ಡಿ.2, 3ರಂದು ನವದೆಹಲಿಯಲ್ಲಿ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನ

v.raju press meet
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ಮಾತನಾಡಿದರು.
Published on

ಶಿವಮೊಗ್ಗ: ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನವು ಡಿ.2ಮತ್ತು 3ರಂದು ನವದೆಹಲಿಯ ಪುಸಾ ರಸ್ತೆಯ ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ ಮೇಳದ ಮೈದಾನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ತಿಳಿಸಿದರು.

ರಾಷ್ಟ್ರೀಯ ಅಧಿವೇಶನದಲ್ಲಿ ಕರ್ನಾಟಕದಿಂದ 2 ಸಾವಿರ ಸಹಕಾರಿಗಳು ಪಾಲ್ಗೊಳ್ಳುವ ಗುರಿ ಹೊಂದಿದ್ದು, ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಮಂದಿ ಸಹಕಾರಿಗಳು ಹೆಸರು ನೋಂದಣಿ ಮಾಡಿ ದೆಹಲಿಗೆ ಹೊರಟಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರೆಡಿಟ್ ಸೊಸೈಟಿಗಳ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಅಧಿವೇಶನ ಕರೆಯಲಾಗಿದೆ. ಸಹಕಾರಿ ಖಾತೆಯನ್ನೂ ಹೊಂದಿರುವ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಅಧಿವೇಶನ ನಡೆಯಲಿದೆ ಎಂದರು.
ಎಲ್ಲ ಕ್ರೆಡಿಟ್ ಸೊಸೈಟಿಗಳಿಗೆ ಡಿಪಾಸಿಟ್ ಇನ್ಯೂರೆನ್ಸ್ ಲಾಭ ಸಿಗಬೇಕು. ಆದಾಯ ತೆರಿಗೆ ಕಾಯ್ದೆಯಲ್ಲಿ ಕ್ರೆಡಿಟ್ ಸೊಸೈಟಿಗಳಿಗೆ ವಿನಾಯತಿ ಸಿಗಬೇಕು. ಎಲ್ಲ ಪ್ರದೇಶ ಹಾಗೂ ಕೇಂದ್ರದಲ್ಲಿ ಕ್ರೆಡಿಟ್ ಸೊಸೈಟಿಗಳಿಗೆ ಜಾಗರೂಕ ಲೆಕ್ಕಪರಿಶೋಧಕ ಮಾನದಂಡವನ್ನು ಜಾರಿಗೊಳಿಸಬೇಕು. ಸೊಸೈಟಿಗಳಿಗೆ ರಾಷ್ಟ್ರೀಯ ಪಾವತಿ ಗೇಟ್ ವೇ ವ್ಯವಸ್ಥೆಯ ಸದಸ್ಯತ್ವ ಸಿಗಬೇಕು ಹಾಗೂ ಸಿಬಿಲ್ ವ್ಯವಸ್ಥೆಯ ಲಾಭ ಸಿಗಬೇಕು. ಕ್ರೆಡಿಟ್ ಸೊಸೈಟಿಗಳಿಗೆ ಸ್ವ-ನಿಬಂಧನೆಯ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮಾರ್ಗವನ್ನು ವಿಸ್ತರಿಸುವುದು ಸೇರಿ ಪ್ರಮುಖ ಬೇಡಿಕೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಕ್ರೆಡಿಟ್ ಸೊಸೈಟಿಗಳನ್ನು ಆದಾಯ ತೆರಿಗೆಯಿಂದ ವಿನಾಯತಿ ನೀಡಲು ಸುಪ್ರೀಂಕೋರ್ಟ್ ಸಹ ಸೂಚನೆ ನೀಡಿರುವುದರಿಂದ ಈ ಬಗ್ಗೆ ಸೂಕ್ತ ನಿರ್ಣಯ ಅಧಿವೇಶನದಲ್ಲಿ ಸಿಗುವ ವಿಶ್ವಾಸವಿದೆ ಎಂದರು. ಸಹಕಾರಿಗಳಾದ ಪಿ. ಬಾಲಪ್ಪ, ಗಂಧದ ಮನೆ ನರಸಿಂಹ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net