

ನರೇಗಲ್ಲ: ಪಟ್ಟಣದ ಮೂಲಕ ಹಾದು ಹೋಗುವ ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿಯನ್ನು (ಎಸ್ಎಚ್-6) ಕೇಂದ್ರ ಸರ್ಕಾರ 2016ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಹಸಿರು ನಿಶಾನೆ ತೋರಿಸಿದೆ. ಇದನ್ನು ಬಿಟ್ಟರೆ ಈವರೆಗೂ ಹೆದ್ದಾರಿ ನಿರ್ವಣದ ಯಾವುದೇ ಪ್ರಗತಿಗಳು ಕಾಣಸಿಗದಿರುವುದು, ದಶಕಗಳಿಂದ ಹೆದ್ದಾರಿಯ ಕನಸು ಕಾಣುತ್ತಿರುವ ಈ ಭಾಗದ ಜನರಿಗೆ ನಿರಾಸೆ ಉಂಟು ಮಾಡಿದೆ.
ಕಾರವಾರ- ಇಳಕಲ್ಲ ರಾಜ್ಯ ಹೆದ್ದಾರಿಯು ಉತ್ತರಕನ್ನಡ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಮೂಲಕ ಹಾಯ್ದು ಹೋಗುವ ಅತ್ಯಂತ ಹಳೆಯದಾದ ಹೆದ್ದಾರಿಯಾಗಿದೆ. ವಾಣಿಜ್ಯ-ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವಂತೆ ಈ ನಾಲ್ಕು ಜಿಲ್ಲೆಯ ಜನರು ಒತ್ತಾಸೆಯಾಗಿತ್ತು. ಕೇಂದ್ರ ಸರ್ಕಾರ ಈ ಹೆದ್ದಾರಿಯನ್ನು ಉನ್ನತೀಕರಿಸಿ ದ್ವಿಪಥ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಿದ್ದು, ಈ ಭಾಗದ ಜನರಲ್ಲಿ ಬಹಳಷ್ಟು ಸಂತೋಷಪಟ್ಟಿದ್ದರು. ಆದರೆ, ಘೊಷಣೆಯಾಗಿ 6 ವರ್ಷಗಳು ಕಳೆದರೂ ಕಾಮಗಾರಿ ಪ್ರಾರಂಭವಾಗದಿರುವುದು ಈ ಭಾಗದ ಸಂಸದ, ಶಾಸಕರ ನಿರ್ಲಕ್ಷವೇ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ.
ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿಯು ಪ್ರತಿ ವರ್ಷದ ಮಳೆಗಾಲದಲ್ಲಿ ಕಿತ್ತು ಹೋಗುತ್ತದೆ. ಅದರ ದುರಸ್ತಿಗಾಗಿ ಕೋಟಿ-ಕೋಟಿ ಹಣವನ್ನು ವ್ಯಯಿಸಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಈ ಹೆದ್ದಾರಿಯ ದುರಸ್ತಿಗಾಗಿ ಖರ್ಚು ಮಾಡಿದ ಹಣದಲ್ಲಿ ದ್ವಿಪಥ ರಸ್ತೆ ನಿರ್ವಣವಾಗುತ್ತಿತ್ತು. ಇನ್ನಾದರೂ, ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಚಾಲನೆ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
2016ರಲ್ಲಿ ಕೇಂದ್ರ ಸರ್ಕಾರ ದೇಶದ ಒಟ್ಟು 2266 ಕಿಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿತ್ತು. ಕಾರವಾರ-ಕೈಗಾ- ಮುಂಡಗೋಡ-ಬಂಕಾಪೂರ-ಸವಣೂರ- ಗದಗ-ನರೇಗಲ್ಲ- ಗಜೇಂದ್ರಗಡ-ಇಲಕಲ್ಲ ರಾಜ್ಯ ಹೆದ್ದಾರಿ ಸಂಖ್ಯೆ 6ನ್ನು (318 