಾಗೂ ಎನ್‌ಐಆಕ್ಟ್ ಪ್ರಕರಣ-310 ಪ್ರಕರಣಗಳನ್ನು ಗುರುತಿಸಿಕೊಳ್ಳಲಾಗಿದೆ. ರಾಜಿಗೆ ಅರ್ಹ ಇಲ್ಲದ ಪ್ರಕರಣಗಳನ್ನು ಸಹ ರಾಜಿ ಸಂಧಾನ ಮೂಲಕ ಬಗೆಹರಿಸಲಾಗುವುದು. ಹಿಂದಿನ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 2,333 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕ ಅದಾಲತ್‌ನಲ್ಲಿ ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್‌ಬಿಲ್, ಸಣ್ಣಪುಟ್ಟ ಬ್ಯಾಂಕ್ ಸಾಲ ವಸೂಲಾತಿ, ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯ ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ಸಹ ವಿಶೇಷ ಪೀಠದ ಮೂಲಕ ರಾಜಿ ಸಂಧಾನ ನಡೆಸಲಾಗುವುದು. ಹಾಗಾಗಿ ಕಕ್ಷಿದಾರರು, ಸಾರ್ವಜನಿಕರು ಲೋಕ ಅದಾಲತ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಬಿ.ಪಾರ್ವತಮ್ಮ, ವಕೀಲರ ಸಂಘದ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್‌ಕುಮಾರ್ ಹಾಜರಿದ್ದರು.