ಕಿಮೀ) ಅನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಹಸಿರು ನಿಶಾನೆ ತೋರಿಸಲಾಗಿತ್ತು. ಅದರಂತೆ, 318ಕಿಮೀ ದ್ವಿಪಥ ರಸ್ತೆ ನಿರ್ವಣದ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲು 8 ತಿಂಗಳ ಕಾಲಾವಧಿಯನ್ನು ನೀಡಿ 09-12-2016 ರಂದು 12.48 ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿತ್ತು. ಅದರಂತೆ, ಕಾರವಾರ-ಇಳಕಲ್ಲ ಹೆದ್ದಾರಿಯ ಸಮಗ್ರ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಡಿ.2019 ಮತ್ತು ಜ.2020 ರಲ್ಲಿ ಉನ್ನತೀಕರಿಸಲಾಗಿದ್ದ ಎಲ್ಲ ರಸ್ತೆ ಕಾಮಗಾರಿಗಳ ಯೋಜನಾ ವರದಿಯ ಮರು ಪರಿಶೀಲನೆ ನಡೆಸಲಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ
ಯೋಜನೆಗಳನ್ನು ತಡೆ ಹಿಡಿಯಲಾಗಿದೆ ಎನ್ನಲಾಗಿತ್ತು. ಸದ್ಯ, ಕರೊನಾ ಆರ್ಭಟ ಮುಗಿದು ಹಲವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದರೂ ಕಾರವಾರ-ಇಳಕಲ್ಲ ಹೆದ್ದಾರಿ ಯೋಜನೆಗೆ ಮಾತ್ರ ಚಾಲನೆ ಸಿಗದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿಯು ರಾಜ್ಯದ ಒಂದು ಭಾಗವನ್ನು ಇನ್ನೊಂದು ಭಾಗಕ್ಕೆ ಸಂರ್ಪಸುವ ಅತ್ಯಂತ ಸರಳ, ಸಮೀಪದ ಹೆದ್ದಾರಿಯಾಗಿದೆ. ಇಳಕಲ್ಲನ ಗ್ರಾನೈಟ್ ರಫ್ತು ಮಾಡಲು ಕಾರವಾರ ಬಂದರು ಸಂರ್ಪಸುವ ಪ್ರಮುಖ ರಸ್ತೆಯಾಗಿದೆ. ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವುದರಿಂದ ನಾಲ್ಕು ಜಿಲ್ಲೆಗಳ ಆರ್ಥಿಕ, ವ್ಯಾಪಾರವಹಿವಾಟು, ಉದ್ಯಮಗಳು ಅಭಿವೃದ್ಧಿ ಹೊಂದುತ್ತವೆ. ಕೇಂದ್ರದಲ್ಲಿ ಮತ್ತು ರಾಜ್ಯ ದಲ್ಲಿ ಬಿಜೆಪಿ ಸರ್ಕಾರವಿದ್ದರೂ ಯೋಜನೆ ಜಾರಿ ಯಾಗದಿರುವುದು ಮಾತ್ರ ವಿಪರ್ಯಾಸವೇ ಸರಿ.| ಜಿ.ಎಸ್. ಪಾಟೀಲಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಕಾರವಾರ-ಇಳಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆಯು ಕರೊನಾ ಕಾರಣದಿಂದ ಹಿನ್ನಡೆಯಾಗಿದೆ. ಆದರೂ, ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದ ವೈಯಕ್ತಿಕವಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗರ ಮಾಲಾ ಎರಡನೇ ಹಂತದಲ್ಲಿ ಕಾರವಾರ-ಇಳಕಲ್ಲ ಹೆದ್ದಾರಿಯನ್ನು ಪರಿಗಣಿಸುವಂತೆ ಒತ್ತಡ ತರಲಾಗುತ್ತಿದೆ.| ಶಿವಕುಮಾರ ಉದಾಸಿ ಸಂಸದ
========